ವೈದ್ಯಾಧಿಕಾರಿ ನಿರ್ಲಕ್ಷೃದಿಂದ ಮಹಿಳೆ ಸಾವು

ಹುಕ್ಕೇರಿ: ಸ್ಥಳೀಯ ಸರ್ಕಾರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಜಗದೀಶ ತುಬಚಿ ನಿರ್ಲಕ್ಷೃದಿಂದ ಸಂಕೇಶ್ವರ ಪಟ್ಟಣದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂದು ಮಹಿಳೆಯ ಪುತ್ರ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಭಾನುವಾರ ಪ್ರಕರಣ ದಾಖಲಿಸಿದ್ದಾರೆ.

ಘಟನೆ ಹಿನ್ನಲೆ: ಸಂಕೇಶ್ವರ ನಿವಾಸಿ,ಪಾರ್ವತಿ ಸಂಜೀವ ಘಸ್ತಿ (45) ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಹುಕ್ಕೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರು. ಅವಳಿಗೆ ಚಿಕಿತ್ಸೆ ನೀಡುತ್ತಿದ್ದ ಮುಖ್ಯ ವೈದ್ಯಾಧಿಕಾರಿ ಜಗದೀಶ ತುಬಚಿ ರೋಗಿಗೆ ಗರ್ಭಕೋಶದ ತೊಂದರೆ ಇದ್ದು ತಕ್ಷಣ ಆಪರೇಷನ್ ಮಾಡಿಸಬೇಕು. ಇಲ್ಲದಿದ್ದರೆ ಬದುಕುವುದಿಲ್ಲ ಎಂದು ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಬಳಿಕ ಶನಿವಾರ ವೈದ್ಯರು ರೋಗಿಗೆ ಆಪರೇಷನ್ ಮಾಡಿದ್ದಾರೆ. ಆಪರೇಷನ್ ನಂತರ ರಕ್ತದೊತ್ತಡ ಮತ್ತು ಶುಗರ್ ಮಟ್ಟ ಕಡಿಮೆಯಾಗುತ್ತಿದೆ. ಹಾಗಾಗಿ ಮಹಿಳೆಯನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ತಕ್ಷಣ ಕರೆದುಕೊಂಡು ಹೋಗಲು ಸೂಚಿಸಿದ್ದಾರೆ. ಬೆಳಗಾವಿಯಲ್ಲಿ ರೋಗಿಯನ್ನು ಪರೀಕ್ಷಿಸಿದ ವೈದ್ಯರು ಪರಿಸ್ಥಿತಿ ಚಿಂತಾಜನಕವಾಗಿದ್ದು, ಕೆ.ಎಲ್.ಇ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲು ಸೂಚಿಸಿದ್ದಾರೆ. ಭಾನುವಾರ ಮಹಿಳೆ ಮೃತಪಟ್ಟಿದ್ದು, ಇದಕ್ಕೆಲ್ಲ ನೇರವಾಗಿ ಹುಕ್ಕೇರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಜಗದೀಶ ತುಬಚಿ ಕಾರಣರಾಗಿದ್ದಾರೆ .ಆದ್ದರಿಂದ ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮೃತಳ ಕಿರಿಯ ಮಗ ಶ್ರೀರಾಮ ಪ್ರಕರಣ ದಾಖಲಿಸಿದ್ದಾರೆ.

ವೈದ್ಯಾಧಿಕಾರಿ ಜಗದೀಶ ತುಬಚಿ ರೋಗಿಯ ಚಿಕಿತ್ಸೆ ಮುಂಚೆ ರಕ್ತ ಮತ್ತು ಬಿಪಿ, ಶುಗರ್ ಪರೀಕ್ಷೆ ಮಾಡಲಿಲ್ಲ. ಆಪರೇಷನ್ ಮಾಡುವ ಮುಂಚೆ ನಮ್ಮಿಂದ 4 ಸಾವಿರ ರೂ. ಪಡೆದಿದ್ದಾರೆ. ಇದೇ ತೆರನಾಗಿ ಆ ದಿನ ಮಾಡಿದ 4 ರಿಂದ 5 ಆಪರೇಷನ್‌ಗೆ ತಲಾ 5 ಸಾವಿರ ರೂ. ಪಡೆದಿದ್ದಾರೆ ಎಂದು ಮೃತ ಮಹಿಳೆಯ ಮಾವ ಮಾರುತಿ ರಾಮಪ್ಪ ಘಸ್ತಿ ಆರೋಪಿಸಿದ್ದಾರೆ.

ಹುಕ್ಕೇರಿ ಸರ್ಕಾರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಕುಡಿದ ಮತ್ತಿನಲ್ಲಿ ಆಸ್ಪತ್ರೆಗೆ ಆಗಮಿಸುವುದರ ಜತೆಗೆ ತಾನು ಚಿಕಿತ್ಸೆ ನೀಡದೆ ಆಸ್ಪತ್ರೆಗೆ ಸಂಬಂಧವಿಲ್ಲದ ಮುಜಾವರ ಎಂಬ ವ್ಯಕ್ತಿ ಮೂಲಕ ರೋಗಿಗಳ ತಪಾಸಣೆ, ಚಿಕಿತ್ಸೆ ಮಾಡಿಸುತ್ತಾರೆ ಎಂದು ಹೆಸರು ಹೇಳಲಿಚ್ಛಿಸದ ಆಸ್ಪತ್ರೆಯ ಸಿಬ್ಬಂದಿ ತಿಳಿಸಿದ್ದಾರೆ.