ಶಿಕಾರಿಪುರ: ಜನಿಸಿದಾಗಿನಿಂದ ಕೊನೆಯ ಉಸಿರಿರುವವರೆಗೆ ವಿವಿಧ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮಹಿಳೆ ಯಶಸ್ವಿಯೂ ಆಗುತ್ತಾಳೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ರಾಜ್ಯ ಪರಿಸರ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಸಹಕಾರ ಸಂಘ, ರಾಜ್ಯ ಜಾನಪದ ಕಲಾವಿದರ ಸಂಘ, ಬಸವೇಶ್ವರ ಸಹಕಾರ ಒಕ್ಕೂಟ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ತಮಗೆ ಯಾವುದೇ ಕೆಲಸ ನೀಡಿದರೂ ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ. ಇಂದು ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ಪುರುಷರಿಗೆ ಸರಿಸಮಾನರಾಗಿ ಕೆಲಸ ಮಾಡುತ್ತಿದ್ದಾರೆ. ಮಹಿಳೆ ಪರಿಶ್ರಮದ ಸಂಕೇತ ಎಂದು ಬಣ್ಣಿಸಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮಾಳವಿಕಾ ಮಾತನಾಡಿ, ಶಿಕಾರಿಪುರ ಶರಣರ ನಾಡು. ಮಹಿಳಾ ದನಿಯಾಗಿ ಹನ್ನೆರಡನೇ ಶತಮಾನದಲ್ಲಿ ಪ್ರಕಾಶಿಸಿದಂತಹ ಶರಣೆ ಅಕ್ಕಮಹಾದೇವಿ ಜನ್ಮತಾಳಿದ ನಾಡು. ಇಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸುತ್ತಿರುವುದು ಹೆಮ್ಮೆ ಸಂಗತಿ ಎಂದರು.
ಬಸವಾಶ್ರಮದ ಮಾತೆ ಶರಣಾಂಬಿಕೆ, ಬಿ.ಡಿ.ಭೂಕಾಂತ್, ಪುರಸಭೆ ಅಧ್ಯಕ್ಷೆ ಶೈಲಾ ಮಡ್ಡಿ, ಶಾಂತಲಾ ಭೂಕಾಂತ್, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಂ.ಬಿ.ಚನ್ನವೀರಪ್ಪ, ಟಿಎಪಿಸಿಎಂಎಸ್ ಅಧ್ಯಕ್ಷ ಸುಧೀರ್, ತಾಲೂಕು ಕಸಾಪ ಅಧ್ಯಕ್ಷ ರಘು, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಎಲ್.ರಾಜು ಇದ್ದರು.
