ಐಎಂಎ ಜುವೆಲ್ಸ್​ನಲ್ಲಿ 25 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದಕ್ಕೆ ತನ್ನ ಪತಿಗೆ ಪತ್ನಿ ಕೊಟ್ಟ ಶಿಕ್ಷೆ ಏನು ಗೊತ್ತಾ…!?

ಬೆಂಗಳೂರು: ನೂರಾರು ಕೋಟಿ ರೂಪಾಯಿ ವಂಚಿಸಿ ಬಾಗಿಲಿಕ್ಕಿಕೊಂಡಿರುವ ಐಎಂಎ ಜುವೆಲ್ಸ್​ನ ವಂಚನೆಯಿಂದಾಗಿ ಹಲವು ಬಡ ಕುಟುಂಬಗಳು ಬೀದಿಗೆ ಬಿದ್ದಿದ್ದರೆ, ಇನ್ನು ಹಲವು ಕುಟುಂಬಗಳಲ್ಲಿ ಕೌಟುಂಬಿಕ ಕಲಹಗಳು ಉಂಟಾಗಿವೆ. ಕೆಲವು ಕಲಹಗಳು ವಿಚ್ಛೇದನದ ಹಂತದವರೆಗೂ ತಲುಪಿರುವುದು ದುರಂತ.

ಆತ ಹೋಟೆಲ್​ ಉದ್ಯಮ ನಡೆಸಿಕೊಂಡು ಆರಾಮವಾಗಿದ್ದ. ಕೈತುಂಬಾ ಬರುತ್ತಿದ್ದ ಆದಾಯದಲ್ಲಿ ಪತ್ನಿಯೊಂದಿಗೆ ಸುಖ ಜೀವನ ನಡೆಸುತ್ತಿದ್ದ. ಆದರೆ, ಹೆಚ್ಚಿನ ಲಾಭದ ಆಸೆಗೆ ಬಿದ್ದು ಐಎಂಎ ಜುವೆಲ್ಸ್​ನಲ್ಲಿ 25 ಲಕ್ಷ ರೂಪಾಯಿ ಹೂಡಿಕೆ ಮಾಡಿದ. ಇದೀಗ ಐಎಂಎ ಬಾಗಿಲಿಕ್ಕಿಕೊಂಡಿರುವುದರಿಂದ ಆತನ 25 ಲಕ್ಷ ರೂಪಾಯಿ ಹೂಡಿಕೆ ನೋಡುನೋಡುತ್ತಿದ್ದಂತೆ ಮಾಯವಾಗಿದೆ. ವಿಷಯ ತಿಳಿದ 26 ವರ್ಷದ ಈತನ ಪತ್ನಿ ಈತನಿಗೆ ವಿಚ್ಛೇದನ ನೀಡಿ 4 ವರ್ಷದ ಪುತ್ರಿಯೊಂದಿಗೆ ತವರು ಸೇರಿಕೊಂಡಿದ್ದಾಳೆ.

ಇದು ಚಿಕ್ಕಮಗಳೂರಿನ ಮೊಹಮ್ಮದ್​ ಅಮೀರ್​ ಎಂಬಾತನ ಕಥೆ. ಈತ ಹೋಟೆಲ್​ ನಡೆಸುತ್ತಿದ್ದ ಬೆಂಗಳೂರಿನಲ್ಲಿ ಮನೆ ಖರೀದಿಸಲು ನಿರ್ಧರಿಸಿದ್ದ. ಇದಕ್ಕಾಗಿ ತಾನು ತನ್ನ ಗದ್ದೆಯನ್ನು ಮಾರುವುದಾಗಿ ತನ್ನ ಪತ್ನಿ ಅಮ್ರೀನ್​ಗೆ ತಿಳಿಸಿದ್ದ. ಇದಕ್ಕೆ ಆಕೆ ಸಮ್ಮತಿಸಿದ್ದಳು. ಗದ್ದೆಯನ್ನು 25 ಲಕ್ಷ ರೂಪಾಯಿಗೆ ಮಾರಿದ್ದ ಅಮೀರ್​ ಬೆಂಗಳೂರಿನಲ್ಲಿ ಮನೆ ಹುಡುಕಲಾರಂಭಿಸಿದ್ದ.

ಈತನ ಬಳಿ ದೊಡ್ಡ ಮೊತ್ತ ಇರುವುದನ್ನು ತಿಳಿದ ಅಮೀರ್​ನ ಸ್ನೇಹಿತನೊಬ್ಬ ಐಎಂಎಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಬರುತ್ತದೆ. ಬೆಂಗಳೂರಿನಲ್ಲಿ ಒಳ್ಳೆಯ ಮನೆ ಖರೀದಿಸಬಹುದು ಎಂದು ಪುಸಲಾಯಿಸಿ ಮಾರ್ಚ್​ನಲ್ಲಿ ಐಎಂಎಯಲ್ಲಿ ಹೂಡಿಕೆ ಮಾಡಿಸಿದ್ದ. ಕೇವಲ ಮೂರು ತಿಂಗಳ ಅವಧಿಯಲ್ಲಿ ಅಮೀರ್​ ಅತ್ತ ಗದ್ದೆ, ಇತ್ತ ಹಣವನ್ನು ಕಳೆದುಕೊಂಡಿದ್ದಾನೆ. ಜತೆಗೆ ಪತ್ನಿ ಕೂಡ ವಿಚ್ಛೇದನ ನೀಡಿ ಜೀವನವನ್ನೂ ಕಸಿದುಕೊಂಡಿದ್ದಾಳೆ.

ವನಿತಾ ಸಹಾಯವಾಣಿಯ ಮೊರೆ
ವಿಚ್ಛೇದನ ನೀಡಿ ಹೋಗಿರುವ ತನ್ನ ಪತ್ನಿಯನ್ನು ಮತ್ತೊಮ್ಮೆ ಒಂದುಗೂಡಿಸುವಂತೆ ಕೋರಿ 32 ವರ್ಷದ ಅಮೀರ್​ ಬೆಂಗಳೂರು ವನಿತಾ ಸಹಾಯವಾಣಿಯ ಮೊರೆಹೋಗಿದ್ದಾನೆ. ಜೀವನದಲ್ಲಿ ದುಡ್ಡೇ ಮುಖ್ಯವಲ್ಲ. ದುಡ್ಡು ಹೋದರೆ ಮತ್ತೊಮ್ಮೆ ದುಡಿಯಬಹುದು. ಆದರೆ ಸಂಸಾರವೇ ಒಡೆದು ಹೋದರೆ ಮತ್ತೆ ಕಟ್ಟಿಕೊಳ್ಳಲಾಗದು ಎಂದು ಅಮ್ರೀನ್​ಗೆ ಮನವರಿಕೆ ಮಾಡಿಕೊಡುವಂತೆ ಕೇಳಿಕೊಂಡಿದ್ದಾನೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *