ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಮಹಿಳೆಯರದ್ದೇ ಸಿಂಹಪಾಲು

ಸುಂಟಿಕೊಪ್ಪ: ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಮಹಿಳೆಯರದೇ ಸಿಂಹಪಾಲು ಎಂದು ಸಂತ ಅಂತೋಣಿ ದೇವಾಲಯದ ಧರ್ಮಗುರು ಫಾದರ್ ಎಡ್ವರ್ಡ್ ವಿಲಿಯಂ ಸಾಲ್ಡಾನಾ ಹೇಳಿದರು.

ಸಂತ ಅಂತೋಣಿ ಶಾಲಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಕ್ಷೇತ್ರದಲ್ಲಿ ಪ್ರಪಂಚದಾದ್ಯಂತ ಹೆಚ್ಚಿನ ಮಹಿಳೆಯರೇ ತೊಡಗಿಸಿಕೊಂಡಿದ್ದಾರೆ. ಆರೋಗ್ಯ ಇಲಾಖೆಯಲ್ಲೂ ದಾದಿಯರೇ ಅಧಿಕವಾಗಿದ್ದು, ಈ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಇವರ ಪಾತ್ರ ಮಹತ್ವದ್ದು ಎಂದು ಬಣ್ಣಿಸಿದರು.

ಮಹಿಳಾ ಮತ್ತು ಮಕ್ಕಳ ಸಮಿತಿ ಅಪ್ತ ಸಮಾಲೋಚಕಿ ಸಿಸ್ಟರ್ ಮಿಲಾಗ್ರಿಸ್ ಮಾತನಾಡಿ, ಮಕ್ಕಳ ಪಾಲನೆ-ಪೋಷಣೆ, ಶಿಕ್ಷಣ ಮತ್ತು ಸಂಸ್ಕಾರ ಕಲಿಕೆಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು ಎಂದರು.
ವಿದ್ಯಾರ್ಥಿಗಳು ಹಾದಿ ತಪ್ಪುತ್ತಿರುವ ಇಂದಿನ ಕಾಲಘಟ್ಟದಲ್ಲಿ ಪಾಲಕರು ಅದರಲ್ಲೂ ಗೃಹಿಣಿಯರ ಜವಾಬ್ದಾರಿ ಹೆಚ್ಚಿದೆ. ಮಕ್ಕಳ ಸರ್ವತೋಮುಖ ಏಳಿಗೆಯಲ್ಲಿ ಮಹಿಳೆಯ ಪಾತ್ರ ಅನನ್ಯವಾದುದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ವಲಯ ಮೇಲ್ವಿಚಾರಕ ಗುರುಗಳಾದ ಫಾದರ್ ಲೈನ್ಸ್ ಮೊರೆಸ್, ಯಾವುದೇ ಸಮಸ್ಯೆಯನ್ನು ವೈಯಕ್ತಿಕ ನೆಲೆಗಟ್ಟಿನಲ್ಲಿ ನೋಡದೆ, ವಿಶಾಲ ಮನೋಭಾವನೆಯಿಂದ ಬಗೆಹರಿಸಲು ಮಹಿಳೆಯರು ಮುಂದೆ ಬರಬೇಕು. ಈ ವೇದಿಕೆ ಮಹಿಳಾ ದಿನಾಚರಣೆಗೆ ಸೀಮಿತವಾಗದೆ ಮಹಿಳೆಯರ ಅಭಿವೃದ್ಧಿಗೆ ಪೂರಕವಾಗಬೇಕೆಂದರು.

ಜೂಡಿತ್ ಮಸ್ಕಾರನೇಸ್, ಡಿಕ್ಕನ್ ಪ್ರಾನ್ಸಿಸ್ ಜಾಕ್ಸನ್, ಬ್ರದರ್ ಜಾನ್ ಸಂತಕ್ಲಾರ ಕನ್ಯಾಸ್ತ್ರೀಮಠದ ಮದರ್ ಸೂಪಿರಿಯರ್ ಸಿಸ್ಟರ್ ವೈಲೆಟ್, ರೀಟಾ ಸೆಲ್ವರಾಜ್ ಇದ್ದರು. ಮಹಿಳೆಯರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.