ನಿಂತಿದ್ದ ಮೂರು ಕಾರುಗಳಿಗೆ ಎಸ್​ಯುವಿಯಿಂದ ಗುದ್ದಿದಳು: ಬಂಧಿಸ ಹೋದಾಗ ನಗ್ನಳಾಗುವುದಾಗಿ ಪೊಲೀಸರಿಗೆ ಬೆದರಿಸಿದಳು..!

ಪುಣೆ: ಇಲ್ಲಿನ ರಾಮನಗರ ಬಡಾವಣೆಯಲ್ಲಿ ವಾಹನ ನಿಲುಗಡೆ ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರುಗಳಿಗೆ ತನ್ನ ಎಸ್​ಯುವಿ ಕಾರಿನಿಂದ ಪದೇಪದೆ ಗುದ್ದಿಸಿದ ಮಹಿಳೆ, ವಾಹನಗಳನ್ನು ತೀವ್ರವಾಗಿ ಜಖಂ ಗೊಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಆ ಮಹಿಳೆಯ ಮನೆಯ ವಿಳಾಸ ಪತ್ತೆ ಮಾಡಿ ಬಂಧಿಸಲು ಹೋದಾಗ ನಗ್ನಳಾಗುವುದಾಗಿ ಬೆದರಿಸಿದ್ದಲ್ಲದೆ, ಬಟ್ಟೆಯನ್ನು ಬಿಚ್ಚಲಾರಂಭಿಸಿದ್ದಾರೆ!

ಅಲ್ಲದೆ, ಪೊಲೀಸರನ್ನು ಮನಸೋ ಇಚ್ಛೆ ನಿಂದಿಸಿದ್ದಾರೆ. ಬಳಿಕ ಇನ್ನೂ ಹೆಚ್ಚು ತೊಂದರೆ ಕೊಟ್ಟರೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಬೆದರಿಸಿ, ಓಡಿಸಿದ್ದಾರೆ!

ತನ್ನ ಕಾರನ್ನು ಪದೇಪದೆ ಗುದ್ದಿಸಿದರು
34 ವರ್ಷದ ಮಹಿಳೆ ತನ್ನ ಎಸ್​ಯುವಿ ಕಾರಿನಲ್ಲಿ ಬುಧವಾರ ಹೊರಗೆ ಹೋಗಿದ್ದರು. ಮನೆಗೆ ಮರಳುವಾಗ ಪುಣೆಯ ಭಾವದಾನ್​ ಬಡಾವಣೆಯ ರಾಮ್​ಬಾಗ್​ ಕಾಲನಿಯ ಶ್ರೀ ವಿಹಾರ್​ ಸೊಸೈಟಿಯ ವಾಹನ ನಿಲುಗಡೆ ಸ್ಥಳದಲ್ಲಿ ನಿಲ್ಲಿಸಿದ್ದ ಕಾರುಗಳಿಗೆ ತನ್ನ ಕಾರನ್ನು ಗುದ್ದಿಸಲಾರಂಭಿಸಿದ್ದರು. ಇವರು ತಮ್ಮ ವಾಹನವನ್ನು ಪದೇಪದೆ ಕಾರುಗಳಿಗೆ ಗುದ್ದಿಸಿದ್ದರಿಂದ ಮೂರು ಕಾರುಗಳು ತೀವ್ರ ಜಖಂ ಗೊಂಡಿದ್ದವು. ಬಳಿಕ ಅವರು ಆ ಸ್ಥಳದಿಂದ ಪರಾರಿಯಾಗಿದ್ದರು. ಜಖಂಗೊಂಡ ವಾಹನಗಳ ಮಾಲೀಕರು ನಡೆದ ಘಟನೆ ವಿವರಿಸಿ ಹಿಂಜೇವಾಡಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಬಂಧಿಸ ಹೋದ ಪೊಲೀಸರಿಗೆ ಬೆದರಿಕೆ
ಆ ಮಹಿಳೆ ಚಲಾಯಿಸುತ್ತಿದ್ದ ವಾಹನದ ನೋಂದಣಿ ಸಂಖ್ಯೆ ಆಧರಿಸಿ ಆಕೆಯ ವಿಳಾಸವನ್ನು ಪೊಲೀಸರು ಪತ್ತೆ ಮಾಡಿದ್ದರು. ಬಳಿಕ ಪೊಲೀಸರ ಒಂದು ತಂಡ ಆಕೆಯನ್ನು ಬಂಧಿಸಲು ಆಕೆಯ ಮನೆಗೆ ತೆರಳಿತ್ತು. ಪೊಲೀಸರನ್ನು ಕಂಡು ಸಿಟ್ಟಿಗೆದ್ದ ಮಹಿಳೆ ಅವರನ್ನು ನಿಂದಿಸಲು ಆರಂಭಿಸಿದ್ದಲ್ಲದೆ, ಮಾನನಷ್ಟ ಮೊಕದ್ದಮೆಯ ಬೆದರಿಕೆ ಒಡ್ಡಿದರು. ಪೊಲೀಸರು ಇದಕ್ಕೂ ಜಗದಿದ್ದಾಗ ಬಟ್ಟೆ ಬಿಚ್ಚಿ ನಗ್ನಳಾಗುವುದಾಗಿ ಬೆದರಿಸಿದರು ಎನ್ನಲಾಗಿದೆ.

ನಂತರ ಮಹಿಳೆಯ ಪತಿಯನ್ನು ಭೇಟಿಯಾದ ಪೊಲೀಸರು, ಆಕೆಗೆ ಮಾನಸಿಕ ರೋಗ ತಜ್ಞ ವೈದ್ಯರ ಬಳಿ ಕರೆದೊಯ್ದು, ಚಕಿತ್ಸೆ ಕೊಡಿಸುವಂತೆ ಸಲಹೆ ನೀಡಿದರು. ಆನಂತರದಲ್ಲಿ ಮರಳಿ, ಆಕೆಯನ್ನು ವಶಕ್ಕೆ ಪಡೆಯುವುದಾಗಿ ಹೇಳಿ, ತೆರಳಿದರು ಎನ್ನಲಾಗಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *