ಒಂದೇ ಬಾರಿಗೆ 7 ಮಕ್ಕಳ ಹೆತ್ತ ತಾಯಿ!

ಬಾಗ್ದಾದ್ : ಅವಳಿ, ತ್ರಿವಳಿ ಮಕ್ಕಳನ್ನು ಹೆತ್ತ ತಾಯಂದಿರ ಬಗ್ಗೆ ಕೇಳಿದ್ದೇವೆ. ಆದರೆ ಇರಾಕ್​ನಲ್ಲಿ (ದಿಯಾಲಿ ಪ್ರಾಂತ್ಯ) ಒಂದೇ ಬಾರಿಗೆ 6 ಹೆಣ್ಣುಮಕ್ಕಳು ಮತ್ತು 1 ಗಂಡುಮಗುವಿಗೆ 25 ವರ್ಷದ ಮಹಾತಾಯಿ ಒಬ್ಬಳು ಜನ್ಮನೀಡಿದ್ದಾರೆ. ಅದೂ ಕೂಡ ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೆಯೇ. ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಸ್ಥಳೀಯ ಆರೋಗ್ಯ ಇಲಾಖೆ ಅಧಿಕಾರಿ ಫಿರಾಸ್ ಅಲ್ ಇಜ್ಜಾವಿ ಪ್ರಕಟಣೆ ಹೊರಡಿಸಿದ್ದಾರೆ. ಮಧ್ಯಪೂರ್ವ ಪ್ರಾಂತ್ಯದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬಳು ಒಂದೇ ಬಾರಿಗೆ ಏಳು ಮಕ್ಕಳನ್ನು ಹೆತ್ತಿರುವುದು ದಾಖಲೆಯಾಗಿದೆ. ಮಕ್ಕಳ ತಂದೆ ಯೂಸೆಫ್ ಫಾದ್ಲ ಮಾತನಾಡಿ, ‘ನಮಗೆ ನಮ್ಮ ಕುಟುಂಬವನ್ನು ವಿಸ್ತರಿಸುವ ಇಚ್ಛೆ ಇರಲಿಲ್ಲ. ಆದರೆ ಪತ್ನಿ ಗರ್ಭಿಣಿ ಎಂದು ತಿಳಿದ ಕೂಡಲೇ ವೈದ್ಯರನ್ನು ಸಂರ್ಪಸಿದಾಗ ಅವರು ನಮಗೆ ತಿಳಿ ಹೇಳಿದರು. ನಂತರದ ತಿಂಗಳಲ್ಲಿ ಏಳು ಮಕ್ಕಳಿರುವುದು ಗೊತ್ತಾಗುತ್ತಿದ್ದಂತೆ ನನಗೆ ಮತ್ತು ಪತ್ನಿಗೆ ಆಶ್ಚರ್ಯದ ಜತೆಗೆ ಕುತೂಹಲ ಹೆಚ್ಚಿತು. ಈಗ ಸಂತೋಷವಾಗುತ್ತಿದೆ’ ಎಂದಿದ್ದಾರೆ. 1997ರಲ್ಲಿ ವಿಶ್ವದಲ್ಲಿ ಮೊದಲ ಬಾರಿಗೆ ಒಂದೇ ಸಲಕ್ಕೆ ಏಳು ಮಕ್ಕಳ ಜನನವಾಗಿತ್ತು. ಅಮೆರಿಕದ ಲೋವಾ ರಾಜ್ಯದ ದೆಸ್ ಮೊನೀಸ್​ನಲ್ಲಿ ಕೆನ್ನಿ ಮತ್ತು ಬಾಬ್ಬಿಗೆ ಏಳು ಮಕ್ಕಳು (ಸೆಪ್ಟಪ್ಲೆಟ್ಸ್)ಜನಿಸಿದ್ದರು.