More

    ಮಗ ಚೇತರಿಸಿಕೊಳ್ಳಲಿಲ್ಲ ಅಂತ ಮಗಳಿಗೂ ವಿಷವುಣಿಸಿದಳು… ಮನ ಕಲಕುತ್ತೆ ಈ ಘಟನೆ

    ಲೂಧಿಯಾನ : ಒಂದು ವಾರದ ಅವಧಿಯಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಮನ ಕಲಕುವ ಘಟನೆ ಪಂಜಾಬ್​ನ ಲೂಧಿಯಾನದಿಂದ ವರದಿಯಾಗಿದೆ. ಮಗನ ದೀರ್ಘಾವಧಿಯ ಅನಾರೋಗ್ಯದಿಂದ ದುಃಖಕ್ಕೀಡಾಗಿದ್ದ ಮಹಿಳೆ, ತನ್ನೊಂದಿಗೆ ಕಷ್ಟಪಡುತ್ತಿದ್ದ ಅವಿವಾಹಿತ ಮಗಳಿಗೂ ವಿಷವುಣಿಸಿ, ತಾವೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅತ್ತ ಅಸ್ವಸ್ಥನಾಗಿದ್ದ ಮಗನೂ ನಿದ್ದೆಯಲ್ಲೇ ಚಿರನಿದ್ರೆಗೆ ಜಾರಿದ್ದಾನೆ.

    ಲೂಧಿಯಾನ ಗ್ರಾಮಾಂತರ ಜಿಲ್ಲೆಯ ಸೋಢಿವಾಲಾ ಎಂಬ ಹಳ್ಳಿಯ ಗುರ್‌ಪ್ರೀತ್ ಸಿಂಗ್ (40) ಏಳು ವರ್ಷಗಳ ಹಿಂದೆ ಮಾಳಿಗೆಯ ಮೇಲಿಂದ ಬಿದ್ದು ತೀವ್ರವಾಗಿ ಗಾಯಗೊಂಡು ಹಾಸಿಗೆ ಹಿಡಿದಿದ್ದರು. ಬಡತನವಿದ್ದರೂ ಚಿಕಿತ್ಸೆಗಾಗಿ ಬಂಧುಬಳಗದ ಸಹಾಯದೊಂದಿಗೆ 18 ಲಕ್ಷ ರೂ. ವೆಚ್ಚ ಮಾಡಿದ್ದರು. ಈ ನಡುವೆ ತಂದೆ ನಜರ್ ಸಿಂಗ್ ಸಾವನ್ನಪ್ಪಿದ್ದು, ಅವರ ತಾಯಿ ಜಸ್ಬೀರ್ ಕೌರ್ (60) ಮತ್ತು ಸಹೋದರಿ ಮಂದೀಪ್ ಕೌರ್ (27) ಚಿಕಿತ್ಸೆಯ ವೆಚ್ಚವನ್ನು ಭರಿಸುತ್ತಾ ಗುರ್​​ಪ್ರೀತ್​ ಅವರ ಆರೈಕೆ ಮಾಡುತ್ತಿದ್ದರು. ಆದರೆ, ಆತನ ಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ. ಬದಲಿಗೆ ಇತ್ತೀಚೆಗೆ ಕೋಮಾಕ್ಕೆ ಜಾರಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಇದನ್ನೂ ಓದಿ: ಓಡಿಹೋಗಿದ್ದ ಪ್ರೇಮಿಗಳನ್ನು ಹಿಡಿದುತಂದ ಪೊಲೀಸ್​; ಯುವತಿ ಮನೆಗೆ, ಯುವಕ ಮಸಣಕ್ಕೆ !

    ಕೆಲವು ದಿನಗಳ ಹಿಂದೆ ತಾಯಿ ಜಸ್ಬೀರ್ ಕೌರ್​ ಕೂಡ ಮನೆಯಲ್ಲೇ ಜಾರಿಬಿದ್ದು ಏಟು ಮಾಡಿಕೊಂಡಿದ್ದು, ಹತಾಶರಾಗಿದ್ದರು. ಏಪ್ರಿಲ್ 11 ರಂದು ಅವರು ಊಟದಲ್ಲಿ ವಿಷ ಸೇರಿಸಿ ಮಗಳು ಮಂದೀಪ್​​ಗೆ ನೀಡಿ ತಾವೂ ಸೇವಿಸಿ ಕೆಲವು ಗಂಟೆಗಳಲ್ಲೇ ಸಾವಪ್ಪಿದರು. ಅಕ್ಕಪಕ್ಕದವರು ಮಂದೀಪ್ ಕೌರ್​​ರನ್ನು ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆಕೆಯೂ ಏಪ್ರಿಲ್ 16 ರಂದು ಸಾವಪ್ಪಿದರು. ಈ ನಡುವೆ ಮನೆಯಲ್ಲೇ ಇದ್ದ ಗುರ್​ಪ್ರೀತ್​ ಸಿಂಗ್ ನಿದ್ದೆಯಲ್ಲೇ ತಮ್ಮ ಅಸ್ವಸ್ಥತೆಯ ಕಾರಣದಿಂದ ಮರಣ ಹೊಂದಿದರು ಎಂದು ಪೊಲೀಸರು ತಿಳಿಸಿದ್ದಾರೆ.

    ಆಸ್ಪತ್ರೆಯಲ್ಲಿದ್ದ ವೇಳೆಯಲ್ಲಿ ಮಗಳು ಮಂದೀಪ್ ಕೌರ್, “ರಾತ್ರಿ ಊಟದ ನಂತರ ನನಗೆ ಮತ್ತು ತಾಯಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತು. ಬಹುಶಃ ತಾಯಿ ಊಟದಲ್ಲಿ ವಿಷ ಬೆರೆಸಿರಬೇಕು. ಸುಮಾರು ಏಳು ವರ್ಷಗಳಿಂದ ಅಣ್ಣ ಅಸ್ವಸ್ಥನಾಗಿದ್ದು, ಇದೀಗ ಮುಂದಿನ ಚಿಕಿತ್ಸೆಗೆ ನಮ್ಮ ಬಳಿ ಹಣವಿಲ್ಲದ್ದರ ಬಗ್ಗೆ ಬೇಸರಗೊಂಡು ಈ ಗಂಭೀರ ಕ್ರಮ ತೆಗೆದುಕೊಂಡಿದ್ದಾರೆ” ಎಂದು ಹೇಳಿಕೆ ನೀಡಿದ್ದಾರೆ. ಈ ಪ್ರಕರಣದ ಬಗ್ಗೆ ವರದಿ ತಯಾರಿಸಿರುವ ಪೊಲೀಸರು, ಮೂವರ ಶವಗಳನ್ನೂ, ಮದುವೆಯಾಗಿ ಬೇರೆಡೆ ವಾಸಿಸುತ್ತಿದ್ದ ಮತ್ತೊಬ್ಬ ಮಗಳಿಗೆ ಅಂತ್ಯಸಂಸ್ಕಾರಕ್ಕಾಗಿ ಒಪ್ಪಿಸಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)

    ಕರೊನಾ ಚಿಕಿತ್ಸೆಗೆ ಬೆಂಬಲವಾಗಿ ನಿಂತ ಭಾರತೀಯ ರೈಲ್ವೆ… ಹೊರಡಲಿದೆ ‘ಆಕ್ಸಿಜನ್ ಎಕ್ಸ್​ಪ್ರೆಸ್​’!

    ‘ಎಷ್ಟು ಲಸಿಕೆ ಆರ್ಡರ್ ಮಾಡಿದ್ದೀರಿ ?’ – ಮೋದಿಗೆ ಮನಮೋಹನ್​ ಸಿಂಗ್ ಪ್ರಶ್ನೆ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts