ಪ್ರೀತಿಸಿ ವಿವಾಹವಾಗಿದ್ದಾಕೆ ವಿಷ ಸೇವಿಸಿ ಆತ್ಮಹತ್ಯೆ: ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ದೂರು

ಹಾಸನ: ಮೂರೂವರೆ ವರ್ಷದ ಹಿಂದೆ ಪ್ರೇಮ ವಿವಾಹ ಮಾಡಿಕೊಂಡಿದ್ದ ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷ ಸೇವಿಸಿ ಅಸ್ವಸ್ಥರಾಗಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಸೋಮವಾರ ಮೃತಪಟ್ಟಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಹಾಸನದ ಶಂಕರಿಪುರಂ ನಿವಾಸಿ ಅಶ್ವಿನಿ (26) ಮೃತರು, ಇಂಜಿನಿಯರಿಂಗ್​ ಪದವೀಧರೆಯಾಗಿದ್ದ ಅಶ್ವಿನಿ ಫ್ರಿಡ್ಜ್​​ ಮೆಕ್ಯಾನಿಕ್​ ನಾಗೇಶ್​ ಎಂಬುವರನ್ನು ಪ್ರೇಮಿಸಿ ಮದುವೆಯಾಗಿದ್ದರು. ಆದರೆ, ದಂಪತಿ ನಡುವೆ ಸಾಮರಸ್ಯದ ಕೊರತೆ ಇತ್ತು ಎನ್ನಲಾಗಿದೆ.

ಸಣ್ಣಪುಟ್ಟ ವಿಷಯಕ್ಕೂ ದಂಪತಿ ನಡುವೆ ಜಗಳವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ. ಆದರೆ, ಅಶ್ವಿನಿ ಅವರ ತಂದೆ ಕೃಷ್ಣಕುಮಾರ್​ ವರದಕ್ಷಿಣೆ ಕಿರುಕುಳದಿಂದಾಗಿ ತಮ್ಮ ಪುತ್ರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹಾಸನ ಮಹಿಳಾ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.