ಚಿಂತಾಮಣಿಯಲ್ಲಿ ಪ್ರಸಾದ ಸೇವಿಸಿ ಮಹಿಳೆ ಸಾವು, ಹಲವರು ಅಸ್ವಸ್ಥ

ಸುಳ್ವಾಡಿ ದುರಂತ ನೆನಪಿಸಿದ ಪ್ರಕರಣ; ಆತಂಕದಲ್ಲಿ ನಾಗರಿಕರು

ಚಿಕ್ಕಬಳ್ಳಾಪುರ: ಸುಳ್ವಾಡಿಯ ಕಿಚ್ಚುಗುತ್ತಿ ಮಾರಮ್ಮ ದೇಗುಲದಲ್ಲಿ ಪ್ರಸಾದ ಸೇವಿಸಿ ಹಲವರು ಮೃತಪಟ್ಟ ಘಟನೆ ಮಾಸುವ ಮುನ್ನವೇ ಮತ್ತೊಂದು ಅಂತದ್ದೇ ಪ್ರಕರಣ ನಡೆದಿದ್ದು, ಪ್ರಸಾದ ಸೇವಿಸಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದ ಓರ್ವ ಮಹಿಳೆ ಮೃತಪಟ್ಟಿದ್ದಾರೆ.

ಚಿಂತಾಮಣಿ ನಗರದ ನಾರಸಿಂಹ ಪೇಟೆಯಲ್ಲಿರುವ ಗಂಗಮ್ಮ ದೇವಸ್ಥಾನದಲ್ಲಿ ಶುಕ್ರವಾರ ಪ್ರಸಾದ ಸೇವಿಸಿ ಕವಿತಾ(28) ಎಂಬಾಕೆ ಮೃತಪಟ್ಟಿದ್ದು, ಗಂಗಾಧರ, ಗಾನವಿ, ಚರಣ್, ನಾರಾಯಣಮ್ಮ ಮತ್ತು ವೆಂಕಟರಮಣಪ್ಪ ಸೇರಿ ಇತರೆ 9 ಜನರ ಸ್ಥಿತಿ ಗಂಭೀರವಾಗಿದೆ. ಒಟ್ಟು 30 ಮಂದಿ ಪ್ರಸಾದ ಸೇವಿಸಿದ್ದರು ಎನ್ನಲಾಗಿದೆ.

ಅಸ್ವಸ್ಥರನ್ನು ಚಿಂತಾಮಣಿಯ ಖಾಸಗಿ, ಕೋಲಾರದ ಜಾಲಪ್ಪ ಹಾಗೂ ಎಸ್‌ಎನ್‌ಆರ್‌ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಆಸ್ಪತ್ರೆ ಮತ್ತು ದೇವಸ್ಥಾನಕ್ಕೆ ಎಸ್​ಪಿ ಕಾರ್ತಿಕ್ ರೆಡ್ಡಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಾರ್ವಜನಿಕರನ್ನು ವಿಚಾರಣೆ ನಡೆಸಿದ್ದಾರೆ. ಗಂಗಮ್ಮ ದೇವಸ್ಥಾನದ ಟ್ರಸ್ಟಿ, ಅರ್ಚಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ. ಸದ್ಯ ಚಿಂತಾಮಣಿ ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಘಟನೆ ಸಂಬಂಧ ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌ ದಿಗ್ವಿಜಯ ನ್ಯೂಸ್‌ನೊಂದಿಗೆ ಮಾತನಾಡಿ, ಪ್ರತಿ ಶುಕ್ರವಾರ ದೇವಸ್ಥಾನದಲ್ಲಿ ಪ್ರಸಾದವನ್ನು ಮಾಡುವ ಪದ್ಧತಿ ಇದೆ. ಚಿಂತಾಮಣಿ ನಗರದ ನರಸಿಂಹಪೇಟೆಯ ಗಂಗಮ್ಮ ದೇಗುಲದಲ್ಲಿ ಪ್ರಸಾದ ಸೇವಿಸಿದ್ದ 30 ಮಂದಿ ಪೈಕಿ 9 ಜನ ಅಸ್ವಸ್ಥರಾಗಿದ್ದಾರೆ. ಪ್ರಸಾದದ ಸ್ಯಾಂಪಲ್‌ನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಗಂಗಮ್ಮ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿಲ್ಲ. ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್)