ಮಹಿಳಾ ಸಬಲೀಕರಣ ಮಸೂದೆಗಳ ಜಾರಿಗೆ ಕಾಂಗ್ರೆಸ್ ಬೆಂಬಲ ಕೋರಿದ ಬಿಜೆಪಿ

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಬುಧವಾರದಿಂದ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಮಹಿಳಾ ಸಬಲೀಕರಣಕ್ಕೆ ಸಂಬಂಧಪಟ್ಟಂತೆ ಕೆಲವು ಮಹತ್ವದ ಮಸೂದೆಗಳ ಜಾರಿಗೆ ಸಹಕಾರ ನೀಡುವಂತೆ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್​ಗೆ ಆಡಳಿತಾರೂಢ ಬಿಜೆಪಿ ಮನವಿ ಮಾಡಿದೆ.

ಮಹಿಳಾ ಮೀಸಲಾತಿ, ತ್ರಿವಳಿ ತಲಾಕ್​ ಮತ್ತು ನಿಖಾ ಹಲಾಲ್​ ನಿಯಂತ್ರಣ ಮಸೂದೆ ಅನುಷ್ಠಾನಕ್ಕೆನೀವು ಕೈ ಜೋಡಿಸಿ ಎಂದು ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿಗೆ ಸರ್ಕಾರ ಪತ್ರ ಬರೆದಿದೆ.

ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿಗೆ ಲಿಖಿತ ರೂಪದಲ್ಲಿ ಮನವಿ ಮಾಡಿರುವ ಕಾನೂನು ಸಚಿವ ರವಿಶಂಕರ್​ ಪ್ರಸಾದ್​, ಈ ಮೇಲಿನ ಮೂರು ಮಸೂದೆಗಳನ್ನು ಜಾರಿಗೊಳಿಸಲು ಬಿಜೆಪಿ, ಕಾಂಗ್ರೆಸ್​ ಒಂದಾಗಿ ಕೆಲಸ ಮಾಡಬೇಕು. ಅಲ್ಲದೆ, ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ಕೊಡಲು ಒಟ್ಟಾಗಿ ಶ್ರಮಿಸಬೇಕು ಎಂದಿದ್ದಾರೆ.

ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ನೀಡಲು ಒತ್ತಾಯಿಸಿ ರಾಹುಲ್​ ಗಾಂಧಿ ಪ್ರಧಾನಿ ಮೋದಿಗೆ ಬರೆದಿದ್ದ ಪತ್ರಕ್ಕೂ ರವಿಶಂಕರ್​ ಪ್ರಸಾದ್​ ಉತ್ತರ ನೀಡಿದ್ದಾರೆ. ತಮ್ಮ ಸಚಿವಾಲಯ ಶಾಸಕಾಂಗ ಮತ್ತು ವೈಯಕ್ತಿಕ ಕಾನೂನುಗಳ ಮೀಸಲಾತಿ ಬಗ್ಗೆಯೂ ಗಮನ ಹರಿಸುತ್ತಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಮಹಿಳಾ ಮೀಸಲಾತಿ ಮಸೂದೆಯನ್ನು ಈ ಬಾರಿಯ ಅಧಿವೇಶನದಲ್ಲಿ ಪಾಸ್​ ಮಾಡಬೇಕು. ಇದಕ್ಕಾಗಿ ಕಾಂಗ್ರೆಸ್​ ಬೇಷರತ್ತು ಬೆಂಬಲ ನೀಡುತ್ತದೆ. ವಿಧಾನಸಭೆಗಳು ಹಾಗೂ ಲೋಕಸಭೆಯಲ್ಲಿ ಮಹಿಳೆಯರು ತಮ್ಮ ಸ್ಥಾನಗಳನ್ನು ಪಡೆಯುವಂತಾಗಬೇಕು ಎಂದು ರಾಹುಲ್​ ಗಾಂಧಿ ಸೋಮವಾರ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದರು.