ತರೀಕೆರೆ: ಸೊಲ್ಲಾಪುರದಲ್ಲಿ ಶಿವಯೋಗಿ ಶ್ರೀಗುರು ಸಿದ್ಧರಾಮೇಶ್ವರರ 847ನೇ ಜಯಂತ್ಯುತ್ಸವಕ್ಕೆ ಮಂಗಳವಾರ ಅದ್ಧೂರಿ ಚಾಲನೆ ದೊರಕಿದೆ. ಯಳನಾಡು ಮಹಾಸಂಸ್ಥಾನದ ಶ್ರೀ ಜ್ಞಾನಪ್ರಭು ಸಿದ್ಧರಾಮ ದೇಶಿಕೇಂದ್ರ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಬೆಳಗ್ಗೆ 7ಕ್ಕೆ ಷಟ್ಸ್ಥಲ ಧ್ವಜಾರೋಹಣ ನೆರವೇರಿತು. ನೊಳಂಬ ಲಿಂಗಾಯತ ಸಂಘದ ರಾಜ್ಯಾಧ್ಯಕ್ಷ ಎಸ್.ಎಂ.ನಾಗರಾಜ್ ನಂದಿಧ್ವಜ ಹಾರಿಸಿದರು.
ಬೆಳಗ್ಗೆ 8ಕ್ಕೆ ಸೊಲ್ಲಾಪುರ ಸಮೀಪದ ತಮ್ಮಟದಹಳ್ಳಿ ಗೇಟ್ನಿಂದ ಶ್ರೀಸಿದ್ಧರಾಮರ ಅಡ್ಡಪಲ್ಲಕ್ಕಿ ಉತ್ಸವ 1008 ಪೂರ್ಣ ಕುಂಭದೊಂದಿಗೆ ಶ್ರೀಸ್ವಾಮಿಯ ಅಡ್ಡಪಲ್ಲಕ್ಕಿಯನ್ನು ನಡೆ ಮಡಿ ಮೇಲೆ ಹೊತ್ತು ಭಕ್ತರು ಸಾಗಿದರು. 1008 ಮಹಿಳೆಯರು ಪೂರ್ಣಕುಂಭವನ್ನು ಶಿರದ ಮೇಲೆ ಹೊತ್ತು ತಮ್ಮಟದಹಳ್ಳಿ ಗೇಟ್ನಿಂದ ಅಕ್ಕನಾಗಲಾಂಬಿಕೆ ವೇದಿಕೆಗೆ 20ಕ್ಕೂ ಹೆಚ್ಚು ಭಜನಾ ತಂಡಗಳ ಜತೆ ಆಗಮಿಸಿದರು.
2 ಗಂಟೆಗೂ ಹೆಚ್ಚು ಕಾಲ ನಡೆದ ಅಡ್ಡಪಲ್ಲಕ್ಕಿ ಉತ್ಸವಕ್ಕೆ ಗೊರವಿನ ಕುಣಿತ, ಡೊಳ್ಳು ಕುಣಿತ, ಚೋಮನ ಕುಣಿತ, ನಂದಿಧ್ವಜ ಕುಣಿತ, ಮುದ್ರೆ ಬಸವಗಳು, ನಗಾರಿ ವಾದ್ಯ, ಚಿಟ್ಟಿಮೇಳ, ಚಂಡೆವಾದ್ಯ, ಕೀಲು ಕುದುರೆ, ವೀರಗಾಸೆ ಸೇರಿದಂತೆ ವಿವಿಧ ಜಾನಪದ ತಂಡಗಳು ಮೆರಗು ನೀಡಿದವು.