Clay ornaments | ನಮ್ಮ ಸುತ್ತಮುತ್ತ ದೊರೆಯುವ ಮಣ್ಣನ್ನೇ ಬಳಸಿ ವಾರಗಟ್ಟಲೆ ನೀರಿನಲ್ಲಿ ನೆನೆ ಹಾಕಿ, ಬಟ್ಟೆಯಿಂದ ಸೋಸುತ್ತಾರೆ. ಆಗ ಸಿಗುವ ನುಣುಪಾದ ಮಣ್ಣನ್ನು ಒಂದೆಡೆ ಸಂಗ್ರಹಿಸಿ, ಅದನ್ನು ಒಣಗಿಸಿಕೊಂಡು, ಮತ್ತೆ ಹಿಟ್ಟಿನ ಹದಕ್ಕೆ ತರುತ್ತಾರೆ.
ಮಣ್ಣು ಎಂದು ಮೂಗು ಮುರಿಯೋರು, ಮಣ್ಣಿನಿಂದಲೂ ಚೆಂದದ ಮೂಗುತಿ ಮಾಡಬಹುದು ಎಂದು ಅರಿತು, ತಮ್ಮ ಮೂಗಿನ ಮೇಲೆ ಬೆರಳಿಟ್ಟುಕೊಂಡು ಅಚ್ಚರಿ ಪಡಬಹುದು. ಮಾನಿನಿಯರ ಅಂದ ಹೆಚ್ಚಿಸುವುದರಲ್ಲೂ ಮಣ್ಣು ಮಹತ್ವದ ಪಾತ್ರ ವಹಿಸುತ್ತಿದೆ. ಲೋಹಗಳ ಉತ್ಪಾದನೆ- ಬಳಕೆ ಇಲ್ಲದ ಕಾಲದಲ್ಲಿ ನಮ್ಮ ಪೂರ್ವಜರು ಕಲ್ಲು, ಮಣ್ಣಿನಲ್ಲಿ ಮಾಡಿದ ಆಭರಣಗಳನ್ನು ಧರಿಸುತ್ತಿದ್ದರು. ಮಣ್ಣಿನ ಆಭರಣಗಳು ಪರಿಸರ ಸ್ನೇಹಿಯಾಗಿದ್ದು, ದೇಹಕ್ಕೆ, ಪರಿಸರಕ್ಕೆ ಯಾವುದೇ ಹಾನಿ ಉಂಟು ಮಾಡುವುದಿಲ್ಲ. ಬದಲಾಗಿ ದೇಹಕ್ಕೆ ಪಾಸಿಟಿವ್ ಶಕ್ತಿಯನ್ನು ಕೊಡುತ್ತವೆ.
ಮೈಸೂರಿನ ನೀಲಿ ಲೋಹಿತ್ ಅವರು ಈ ಮಣ್ಣಿನಿಂದಲೇ ಜೀವನ ಕಟ್ಟಿಕೊಂಡಿದ್ದಾರೆ. ಬದುಕಿನ ಏರುಪೇರುಗಳಿಂದ ವಿಚಲಿತರಾಗದೇ ಸಮಸ್ಯೆಗಳನ್ನು ಮೆಟ್ಟಿ ನಿಂತ ನೀಲಿ ಅವರ ಕೈಹಿಡಿದದ್ದು ಮಣ್ಣಿನ ಆಭರಣಗಳನ್ನು ತಯಾರಿಸುವ ಕಲೆ. ಪತಿಯಿಂದ ಈ ಕಲೆಯನ್ನು ‘ಹಾಗೇ ಸುಮ್ಮನೆ’ ಕಲಿಯುವಾಗ ಅವರಿಗೆ ಮುಂದೊಂದು ದಿನ ತಾನು ಇದರದೇ ವ್ಯಾಪಾರ ಮಾಡಬಹುದು, ಇದರಿಂದಲೇ ಜೀವನ ಕಟ್ಟಿಕೊಳ್ಳಬಹುದು ಎಂಬ ಕಲ್ಪನೆ ಇರಲಿಲ್ಲ. ಮುಂಚೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅವರು ಭಾನುವಾರ ಮತ್ತು ಇತರ ರಜಾದಿನಗಳಲ್ಲಿ ಮಾತ್ರ ಮಣ್ಣಿನ ಆಭರಣಗಳನ್ನು ತಯಾರಿಸುತ್ತಿದ್ದರು. ಪತಿ ಲೋಹಿತ್ ಕೆಲ ವರ್ಷಗಳ ಹಿಂದೆ ಕರೊನಾ ಸೋಂಕಿಗೆ ಒಳಗಾಗಿ ಮೃತಪಟ್ಟ ಬಳಿಕ, ನೀಲಿ ಅವರು ನೀಲಿ ಕಲಾ ಫೌಂಡೇಶನ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ, ಮಣ್ಣಿನ ಆಭರಣಗಳ ತಯಾರಿಕೆ ಮತ್ತು ಮಾರಾಟವನ್ನೇ ಒಂದು ಉದ್ಯಮವಾಗಿ ಬೆಳೆಸಿದ್ದಾರೆ.
ಎಲ್ಲೆಡೆ ಬೇಡಿಕೆ
ನೀಲಿ ಅವರ ಮಣ್ಣಿನ ಆಭರಣಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಆ ಮೂಲಕ ಸಾವಿರಾರು ಆಭರಣಗಳು ಮಾರಾಟವೂ ಆಗಿವೆ. ಕರ್ನಾಟಕದ ಮೂಲೆಮೂಲೆಗಳಲ್ಲಿ ಇವರ ಮಣ್ಣಿನ ಆಭರಣಗಳನ್ನು ಧರಿಸುವವರು ಇದ್ದಾರೆ. ಅಷ್ಟೇ ಅಲ್ಲ, ಕ್ಯಾಲಿಫೋರ್ನಿಯಾ, ಲಂಡನ್ ಮತ್ತಿತರ ಕಡೆಗೂ ಈ ಆಭರಣಗಳು ರಫ್ತಾಗಿವೆ.
ತರಬೇತಿ, ಪ್ರದರ್ಶನ, ಪ್ರಶಸ್ತಿ
ಯಾರೇ ಆಸಕ್ತಿಯಿಂದ ಬಂದು ಕೇಳಿದರೂ ಅವರಿಗೆ ಈ ಕಲೆಯನ್ನು ಹೇಳಿಕೊಡುತ್ತಾರೆ ನೀಲಿ. ಈವರೆಗೆ 400ಕ್ಕಿಂತ ಅಧಿಕ ಹೆಣ್ಣುಮಕ್ಕಳಿಗೆ 20ಕ್ಕೂ ಹೆಚ್ಚು ಬ್ಯಾಚ್ಗಳಲ್ಲಿ ಕಲಿಸಿದ್ದಾರೆ. ಆನ್ಲೈನ್ ಮುಖಾಂತರವೂ ಹಲವರಿಗೆ ತರಬೇತಿ ನೀಡಿದ್ದಾರೆ. ಈ ಕಲೆಯನ್ನು ಕಲಿತ ಹಲವಾರು ಹೆಣ್ಣುಮಕ್ಕಳು ಸ್ವಂತ ಉದ್ಯಮವನ್ನು ಆರಂಭಿಸಿದ್ದಾರೆ. ಅಮೆರಿಕ, ಬ್ರಿಟನ್, ಉಗಾಂಡಾ ಮತ್ತಿತರ ದೇಶಗಳ ಹೆಣ್ಣುಮಕ್ಕಳು ಕಲಿತು, ತಮ್ಮ ದೇಶದಲ್ಲಿ ಇವುಗಳನ್ನು ಪ್ರದರ್ಶನ ಮಾಡಿದ್ದಾರೆ. ನೀಲಿ ಅವರು ಮೈಸೂರು, ಬೆಂಗಳೂರು, ಧಾರವಾಡ ಮುಂತಾದ ಕಡೆ ತಮ್ಮ ಕಲೆಯನ್ನು ಪ್ರದರ್ಶನ ಮಾಡಿದ್ದಾರೆ. ನೀಲಿ ಅವರ ವಿಶಿಷ್ಟ ಕಲೆಗೆ, ಸಾಧನೆಗೆ ‘ಮಹಿಳಾ ಸಾಧಕಿ’ ಸೇರಿದಂತೆ ಅನೇಕ ಪ್ರಶಸ್ತಿ, ಪುರಸ್ಕಾರಗಳು, ಸನ್ಮಾನಗಳು ಒಲಿದು ಬಂದಿವೆ.
ಈ ಮಣ್ಣಿನ ಆಭರಣಗಳನ್ನು ತಯಾರಿಸಲು ಮುಖ್ಯವಾಗಿ ಬೇಕಾಗುವ ಸಾಮಗ್ರಿಗಳೆಂದರೆ ಮಣ್ಣು, ವೈರ್, ಬಣ್ಣಗಳು, ದಾರ ಮತ್ತು ತಂತಿಗಳು. ನೀಲಿ ಅವರು ಜೇಡಿಮಣ್ಣು, ಕಪ್ಪುಮಣ್ಣು, ಮರಳುಮಿಶ್ರಿತ ಮಣ್ಣನ್ನು ಬಳಸದೇ ಸಾಮಾನ್ಯವಾಗಿ ನಮ್ಮ ಸುತ್ತಮುತ್ತ ದೊರೆಯುವ ಮಣ್ಣನ್ನೇ ಬಳಸುತ್ತಾರೆ. ಅದನ್ನು ವಾರಗಟ್ಟಲೆ ನೀರಿನಲ್ಲಿ ನೆನೆ ಹಾಕಿ, ಬಟ್ಟೆಯಿಂದ ಸೋಸುತ್ತಾರೆ. ಆಗ ಸಿಗುವ ನುಣುಪಾದ ಮಣ್ಣನ್ನು ಒಂದೆಡೆ ಸಂಗ್ರಹಿಸಿ, ಅದನ್ನು ಒಣಗಿಸಿಕೊಂಡು, ಮತ್ತೆ ಹಿಟ್ಟಿನ ಹದಕ್ಕೆ ತರುತ್ತಾರೆ. ನಂತರ ಅದಕ್ಕೆ ಆಭರಣದ ರೂಪವನ್ನು ಕೊಡುತ್ತಾರೆ. ಕೆಲ ಕಾಲ ನೆರಳಿನಲ್ಲಿ ಒಣಗಿಸುತ್ತಾರೆ. ಬಳಿಕ, ಅಗತ್ಯ ತಾಪಮಾನದಲ್ಲಿ ಬೆಂಕಿಯಿಂದ ಸುಟ್ಟು ನೈಸರ್ಗಿಕವಾದ ವಿವಿಧ ಬಣ್ಣಗಳನ್ನು ಹಚ್ಚುತ್ತಾರೆ. ನಂತರ ಪೋಣಿಸುವ ಕೆಲಸ ಮಾಡಿ, ಆಕರ್ಷಕ ಆಭರಣವನ್ನಾಗಿ ಮಾರ್ಪಡಿಸುತ್ತಾರೆ. ಇಷ್ಟೆಲ್ಲ ಮಾಡುವುದಕ್ಕೆ ಬೇಕಾಗುವ ಅಂದಾಜು ಸಮಯ – ಎರಡು ವಾರ!
ಮಣ್ಣಿನ ಆಭರಣಗಳನ್ನು ತಯಾರಿಸುವುದಕ್ಕೆ ಹೆಚ್ಚಿನ ಬಂಡವಾಳದ ಅವಶ್ಯಕತೆ ಇರುವುದಿಲ್ಲ. ಆಸಕ್ತಿ, ಕ್ರಿಯಾಶೀಲತೆ, ಸೃಜನಶೀಲತೆ ಇದ್ದರೆ ಸಾಕು. ಹಬ್ಬ ಹರಿದಿನಗಳಲ್ಲಿ ಹೆಚ್ಚು ಬೇಡಿಕೆ ಇರುತ್ತದೆ. ಗ್ರಾಹಕರ ನಿರೀಕ್ಷೆಗಳು ಒಂದಕ್ಕಿಂತ ಒಂದು ಭಿನ್ನವಾಗಿರುತ್ತವೆ. ಅವುಗಳೆಲ್ಲವನ್ನೂ ತಾಳ್ಮೆಯಿಂದ, ನಿಧಾನವಾಗಿ ಕೇಳಿಸಿಕೊಂಡು, ಅವರ ನಿರೀಕ್ಷೆ ಹುಸಿಯಾಗದಂತೆ ಕಾರ್ಯಮಗ್ನಳಾಗುತ್ತೇನೆ.
| ನೀಲಿ ಲೋಹಿತ್
ಸೃಜನಶೀಲತೆ, ಸಮಯ, ಅಪಾರ ತಾಳ್ಮೆ ಇದ್ದರೆ ಮಾತ್ರ ಈ ಕಲೆಯಿಂದ ಅದ್ಭುತವಾದ ಕಲಾಕೃತಿ ಹೊರಹೊಮ್ಮಲು ಸಾಧ್ಯ. ಈವರೆಗೆ ಸಾವಿರಕ್ಕೂ ಹೆಚ್ಚು ವಿನ್ಯಾಸದ ಮಣ್ಣಿನ ಆಭರಣಗಳನ್ನು ನೀಲಿ ತಯಾರಿಸಿದ್ದಾರೆ. ಮೂಗುತಿ, ಜುಮ್ಕಾ, ಕಾಲಿನಗೆಜ್ಜೆ, ಸೊಂಟದ ಪಟ್ಟಿ, ತೋಳಬಂದಿ, ಬೈತಲೆ ಬೊಟ್ಟು, ಕತ್ತಿನ ಸರ… ಹೀಗೆ ಬಗೆಬಗೆಯ ಆಭರಣಗಳನ್ನು ಮಾಡಿದ್ದಾರೆ. ಉತ್ತರ ಕರ್ನಾಟಕ, ಕೊಡಗು, ಮೈಸೂರು, ಮಂಡ್ಯ ಮುಂತಾದೆಡೆಯ ತರಹೇವಾರಿ ಶೈಲಿಯ ಸರಗಳನ್ನು ಮಾಡುವುದರಲ್ಲಿ ಪರಿಣತರಾಗಿದ್ದಾರೆ. ಸಾಮಾನ್ಯ ದಿನಗಳಲ್ಲಿ, ಮದುವೆ ಮತ್ತಿತರ ಶುಭ ಸಮಾರಂಭಗಳಲ್ಲಿ ಬಳಸಬಹುದಾದ ಎಲ್ಲ ಬಗೆಯ ಆಭರಣಗಳನ್ನು ನೀಲಿ ತಯಾರಿಸುತ್ತಾರೆ. ಅಷ್ಟೇ ಅಲ್ಲ, ತಾವು ಮಾಡಿದ ವಿವಿಧ ಆಭರಣಗಳಿಗೆ ತಾವೇ ಮಾಡೆಲ್ ಆಗುತ್ತಾರೆ. ಚೆಂದದ ಹಾಡಿಗೆ ಚೆಂದವಾಗಿ ಅಭಿನಯಿಸಿ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಾರೆ. ನೀಲಿ ಅವರ ಸಂಪರ್ಕ ಸಂಖ್ಯೆ 7676960671.