ರೈಲು ಹಳಿಯಲ್ಲಿ ಮಹಿಳೆ ಶವ ಪತ್ತೆ

ರಾಣೆಬೆನ್ನೂರ: ನಗರದ ಗಂಗಾಪುರ ರಸ್ತೆಯ ಕೊಟ್ರೇಶ್ವರ ಮಠದ ಸಮೀಪದ ರೈಲು ಹಳಿಯಲ್ಲಿ ಸೋಮವಾರ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ.

ಮೃತರನ್ನು ಉಮಾಶಂಕರ ನಗರದ ಸಾವಿತ್ರಾ ಮಂಜುನಾಥ ಬೆನ್ನೂರ (35) ಎಂದು ಗುರುತಿಸಲಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ರೈಲ್ವೆ ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಹುಬ್ಬಳ್ಳಿ ರೈಲ್ವೆ ಡಿವೈಎಸ್​ಪಿ ಬಿ.ಬಿ. ಪಾಟೀಲ, ಸಿಪಿಐ ಕಿರಣಕುಮಾರ ವಿ. ಕಾಂಬಳೆ, ಪಿಎಸ್​ಐ ಶಾಲಂ ಹುಸೇನ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಾಪತ್ತೆ ದೂರು ನೀಡಲು ತೆರಳಿದ್ದ ಪತಿ..: ಕೇಬಲ್ ಆಪರೇಟರ್ ಆಗಿದ್ದ ಮಂಜುನಾಥ ಬೆನ್ನೂರ ತನ್ನ ಪತ್ನಿ ಸಾವಿತ್ರಾ ಕಾಣೆಯಾಗಿರುವ ಕುರಿತು ನಗರ ಠಾಣೆಗೆ ದೂರು ಸಲ್ಲಿಸಲು ತೆರಳಿದ್ದರು. ಇದೇ ಸಂದರ್ಭದಲ್ಲಿ ರೈಲ್ವೆ ಪೊಲೀಸರು ಅಪರಿಚಿತ ಶವ ಪತ್ತೆಯಾಗಿದೆ ಎಂದು ನಗರ ಠಾಣೆಗೆ ಮಾಹಿತಿ ನೀಡಿದ್ದಾರೆ. ದೂರು ನೀಡಲು ಆಗಮಿಸಿದ್ದ ಮಂಜುನಾಥ ಅವರೊಂದಿಗೆ ಪೊಲೀಸರು ಸ್ಥಳಕ್ಕೆ ತೆರಳಿದಾಗ ಮಂಜುನಾಥ ಶವವನ್ನು ಸಾವಿತ್ರಾಳದ್ದೇ ಎಂದು ಗುರುತಿಸಿದ್ದಾರೆ.

ನನ್ನ ಮಗಳು ಧೈರ್ಯವಂತೆ…: ಸಾವಿತ್ರಾ ಆತ್ಮಹತ್ಯೆ ಮಾಡಿಕೊಳ್ಳುವವಳಲ್ಲ. ನನ್ನ ಮಗಳ ಸಾವಿಗೆ ಅನುಮಾನ ವ್ಯಕ್ತವಾಗುತ್ತಿದೆ. ಪೊಲೀಸರು ಸೂಕ್ತ ತನಿಖೆ ನಡೆಸಿ ಸಾವಿಗೆ ನ್ಯಾಯ ಒದಗಿಸಬೇಕು. ಹಾಲುಗಲ್ಲದ ಕಂದಮ್ಮನನ್ನು ಒಬ್ಬಂಟಿಯಾಗಿ ಬಿಟ್ಟು ಹೋದಳು ಎಂದು ಮೃತ ಸಾವಿತ್ರಾಳ ತಾಯಿ ರೋಧಿಸುತ್ತಿರುವ ದೃಶ್ಯ ಮನಕಲುಕುವಂತಿತ್ತು.