ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಬಾಯಿಯಲ್ಲಿ ಸ್ಫೋಟ: ಈ ಬಗ್ಗೆ ವೈದ್ಯರೂ ಹೇಳಿದ್ದೇನು ಗೊತ್ತಾ?

ಅಲಿಗಢ: ವಿಚಿತ್ರ ಬೆಳವಣಿಗೆಯೊಂದರಲ್ಲಿ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ 40 ವರ್ಷದ ಮಹಿಳೆ ಬಾಯಿಯಲ್ಲಿ ಸ್ಫೋಟ ಸಂಭವಿಸಿ ಮೃತಪಟ್ಟಿರುವ ಘಟನೆ ನಡೆದಿದೆ.

ಬುಧವಾರ ಸಂಜೆಯಷ್ಟೇ ವಿಷ ಸೇವಿಸಿದ್ದ ಬಳಿಕ 40 ವರ್ಷದ ಮಹಿಳೆಯನ್ನು ತುರ್ತು ಚಿಕಿತ್ಸೆಗಾಗಿ ಅಲಿಗಢದ ಜೆ ಎನ್‌ ಮೆಡಿಕಲ್‌ ಕಾಲೇಜಿಗೆ ದಾಖಲಿಸಲಾಗಿತ್ತು. ಕೂಡಲೇ ಚಿಕಿತ್ಸೆ ಪ್ರಾರಂಭಿಸಿದ ವೈದ್ಯರು ವಿಷವನ್ನು ಹೊರತೆಗೆಯಲು ಬಾಯಿಯ ಮೂಲಕ ಹೀರು ಕೊಳವೆ (ಸಕ್ಷನ್‌ ಪೈಪ್‌) ಅನ್ನು ಹಾಕಿದ್ದಾರೆ.

ಪೈಪ್‌ ಹಾಕಿದ ಕೆಲವೇ ನಿಮಿಷಗಳಲ್ಲಿ ಮಹಿಳೆಯ ಬಾಯಿಯಲ್ಲಿ ಸ್ಫೋಟ ಸಂಭವಿಸಿ ಮಹಿಳೆ ಮೃತಪಟ್ಟಿದ್ದಾರೆ. ಸ್ಫೋಟದ ದೃಶ್ಯಾವಳಿ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಈ ಕುರಿತು ಕಾರಣ ತಿಳಿಯಲು ಮುಂದಾದ ವೈದ್ಯರ ತಂಡಕ್ಕೆ ಮಹಿಳೆಯು ಗಂಧಕಾಮ್ಲವನ್ನು ಸೇವಿಸಿರುವುದು ತಿಳಿದಿದೆ. ಇದು ಸಕ್ಷನ್ ಪೈಪ್‌ ಮೂಲಕ ಆಮ್ಲಜನಕದ ಸಂಪರ್ಕಕ್ಕೆ ಸಿಲುಕಿದ ಬಳಿಕ ರಾಸಾಯನಿಕ ಕ್ರಿಯೆ ನಡೆದು ಪೈಪ್‌ ಸ್ಫೋಟಗೊಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಸದ್ಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ನಾವು ಸಿಸಿಟಿವಿ ದೃಶ್ಯಾವಳಿಯನ್ನು ಹಲವು ಬಾರಿ ಪರಿಶೀಲಿಸಿದ್ದೇವೆ. ಈ ರೀತಿಯ ಘಟನೆ ವೈದ್ಯಕೀಯ ಇತಿಹಾಸದಲ್ಲೇ ಮೊದಲು. ಈ ಕುರಿತು ಅಧ್ಯಯನದ ಬಳಿಕವಷ್ಟೇ ಸ್ಫೋಟಕ್ಕೆ ನಿಖರ ಕಾರಣ ಹೇಳಲು ಸಾಧ್ಯವಾಗುತ್ತದೆ ಎಂದು ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧಿಕಾರಿ ಎಸ್‌ ಎಸ್‌ ಜೈದಿ ತಿಳಿಸಿದ್ದಾರೆ. (ಏಜೆನ್ಸೀಸ್)