ಮಹಿಳಾ ಕ್ರಿಕೆಟ್ ಪುಸ್ತಕ ಬಿಡುಗಡೆ

ಬೆಂಗಳೂರು: ಕ್ರೀಡಾ ಪತ್ರಕರ್ತರಾದ ಸಿದ್ದಾಂತ ಪಟ್ನಾಯಕ್ ಹಾಗೂ ಕಾರುಣ್ಯ ಕೇಶವ್ ಬರೆದಿರುವ ‘ದ ಫೈರ್ ಬರ್ನ್ಸ್ ಬ್ಲೂ: ಎ ಹಿಸ್ಟರಿ ಆಫ್ ವುಮೆನ್ಸ್ ಕ್ರಿಕೆಟ್ ಇನ್ ಇಂಡಿಯಾ’ ಪುಸ್ತಕವನ್ನು ಬುಧವಾರ ಬಿಡುಗಡೆಗೊಳಿಸಲಾಯಿತು. ಖಾಸಗಿ ಹೋಟೆಲ್​ನಲ್ಲಿ ನಡೆದ ಸಮಾರಂಭದಲ್ಲಿ ಭಾರತ ಮಹಿಳಾ ತಂಡದ ಮಾಜಿ ನಾಯಕಿಯರಾದ ಮಮತಾ ಮಾಬೆನ್ ಹಾಗೂ ಪ್ರಮೀಳಾ ಭಟ್, ಕ್ರೀಡಾ ಪತ್ರಕರ್ತ ಸುರೇಶ್ ಮೆನನ್ ಪುಸ್ತಕ ಬಿಡುಗಡೆ ಮಾಡಿದರು. ‘ಭಾರತೀಯ ಮಹಿಳಾ ಕ್ರಿಕೆಟ್ ಸಾಕಷ್ಟು ಬೆಳವಣಿಗೆ ಕಂಡಿದ್ದು, ತಂಡದೊಂದಿಗೆ ಉತ್ತಮ ದಿನಗಳನ್ನು ಕಳೆದಿರುವೆ. ಇಂದು ಸುಸಜ್ಜಿತ ಮೈದಾನಗಳಲ್ಲಿ ಪಂದ್ಯಗಳು ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿಯಾಗಲು ಪೂರಕ ವಾತಾವರಣವನ್ನು ಬಿಸಿಸಿಐ ಸೃಷ್ಟಿಸಿದೆ’ ಎಂದು ಮಮತಾ ಮಾಬೆನ್ ಹೇಳಿದರು. ಡಯಾನಾ ಎಡುಲ್ಜಿ ಹಾಗೂ ಶಾಂತಾ ರಂಗಸ್ವಾಮಿಯಿಂದ ಹಿಡಿದು ಇಂದಿನ ಮಿಥಾಲಿ ರಾಜ್ ಹಾಗೂ ಹರ್ವನ್​ಪ್ರೀತ್ ಕೌರ್​ರಂಥ ಅನೇಕ ಆಟಗಾರ್ತಿಯರನ್ನು ಮಹಿಳಾ ಕ್ರಿಕೆಟ್ ಕಂಡಿದೆ. ಹಿಂದಿನ ದಿನಗಳಲ್ಲಿ ಭಾರತ ಮಹಿಳಾ ಕ್ರಿಕೆಟ್​ನಲ್ಲಿ ಹಣ ಇರಲಿಲ್ಲ. ಹೀಗಾಗಿ ಅದರ ಅಭಿವೃದ್ಧಿಗೂ ಸಾಕಷ್ಟು ತೊಡಕಾಗಿತ್ತು. ಇತ್ತೀಚಿನ ದಿನಗಳಲ್ಲಿ ಮಹಿಳಾ ಕ್ರಿಕೆಟ್ ಸಂಪೂರ್ಣ ಬದಲಾಗಿದ್ದು, ಹೆಚ್ಚಿನ ಆಟಗಾರ್ತಿಯರು ಬರುತ್ತಿದ್ದಾರೆ ಎಂದು ಪ್ರಮೀಳಾ ಭಟ್ ಹೇಳಿದರು. ಪತ್ರಕರ್ತ ಸಿದ್ದಾಂತ ಪಟ್ನಾಯಕ್, ಕೆಲ ಮಹಿಳಾ ಹಾಲಿ ಹಾಗೂ ಮಾಜಿ ಆಟಗಾರ್ತಿಯರನ್ನು ಸಂದರ್ಶಿಸಿ ಕ್ರಿಕೆಟ್​ನ ಸ್ಥಿತಿಗತಿಗಳನ್ನು ಕುರಿತು ಈ ಪುಸ್ತಕ ರಚಿಸಿದ್ದಾರೆ.