ಮದ್ಯದಂಗಡಿ ತೆರವಿಗೆ ಒತ್ತಾಯಿಸಿ ಪ್ರತಿಭಟನೆ


ವಿಜಯವಾಣಿ ಸುದ್ದಿಜಾಲ ಚನ್ನರಾಯಪಟ್ಟಣ
ಮದ್ಯವ್ಯಸನಿಗಳ ಅಸಭ್ಯ ವರ್ತನೆಯಿಂದ ಬೇಸತ್ತ ಸಾರ್ವಜನಿಕರು ಮದ್ಯದಂಗಡಿಯನ್ನು ಶೀಘ್ರವೇ ತೆರವುಗೊಳಿಸಬೇಕು ಎಂದು ಒತ್ತಾಯಿಸಿ ತಾಲೂಕಿನ ಉದಯಪುರ ಗ್ರಾಮದಲ್ಲಿರುವ ಮದ್ಯದ ಅಂಗಡಿಯ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.
ಮದ್ಯದ ಅಂಗಡಿ ಇರುವುದರಿಂದ ಸ್ಥಳೀಯರು ನಿಶ್ಚಿಂತೆಯಿಂದ ವಾಸ ಮಾಡಲು ಸಾಧ್ಯವಾಗುತ್ತಿಲ್ಲ. ಮಧ್ಯಾಹ್ನದಿಂದಲೇ ಕುಡುಕರ ಹಾವಳಿ ಶುರುವಾಗುತ್ತದೆ. ಕುಡಿದ ಬಳಿಕ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಇದರಿಂದ ಮಹಿಳೆಯರು, ಮಕ್ಕಳು ಓಡಾಡುವುದು ಸಮಸ್ಯೆಯಾಗಿದೆ ಎಂದು ಪ್ರತಿಭಟನೆಯಲ್ಲಿ ನಿರತವಾಗಿದ್ದ ಮಹಿಳೆಯರು ದೂರಿದರು.
ಸಂಜೆ ಹೊತ್ತು ಮಹಿಳೆಯರು ಮನೆಯಿಂದ ಹೊರ ಬರುವುದೇ ಕಷ್ಟವಾಗಿದೆ. ಮದ್ಯದಂಗಡಿಯ ಪಕ್ಕದಲ್ಲಿಯೇ ಕುಡಿಯುವ ನೀರಿನ ತೊಂಬೆ ಇದ್ದು, ಬಿಂದಿಗೆ ಹಿಡಿದು ನೀರಿಗಾಗಿ ಬರುವ ಹೆಣ್ಣು ಮಕ್ಕಳೊಂದಿಗೆ ಅಸಭ್ಯವಾಗಿ ವರ್ತಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಮೀನಿನಲ್ಲಿ ಮಹಿಳಾ ಕಾರ್ಮಿಕರು ಕೆಲಸ ಮಾಡುವುದು ದುಸ್ತರವಾಗಿದೆ. ಕುಡಿದ ಮತ್ತಿನಲ್ಲಿ ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾರೆ. ರೈತ ಮಹಿಳೆಯರು ಹೊಲಗಳಲ್ಲಿ ಒಂಟಿಯಾಗಿ ಕೆಲಸ ಮಾಡಲು ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸೆ.13 ರಂದೇ ಮದ್ಯದಂಗಡಿಯನ್ನು ತೆರವುಗೊಳಿಸುತ್ತೇವೆಂದು ಮಾಲೀಕರು ಗ್ರಾಮಸ್ಥರ ಮುಂದೆ ಭರವಸೆ ನೀಡಿದ್ದರು. ಆದರೆ, ಇನ್ನೂ ತೆರವುಗೊಳಿಸಿಲ್ಲ. ಏನು ಬೇಕಾದರೂ ಮಾಡಿಕೊಳ್ಳಿ ಎಂದು ಉಡಾಫೆಯಿಂದ ಮಾತನಾಡುತ್ತಿದ್ದಾರೆ. ಮದ್ಯದಂಗಡಿ ತೆರವುಗೊಳಿಸದಿದ್ದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕುಮಾರ್, ಸುಮಿತ್ರಾ, ರಂಗಮ್ಮ, ರಾಜು ಸೇರಿದಂತೆ ಮಹಿಳೆಯರು-ಮಕ್ಕಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 

Leave a Reply

Your email address will not be published. Required fields are marked *