ಸೋಮವಾರಪೇಟೆ: ಶಾಂತಳ್ಳಿ ಗ್ರಾಮದಲ್ಲಿ ಭಾನುವಾರ ಒಕ್ಕಲಿಗರ ಯುವ ವೇದಿಕೆಯಿಂದ ಆಯೋಜಿಸಿದ್ದ ಕೆಸರುಗದ್ದೆ ಓಟ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಮಹಿಳೆಯರು, ಪುರುಷರು, ಮಕ್ಕಳು ಪಾಲ್ಗೊಂಡು ಸಂಭ್ರಮಿಸಿದರು.
ಮಳೆಯ ಸಿಂಚನದೊಂದಿಗೆ ಪ್ರಾರಂಭವಾದ ಓಟದ ಸ್ಪರ್ಧೆಗಳಲ್ಲಿ ಮಹಿಳೆಯರೇ ಹೆಚ್ಚಾಗಿ ಕೆಸರಿನಲ್ಲಿ ಬಿದ್ದು, ಎದ್ದು ನಂತರ ಗುರಿಮುಟ್ಟಿ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿದರು. ಪ್ರಾಥಮಿಕ ಶಾಲೆಯ ಮಕ್ಕಳು ಯಾವುದೇ ಅಂಜಿಕೆ, ಭಯವಿಲ್ಲದೆ ಕೆಸರುಗದ್ದೆ ಓಟದಲ್ಲಿ ಪಾಲ್ಗೊಂಡು ಗುರಿ ಮುಟ್ಟಿ ಸಂಭ್ರಮಪಟ್ಟರು.
ತಮ್ಮ ಮಕ್ಕಳು ಕೆಸರಿನಲ್ಲಿ ಬಿದ್ದು ಪರದಾಡುವುದನ್ನು ಪಾಲಕರು ನೋಡಿ ಮಂಕಾದರು. ಕೆಸರಿನಲ್ಲಿ ಯುವಕರು ಜಿಂಕೆ ಓಟ ನೋಡಿದ ಪಾಲಕರು ಚಪ್ಪಾಳೆ ಮೂಲಕ ಹುರಿದುಂಬಿಸಿದರು. ಕೆಸರಿನಲ್ಲಿ ನಾಟಿ ಮಾಡಿ ಅನುಭವವಿರುವ ಮಹಿಳೆಯರ ಥ್ರೋಬಾಲ್ ಪಂದ್ಯ ರೋಚಕತೆಯಿಂದ ಕೂಡಿತ್ತು. ಬಟ್ಟೆಯೆಲ್ಲ ಕೆಸರಿನಿಂದ ಒದ್ದೆಯಾಗಿದ್ದರೂ, ಗೆಲುವಿಗಾಗಿ ಶಕ್ತಿಮೀರಿ ಆಟವಾಡುವ ದೃಶ್ಯ ಮನಮೋಹಕವಾಗಿತ್ತು. ಪುರುಷರ ವಾಲಿಬಾಲ್ನಲ್ಲಿ ಅನುಭವಿ ಆಟಗಾರರು ಮಿಂಚಿದರು. ಹೆಂಡತಿಯನ್ನು ಹೊತ್ತುಕೊಂಡು ಓಡುತ್ತಿದ್ದುದ್ದು ಜನರನ್ನು ನಗೆಗಡಲಿನಲ್ಲಿ ತೇಲುವಂತೆ ಮಾಡಿತು. ಕೆಲವರು ಕೆಸರಿನಲ್ಲಿ ಬಿದ್ದು ಓಡಲಾಗದೆ ವಾಪಸಾಗುವ ಸಂದರ್ಭ ಜನರ ಹಾಸ್ಯಚಟಾಕಿಗೆ ತುತ್ತಾಗಬೇಕಾಯಿತು.
ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ಒಕ್ಕಲುತನವನ್ನು ಮೂಲ ಕಸುಬನ್ನಾಗಿ ಮಾಡಿಕೊಂಡಿರುವ ಒಕ್ಕಲಿಗರಿಗೂ, ಕೆಸರಿಗೂ ಅವಿನಾಭಾವ ಸಂಬಂಧವಿದೆ. ಕೆಸರುಗದ್ದೆ ಕ್ರೀಡಾಕೂಟ ಎಂಬುದು ಜನಾಂಗದ ನಿಜವಾದ ಕ್ರೀಡೆ. ಇದನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಯುವ ಜನಾಂಗದ ಕರ್ತವ್ಯ. ಒಕ್ಕಲಿಗರು ಒಗ್ಗಟ್ಟಾಗಿರಬೇಕು. ನಮ್ಮ ಸಂಸ್ಕೃತಿ, ಆಚಾರ-ವಿಚಾರವನ್ನು ಕಾಪಾಡಿಕೊಳ್ಳಲು ರಾಜಕೀಯ ರಹಿತವಾಗಿ ಒಗ್ಗಟ್ಟಾಗಿರಬೇಕು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ರಾಜ್ಯ ಒಕ್ಕಲಿಗರ ಸಂಘದ ಜಿಲ್ಲಾ ನಿರ್ದೇಶಕ ಹರಪಳ್ಳಿ ರವೀಂದ್ರ ಮಾತನಾಡಿ, ರಾಜ್ಯ ಒಕ್ಕಲಿಗರ ಸಂಘ ಜನಾಂಗದ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ನಮ್ಮ ಜನಾಂಗದ ಮಕ್ಕಳು ಇನ್ನಷ್ಟು ಸಾಧನೆ ಮಾಡಬೇಕಾಗಿದೆ. ಗ್ರಾಮೀಣ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು. ಸೋಮವಾರಪೇಟೆಯಲ್ಲಿ ಒಕ್ಕಲಿಗರ ಸಂಘದಿಂದ 9.99ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಒಕ್ಕಲಿಗರ ಬಾಲಕಿಯರ ವಸತಿ ನಿಲಯ ನಿರ್ಮಾಣಗೊಳ್ಳಲಿದ್ದು, ಇದೇ ತಿಂಗಳು ಕಟ್ಟಡದ ಭೂಮಿಪೂಜೆ ನಡೆಯಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಸಬ್ ಜೂನಿಯರ್ ಹಾಕಿ ತಂಡದ ನಾಯಕ ಹೆಗ್ಗುಳ ಗ್ರಾಮದ ಶಶಿತ್ಗೌಡ, ಪಿಎಚ್.ಡಿ ಪದವಿಧರ ಯಡೂರು ಗ್ರಾಮದ ಡಾ. ಸಿ.ಆರ್.ಅಜಿತ್ ಅವರುಗಳನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಒಕ್ಕಲಿಗರ ಯುವ ವೇದಿಕೆಯ ಅಧ್ಯಕ್ಷ ಚಕ್ರವರ್ತಿ ಸುರೇಶ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ.ಚಂಗಪ್ಪ, ತಾಲೂಕು ಅಧ್ಯಕ್ಷ ಎ.ಆರ್.ಮುತ್ತಣ್ಣ, ವೇದಿಕೆಯ ಮಾಜಿ ಅಧ್ಯಕ್ಷ ಬಿ.ಜೆ.ದೀಪಕ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಂ.ಲೋಕೇಶ್, ಜಿಲ್ಲಾ ಒಕ್ಕಲಿಗರ ಯುವ ವೇದಿಕೆ ಜಿಲ್ಲಾಧ್ಯಕ್ಷ ಗಿರೀಶ್ ಮಲ್ಲಪ್ಪ, ಗೌಡಳ್ಳಿ ಸಹಕಾರ ಸಂಘದ ಅಧ್ಯಕ್ಷ ಎಚ್.ಆರ್.ಸುರೇಶ್, ಜಿಲ್ಲಾಸ್ಪತ್ರೆಯ ತಜ್ಞವೈದ್ಯ ಡಾ.ಧನುಂಜಯ ಕುಮಾರ್, ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ತಮ್ಮಯ್ಯ, ಶಾಂತಳ್ಳಿ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಂ.ಧರ್ಮಪ್ಪ, ದಾನಿಗಳಾದ ಕೂತಿ ಗ್ರಾಮದ ಗಣೇಶ್ ಇದ್ದರು.