ದೇವರ ದರ್ಶನಕ್ಕೆ ಕರೆತಂದು ಪತ್ನಿಯ ಕೊಲೆ

ವಿಜಯವಾಣಿ ಸುದ್ದಿಜಾಲ ರಾಣೆಬೆನ್ನೂರ

ದೇವರ ದರ್ಶನಕ್ಕೆಂದು ಪತ್ನಿಯನ್ನು ಕರೆದುಕೊಂಡು ಬಂದ ಪತಿ, ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ತಾಲೂಕಿನ ದೇವರಗುಡ್ಡ ಗ್ರಾಮದ ಬಳಿ ಸೋಮವಾರ ನಡೆದಿದೆ.

ಶಿವಮೊಗ್ಗ ಜಿಲ್ಲೆ ಭದ್ರಾಪುರದ ಗಾಯತ್ರಿ ಉರ್ಫ್ ಸುಧಾ ಬಾಣಿ (27) ಕೊಲೆಯಾದವಳು. ಪತಿ ಸತೀಶ ಹನುಮಂತಪ್ಪ ಬಾಣಿ (38) ಕೊಲೆ ಆರೋಪಿ.

ದೇವರಗುಡ್ಡ ಮಾಲತೇಶ ಸ್ವಾಮಿ ದರ್ಶನಕ್ಕೆಂದು ಗಾಯತ್ರಿಯನ್ನು ಭಾನುವಾರ ರಾತ್ರಿ ಬೈಕ್​ನಲ್ಲಿ ಕರೆದುಕೊಂಡು ಬಂದ ಸತೀಶ, ವಾಪಸ್ ಮನೆಗೆ ಹೋಗುತ್ತಿದ್ದ ಸಮಯದಲ್ಲಿ ಅನೈತಿಕ ಸಂಬಂಧದ ಬಗ್ಗೆ ಪ್ರಶ್ನಿಸಿದ್ದಾನೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆಯಾಗಿದೆ. ಕೂಡಲೇ ಸತೀಶ ಗಾಯತ್ರಿಯ ಗುತ್ತಿಗೆಗೆ ಟವೆಲ್​ನಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಶವವನ್ನು ಪೊದೆಯೊಳಗೆ ತೆಗೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ಸಾರ್ವಜನಿಕರ ಕಣ್ಣಿಗೆ ಬಿದ್ದಿದ್ದು, ಜನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಘಟನೆ ಹಿನ್ನೆಲೆ..:ಹರಿಹರ ತಾಲೂಕಿನ ಭಾನುವಳ್ಳಿ ಗ್ರಾಮದ ಗಾಯತ್ರಿಯನ್ನು 9 ವರ್ಷದ ಹಿಂದೆ ಸತೀಶನಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ.

ಗಾಯತ್ರಿ ಬೇರೆಯವರೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆ. ಇದರಿಂದಾಗಿ ಬೇಸತ್ತು ಆರು ತಿಂಗಳ ಹಿಂದೆ ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದೇನೆ. ಆದರೆ, ಗಾಯತ್ರಿ ವಿಚ್ಛೇದನಕ್ಕೆ ನಿರಾಕರಿಸುತ್ತಿದ್ದಳು. ಮೂರು ಬಾರಿ ನ್ಯಾಯಾಲಯಕ್ಕೆ ಹಾಜರಾಗಲಿಲ್ಲ. ಮತ್ತೊಂದೆಡೆ ಅನೈತಿಕ ಸಂಬಂಧವನ್ನೂ ಬಿಡಲಿಲ್ಲ. ಆದ್ದರಿಂದ ಅವಳನ್ನು ಕೊಲೆ ಮಾಡಿರುವುದಾಗಿ ಸತೀಶ ಪೊಲೀಸರ ಎದುರು ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಹಿಂದೆಯೂ ಕೊಲೆಗೆ ಯತ್ನ..: ಸತೀಶ ಹಾಗೂ ಗಾಯತ್ರಿ ಹಲವಾರು ಬಾರಿ ಜಗಳವಾಡಿದ್ದಾರೆ. 4 ತಿಂಗಳ ಹಿಂದೆ ಸತೀಶನು ಗಾಯತ್ರಿಯನ್ನು ಕೊಲೆ ಮಾಡಲು ಯತ್ನಿಸಿದ್ದ. ಆದರೆ, ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಿ ಬದುಕಿಸಿಕೊಂಡಿದ್ದೆವು. ಆದರೀಗ ಮನೆಯಿಂದ ದೇವರ ದರ್ಶನಕ್ಕೆಂದು ಕರೆದುಕೊಂಡು ಬಂದು ಕೊಲೆ ಮಾಡಿದ್ದಾನೆ ಎಂದು ನಗರದ ತಾಲೂಕು ಸರ್ಕಾರಿ ಆಸ್ಪತ್ರೆ ಶವಾಗಾರದ ಎದುರು ಮೃತಳ ಕುಟುಂಬಸ್ಥರು ಕಣ್ಣೀರು ಹಾಕಿದರು. ಆರೋಪಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು.