ಮಗನ ಕೊಂದು ನೇಣು ಬಿಗಿದುಕೊಂಡ ತಾಯಿ

ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಡೆತ್​ನೋಟ್

ಪತಿ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ

ಬೆಂಗಳೂರು: ಎರಡೂವರೆ ವರ್ಷದ ಮಗನನ್ನು ಕೊಲೆ ಮಾಡಿದ ತಾಯಿ ತಾನು ನೇಣಿಗೆ ಶರಣಾಗಿದ್ದಾಳೆ.

ಚಂದ್ರಾ ಲೇಔಟ್ ಸಮೀಪದ ಕಲ್ಯಾಣನಗರ 4ನೇ ಟಿ ಮುಖ್ಯರಸ್ತೆಯ ಪ್ರತಿಮಾ ಮಂಗಳ್ಕೂರ್ (28) ಮತ್ತು ಮಗ ಸಾತ್ವಿಕ್ ಮೃತರು. ಶನಿವಾರ ರಾತ್ರಿ 8 ಗಂಟೆಗೆ ಪತಿ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಪ್ರತಿಮಾ ಪಾಲಕರು ಅಳಿಯನ ವಿರುದ್ಧ ಯಾವುದೇ ಆರೋಪ ಮಾಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರವಾರದ ಮೂಲದ ಸಂತೋಷ್ ಶೆಟ್ಟಿ ಮತ್ತು ಯಲ್ಲಾಪುರದ ಪ್ರತಿಮಾಗೆ 4 ವರ್ಷಗಳ ಹಿಂದೆ ಮದುವೆ ಆಗಿತ್ತು. ಅಬಕಾರಿ ಇಲಾಖೆ ಆಯುಕ್ತರ ಕಚೇರಿಯಲ್ಲಿ ಸಂತೋಷ ಶೆಟ್ಟಿ ಪ್ರಥಮ ದರ್ಜೆ ಸಹಾಯಕನಾಗಿದ್ದ. ಪ್ರತಿಮಾ ಸಹ ಬಿ.ಇಡ್ ಮುಗಿಸಿ ಇತ್ತೀಚೆಗೆ ಟಿಇಟಿ ಪರೀಕ್ಷೆ ಬರೆದಿದ್ದರು. ದಂಪತಿ ನಡುವೆ ಯಾವುದೇ ಕಲಹ ಇರಲಿಲ್ಲ.

ಕಲ್ಯಾಣನಗರದ ಸಂಬಂಧಿಕರ ಮನೆಯಲ್ಲೇ ಬಾಡಿಗೆಗೆ ನೆಲೆಸಿದ್ದರು. ಪತ್ನಿ ಮತ್ತು ಪುತ್ರನನ್ನು ವೀಕೆಂಡ್​ನಲ್ಲಿ ಹೊರಗಡೆ ಕರೆದುಕೊಂಡು ಹೋಗುತ್ತಿದ್ದರು. ಶನಿವಾರ ಸಹ ಬೆಳಗ್ಗೆ ಮನೆ ಬಿಡುವಾಗ ಸಂಜೆ ಹೊರಗಡೆ ಹೋಗೋಣ ಎಂದು ಹೇಳಿ ಸಂತೋಷ್ ಕಚೇರಿಗೆ ಹೋಗಿದ್ದರು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಚೇರಿಯಲ್ಲಿ ಸಭೆ ಇದ್ದುದರಿಂದ ತಡವಾಗಿತ್ತು. ಕಚೇರಿಯಿಂದ ಹೊರಟ ತಕ್ಷಣ ಹೊರಗಡೆ ಹೋಗಲು ಸಿದ್ಧವಾಗಿರು ಎಂದು ಹೇಳಲು ಪತ್ನಿ ಮೊಬೈಲ್​ಗೆ ಸಂತೋಷ್ ಕರೆ ಮಾಡಿದ್ದು, ಸ್ವೀಕರಿಸಿಲ್ಲ. ಪಕ್ಕದ ಮನೆಗೆ ಕರೆ ಮಾಡಿ ವಿಚಾರಿಸಿದಾಗ ಡೋರ್ ಲಾಕ್ ಆಗಿತ್ತು. ಮನೆಗೆ ಬರುವಷ್ಟರಲ್ಲಿ ಪ್ರತಿಮಾ ಮಗನೊಂದಿಗೆ ನೇಣು ಬಿಗಿದು ಅದೇ ಕುಣಿಕೆಗೆ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಘಟನಾ ಸ್ಥಳದಲ್ಲಿ ಡೆತ್​ನೋಟ್ ಲಭ್ಯವಾಗಿದೆ. ದೇವರೇ ನನ್ನ ಕ್ಷಮಿಸು, ಬದುಕಲು ನನಗೆ ಇಷ್ಟವಿಲ್ಲ. ನನ್ನ ಸಾವಿಗೆ ಯಾರು ಕಾರಣರಲ್ಲ. ತಂದೆ, ತಾಯಿಗಳು ಕ್ಷಮಿಸಲಿ. ನಾನು ಸತ್ತ ಮೇಲೆ ಮಗನನ್ನು ಯಾರೂ ನೋಡಿಕೊಳ್ಳುತ್ತಾರೆ ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಪತ್ರ ಬರೆದಿಟ್ಟಿದ್ದಾರೆ. ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ತೆಗೆದುಕೊಂಡಿರುವುದಾಗಿ ಚಂದ್ರಾಲೇಔಟ್ ಪೊಲೀಸರು ತಿಳಿಸಿದ್ದಾರೆ.

ಪ್ರತ್ಯೇಕ ಪ್ರಕರಣ, ಇಬ್ಬರ ಕೊಲೆ

ನಗರದಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರನ್ನು ದುಷ್ಕರ್ವಿುಗಳು ಕೊಲೆ ಮಾಡಿದ್ದಾರೆ. ಕದಿರೇನಹಳ್ಳಿ ಪೆಟ್ರೋಲ್ ಬಂಕ್ ಬಳಿಯಿರುವ ಕರ್ನಾಟಕ ಬ್ಯಾಂಕ್ ಎಟಿಎಂನ ಸೆಕ್ಯುರಿಟಿ ಗಾರ್ಡ್ ಗೌಡಯ್ಯನಪಾಳ್ಯದ ನಿವಾಸಿ ಲಿಂಗಪ್ಪ (62) ಎಂಬುವರ ಮೇಲೆ ದುಷ್ಕರ್ವಿುಗಳು ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಎಚ್​ಎಸ್​ಆರ್ ಲೇಔಟ್​ನಲ್ಲಿ ಮೊಬೈಲ್ ಶೋರೂಮ್ಲ್ಲಿ ಕೆಲಸ ಮಾಡುತ್ತಿದ್ದ ಅಗರ ನಿವಾಸಿ ಟಿ. ಪೃಥ್ವಿಯನ್ನು (19) ಚೂರಿಯಿಂದ ಇರಿದು ಕೊಲೆ ಮಾಡಲಾಗಿದೆ.

ಬಾಗಲಕೋಟೆ ಮೂಲದ ಲಿಂಗಪ್ಪ ಕೆಲ ವರ್ಷಗಳಿಂದ ಕದಿರೇನಹಳ್ಳಿಯ ಪೆಟ್ರೋಲ್ ಬಂಕ್ ಬಳಿ ಇರುವ ಕರ್ನಾಟಕ ಬ್ಯಾಂಕ್ ಎಟಿಎಂ ಕೇಂದ್ರದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದರು.ಎಟಿಎಂ ಕೇಂದ್ರವಿದ್ದ ಕಟ್ಟಡದ ಮೊದಲನೇ ಮಹಡಿಯಲ್ಲಿರುವ ಖಾಲಿ ಜಾಗದಲ್ಲಿ ಲಿಂಗಪ್ಪ ಮಲಗುತ್ತಿದ್ದರು.

ಕಾರಣ ತಿಳಿದಿಲ್ಲ: ಶನಿವಾರ ತಡರಾತ್ರಿ 3 ಗಂಟೆಗೆ ಲಿಂಗಪ್ಪ ನಿದ್ದೆಗೆ ಜಾರಿದ್ದ ವೇಳೆ ತಲೆ ಮೇಲೆ ಕಲ್ಲು ಎತ್ತಿ ಹಾಕಿದ ದುಷ್ಕರ್ವಿುಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಮೃತಪಟ್ಟ ಸ್ಥಿತಿಯಲ್ಲಿದ್ದ ಲಿಂಗಪ್ಪ ಅವರನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಎಟಿಎಂ ಕೇಂದ್ರದಲ್ಲಿದ್ದ ಹಣ ದೋಚಲು ಯತ್ನಿಸಿಲ್ಲ. ಲಿಂಗಪ್ಪ ಜೇಬಿನಲ್ಲಿದ್ದ ಹಣ ಲಪಟಾಯಿಸಿರುವ ಸಾಧ್ಯತೆಗಳಿವೆ. ಆರೋಪಿಗಳ ಪತ್ತೆಗೆ ಎರಡು ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಡ್ ರೂಂಗೆ ನುಗ್ಗಿ ದಂಪತಿ ಎದುರೇ ಹಣ ಕದ್ದ!

ಬೆಂಗಳೂರು: ದಂಪತಿ ಮಲಗಿದ್ದ ಬೆಡ್ ರೂಂಗೆ ನುಗ್ಗಿದ ಕಳ್ಳ ಡ್ರಾಯರ್​ನಲ್ಲಿದ್ದ 15 ಸಾವಿರ ರೂ. ಮತ್ತು 1 ಚಿನ್ನದ ಉಂಗುರ ಕದ್ದು ಪರಾರಿಯಾಗಿದ್ದಾನೆ.

ಉತ್ತರ ಭಾರತ ಮೂಲದ ರಾಜನ್ ಮಹಾಪಾತ್ರ ದೆಪಾಟಿ ಮತ್ತು ಅಂಜಲಿಪ್ರಿಯ ದಂಪತಿ ಬೊಮ್ಮನಹಳ್ಳಿಯ ವಿರಾಟ್​ನಗರದಲ್ಲಿ ವಾಸಿಸುತ್ತಿದ್ದಾರೆ.

ಮಾ.21ರ ತಡರಾತ್ರಿ 2.50ರಲ್ಲಿ ದೆಪಾಟಿ ದಂಪತಿ ಬೆಡ್ ರೂಂನಲ್ಲಿ ಮಲಗಿದ್ದರು. ಆ ಸಂದರ್ಭದಲ್ಲಿ ಕಳ್ಳ ಕಾಂಪೌಂಡ್ ಗೋಡೆ ಹತ್ತಿ, ಬಾಲ್ಕನಿ ಕಿಟಕಿಯಿಂದ ಕೈ ಹಾಕಿ ಬಾಗಿಲ ಒಳಗಿನ ಚಿಲಕ ತೆಗೆದು

ದೆಪಾಟಿ ದಂಪತಿ ಮಲಗಿದ್ದ ಬೆಡ್​ರೂಂಗೆ ಬಂದಿದ್ದಾನೆ. ಅಲ್ಲಿದ್ದ ಕಬೋರ್ಡ್​ನಲ್ಲಿ ತಡಕಾಡಿ 15 ಸಾವಿರ ರೂ. ನಗದು ಮತ್ತು 1 ಚಿನ್ನದ ಉಂಗುರ ಕದ್ದಿದ್ದಾನೆ.

ಶಬ್ದ ಕೇಳಿ ಎಚ್ಚರ: ಬೆಡ್​ರೂಂನಲ್ಲಿದ್ದ ಡ್ರೆಸ್ಸಿಂಗ್ ಟೇಬಲ್ ಡ್ರಾಯರ್ ತೆಗೆಯುವಾಗ ಶಬ್ದವಾಗಿದೆ. ಶಬ್ದ ಕೇಳಿ ಎಚ್ಚರಗೊಂಡ ಅಂಜಲಿಪ್ರಿಯ, ಬೆಡ್​ರೂಂನಲ್ಲಿ ಕಳ್ಳ ತಡಕಾಡುತ್ತಿರುವುದನ್ನು ನೋಡಿ ಆತಂಕಗೊಂಡು ಜೋರಾಗಿ ಕಿರುಚಿದ್ದಾರೆ. ಚೀರಾಟದ ಕೇಳಿ ಪತಿ ಎಚ್ಚರಗೊಂಡು, ಕಳ್ಳನನ್ನು ಹಿಡಿಯಲು ಮುಂದಾದಾಗ ಬಾಲ್ಕನಿ ಮೂಲಕ ಕಾಂಪೌಂಡ್ ಮೇಲೆ ಇಳಿದು ಓಡಿಹೋಗಿದ್ದಾನೆ. ಆಗ ಆತನ ಮೊಬೈಲ್ ಕೆಳಗೆ ಬಿದ್ದಿದೆ. ಕೂಡಲೇ ನೆರೆಯವರಿಗೆ ವಿಚಾರ ತಿಳಿಸಿದ ದಂಪತಿ, ಕಳ್ಳನನ್ನ ಬೆನ್ನಟ್ಟಲು ಪ್ರಯತ್ನಿಸಿದ್ದಾರೆ.

ಮನೆ ಹೊರಗೆ ನಿಂತಿದ್ದ ತನ್ನ ನಾಲ್ವರು ಸಹಚರರ ಜತೆ ಕಳ್ಳ ಪರಾರಿಯಾಗಿದ್ದಾನೆ. ವಿಚಾರ ತಿಳಿದು ಸ್ಥಳಕ್ಕೆ ಧಾವಿಸಿದ ಬೊಮ್ಮನಹಳ್ಳಿ ಪೊಲೀಸರು ಸಮೀಪದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾ ಪರಿಶೀಲಿಸಿದ್ದಾರೆ. ಓಡಿಹೋಗುವ ಭರದಲ್ಲಿ ಕಳ್ಳನ ಜೇಬಿನಿಂದ ಕೆಳಗೆ ಬಿದ್ದ ಮೊಬೈಲ್ ಸಿಕ್ಕಿದ್ದು, ಇದರ ಆಧಾರದ ಮೇಲೆ ಕಳ್ಳನಿಗಾಗಿ ಹುಡುಕಾಟ ನಡೆಸಿದ್ದಾರೆ. ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚೂರಿಯಿಂದ ಇರಿದ ಸ್ನೇಹಿತ

ಏರ್​ಟೆಲ್ ಮೊಬೈಲ್ ಶೋರೂಮ್ಲ್ಲಿ ಕೆಲಸ ಮಾಡುತ್ತಿದ್ದ ಪೃಥ್ವಿ ಮಾ.21ರ ರಾತ್ರಿ ಅಗರ ಗ್ರಾಮದ ವೆಂಕಟರಮಣಸ್ವಾಮಿ ದೇವಾಲಯದ ಜಾತ್ರೆಗೆ ದೊಡ್ಡಪ್ಪನ ಮಗ ಭರತ್ ಜತೆ ಹೋಗಿದ್ದರು. ಇಬ್ಬರು ಕುಡಿದು ಸ್ನೇಹಿತರ ಜತೆ ಮಾತನಾಡುತ್ತಿದ್ದರು.

ಆ ಸಂದರ್ಭದಲ್ಲಿ ಸ್ನೇಹಿತನೊಬ್ಬ ಪೃಥ್ವಿ ಮೇಲೆ ಹಲ್ಲೆ ನಡೆಸಿದ್ದ. ಕೆಲ ಹೊತ್ತಿನ ಬಳಿಕ ಮತ್ತೆ ಬಂದ ಸ್ನೇಹಿತ ಚೂರಿಯಿಂದ ಪೃಥ್ವಿಯ ಎದೆ ಮತ್ತು ಹೊಟ್ಟೆಯ ಭಾಗಕ್ಕೆ ಇರಿದು ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಪೃಥ್ವಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರು. ಅಷ್ಟರಲ್ಲಾಗಲೇ ಮೃತಪಟ್ಟಿದ್ದ. ಎಚ್​ಎಸ್​ಆರ್ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಲಸ ಕೊಡಿಸುವುದಾಗಿ 15 ಲಕ್ಷ ರೂ. ವಂಚನೆ

ಅಬಕಾರಿ ಇಲಾಖೆಯಲ್ಲಿ ಹುದ್ದೆ ಕೊಡಿಸುವುದಾಗಿ ಯುವಕನಿಂದ 15 ಲಕ್ಷ ರೂ. ಪಡೆದ ವ್ಯಕ್ತಿ ಉದ್ಯೋಗ ಕೊಡಿಸದೆ ಹಣವನ್ನೂ ಹಿಂದಿರುಗಿಸದೆ ವಂಚಿಸಿದ್ದಾನೆ.

ಹುಬ್ಬಳ್ಳಿಯ ಸಾಯಿರಾಜ್ ಬಸವರಾಜ್ ರಾಮ್ ಜೀ ಆರೋಪಿ. ಗದಗ ಮೂಲದ ರವಿ ಶಿವಪ್ಪ ತಳವಾರ್ (30) ಹಣ ಕಳೆದುಕೊಂಡವರು. ರವಿ ನೀಡಿದ ದೂರಿನ ಆಧಾರದ ಮೇರೆಗೆ ಉಪ್ಪಾರಪೇಟೆ ಪೊಲೀಸರು ಸಾಯಿರಾಜ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸ್ನೇಹಿತ ಆನಂದ್ ಎಂಬಾತನ ಮೂಲಕ ರವಿ ಅವರಿಗೆ ಕೆಲ ತಿಂಗಳ ಹಿಂದೆ ಆರೋಪಿ ಪರಿಚಯ ವಾಗಿತ್ತು. ನನಗೆ ಸರ್ಕಾರಿ ಅಧಿಕಾರಿಗಳ ಪರಿಚಯವಿದ್ದು, 15 ಲಕ್ಷ ರೂ. ನೀಡಿದರೆ ಅಬಕಾರಿ ಇಲಾಖೆಯಲ್ಲಿ ಹುದ್ದೆ ಕೊಡಿಸುವುದಾಗಿ ಆರೋಪಿ ತಿಳಿಸಿದ್ದ. ಕೆಲ ದಿನಗಳ ಹಿಂದೆ ಮೆಜೆಸ್ಟಿಕ್ ಬಳಿಯಿರುವ ಹೋಟೆಲ್​ಗೆ ರವಿಯನ್ನು ಕರೆಸಿಕೊಂಡ ಆರೋಪಿ, ತನ್ನ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಜಮೆ ಮಾಡುವಂತೆ ಸೂಚಿಸಿದ್ದ. ಅದರಂತೆ ರವಿ 15 ಲಕ್ಷ ರೂ. ಜಮೆ ಮಾಡಿದ್ದರು. ಕೆಲ ದಿನ ಸಂಪರ್ಕಕ್ಕೂ ಸಿಕ್ಕಿರಲಿಲ್ಲ.ಕಳೆದರೂ ಆರೋಪಿ ಅಬಕಾರಿ ರಕ್ಷಕ ಹುದ್ದೆಯನ್ನೂ ಕೊಡಿಸದೆ, ಹಣವನ್ನೂ ಹಿಂದಿರುಗಿಸಿರಲಿಲ್ಲ. ಅಲ್ಲದೆ, ರವಿ ಅವರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ.