ಬೇಸಿಗೆ ಮಳೆ ಕೈಕೊಟ್ಟು ತೊಂದರೆ

ಪುರುಷೋತ್ತಮ ಭಟ್ ಬದಿಯಡ್ಕ

ಪ್ರತಿವರ್ಷದಂತೆ ಬೇಸಿಗೆ ಮಳೆ ಸುರಿಯಬಹುದೆಂದು ಕಾದಿದ್ದ ಜನರಿಗೆ ನಿರಾಶೆ. ಎಲ್ಲೋ ಅಲ್ಪ ಸ್ವಲ್ಪ ಬಿದ್ದು ಮರೆಯಾದ ಮಳೆ ಭೂಮಿಯನ್ನು ಮತ್ತಷ್ಟು ಬಿಸಿಯೇರಿಸಿದೆ. ಪರಿಣಾಮ ನೀರಿನ ಮಟ್ಟ ಪಾತಾಳ ಕಂಡಿದೆ. ಕೃಷಿಕರು ತಲೆಮೇಲೆ ಕೈಹೊತ್ತು ಕುಳಿತುಕೊಳ್ಳಬೇಕಾಗಿದೆ.

ಕೆಲವು ವರ್ಷಗಳಿಂದ ಮಳೆಗಾಲದಲ್ಲಿ ಸಾಕಷ್ಟು ಮಳೆ ಸುರಿಯದಿದ್ದರೂ ಮಾರ್ಚ್-ಏಪ್ರಿಲ್‌ನಲ್ಲಿ ಪದೇಪದೆ ಮಳೆಯಾಗುವ ಮೂಲಕ ನೀರಿನ ಸಮಸ್ಯೆ ತಕ್ಕ ಮಟ್ಟಿಗೆ ಪರಿಹಾರವಾಗುತ್ತಿತ್ತು. ಕಳೆದ ವರ್ಷ ಕೇರಳವನ್ನೇ ಮುಳುಗಿಸುವ ಮಳೆ ಬಂದರೂ ಸಕಾಲಕ್ಕೆ ಮಳೆ ಬಾರದಿರುವುದು ಭಾರಿ ಪರಿಣಾಮ ಎದುರಿಸುವಂತೆ ಮಾಡಿದೆ. ಹಿಂಗಾರು ಮಳೆ ಕಡಿಮೆ, ಹಾಗೆಯೇ ಬೇಸಿಗೆಯ ಮಳೆ ಮೋಡ ಕವಿದು ಕೇವಲ ಭರವಸೆ ನೀಡಿ ಮಳೆ ಸುರಿಸದೆ ಮಾಯವಾಗುತ್ತಿದೆ. ಇಂದು ಮಳೆ ಬಂದೀತೇ ಎಂದು ಆಕಾಶ ನೋಡಿ ಕಣಿ ಹೇಳಬೇಕಾಗಿದೆ. ಬೇಸಗೆ ಮಳೆ ಬಂದರೆ ಸಸ್ಯ- ಪ್ರಾಣಿ ಸಂಕುಲಕ್ಕೆ ನೀರುಣಿಸುವ ಜೀವನದಿ ಪಯಸ್ವಿನಿ ಬತ್ತುವ ಪ್ರಮೇಯವೇ ಬರುವುದಿಲ್ಲ. ಆದರೆ ಈ ವರ್ಷ ಇದೇ ಸ್ಥಿತಿ ಮುಂದುವರಿದರೆ ಜನರ ಒದ್ದಾಟ ಮುಗಿಲು ಮುಟ್ಟಬಹುದು.

ಒಣಗುತ್ತಿವೆ ಅಡಕೆ ಮರ: ನೀರಿನ ಕೊರತೆ ಎದುರಾದಾಗ ಕೃಷಿಕರು ಕಂಗಾಲಾಗುತ್ತಾರೆ. ಅದರಲ್ಲೂ ಅಡಕೆ ಕೃಷಿಕರು ತಮ್ಮ ವರ್ಷದ ದುಡಿತವೆಲ್ಲವನ್ನೂ ಕಳೆದುಕೊಳ್ಳುವ ದುಸ್ಥಿತಿಗೆ ಒಳಗಾಗುತ್ತಾರೆ. ತಿಂಗಳಿಂದ ನೀರು ಹಾಯಿಸದ ಸಾಕಷ್ಟು ಅಡಕೆ ತೋಟಗಳು ಈ ಪ್ರದೇಶದಲ್ಲಿವೆ. ಇಂಥ ತೋಟಗಳ ಅಡಕೆ ಮರಗಳು ಸಾವಿನಂಚಿನಲ್ಲಿವೆ.

ಕೊಳವೆ ಬಾವಿಯಲ್ಲೂ ನೀರಿಲ್ಲ: ಕೊಳವೆ ಬಾವಿಗಳೂ ನೀರಿಲ್ಲದೆ ಡ್ರೈ ಆಗಿವೆ. ಕೊಳವೆ ಬಾವಿ ತೋಡಿದರೂ ನೀರು ಸಿಕ್ಕೀತೆಂಬ ಗ್ಯಾರಂಟಿ ಇಲ್ಲ. ಇಂಚು ನೀರು ಲೆಕ್ಕ ಹಾಕುತ್ತಿದ್ದವರ ಬಾಯಿಯಿಂದಲೂ ನೀರಿಲ್ಲ ಎಂಬ ಮಾತು. ಒಂದೆಡೆ ಕೊಳವೆ ಬಾವಿ ಕೊರೆದರೆ ಇನ್ನೊಂದು ಬಾವಿಯ ನೀರು ಆರಿ ಹೋಗುತ್ತಿರುವುದಕ್ಕೆ ಸಾಕಷ್ಟು ನಿದರ್ಶನಗಳಿವೆ. ಇಷ್ಟರ ತನಕ ಆರಿರದ ಬಾವಿಗಳಲ್ಲಿ ಈ ವರ್ಷ ನೀರಿನ ಪಸೆಯೂ ಉಳಿದಿಲ್ಲ!

ಪಯಸ್ವಿನಿ ಒಡಲು ಖಾಲಿ: ಪಯಸ್ವಿನಿ ಬತ್ತಿದರೆ ಕಾಸರಗೋಡು ಜಿಲ್ಲೆಯ ದೇಲಂಪಾಡಿ, ಕಾರಡ್ಕ, ಮುಳಿಯಾರು ಮೊದಲಾದ ಗ್ರಾಮ ಪಂಚಾಯಿತಿಗಳಲ್ಲಿ ನೀರಿಗೆ ಹಾಹಾಕಾರ ಆರಂಭವಾಗುತ್ತದೆ. ಈಗ ಪಯಸ್ವಿನಿ ನದಿಯನ್ನು ನೋಡಿದರೆ ನೀರಿನ ಸುಳಿವೇ ಇಲ್ಲದ ಬಯಲಿನ ಅವಸ್ಥೆಯಾಗಿದೆ. ಕಲ್ಲಿನ ಹಾಸು ಎದ್ದು ಕಾಣುತ್ತಿದೆ, ಹಲವೆಡೆ ಮಕ್ಕಳ ಆಟದ ಮೈದಾನವಾಗಿ ಪರಿಣಮಿಸಿದೆ. ನದಿಗೆ ಹೊಂದಿಕೊಂಡಿರುವ ಸಾಕಷ್ಟು ಕೃಷಿಕರು ಪಯಸ್ವಿನಿ ನದಿ ಆಶ್ರಯಿಸುತ್ತಾರೆ. ಕುಡಿಯುವ ನೀರಿಗಾಗಿಯೂ ಉಪಯೋಗಿಸುತ್ತಾರೆ. ಪಯಸ್ವಿನಿ ಉದ್ದಗಲಕ್ಕೂ ಹರಡಿಕೊಂಡಿರುವ ಕಿರು ನೀರಾವರಿ ಯೋಜನೆಗಳು, ಕುಡಿಯುವ ನೀರಿನ ಯೋಜನೆಗಳು ಈಗ ಬಹುತೇಕ ಬಂದ್. ನದಿಯ ಗಯಗಳಲ್ಲಿ ಮಾತ್ರ ಈಗ ನೀರು ಕಾಣಿಸುತ್ತಿದೆ. ಇವು ನದಿಯ ಸಮೀಪದ ಕೆಲವೊಂದು ಮಂದಿಗೆ ಪ್ರಯೋಜನಕಾರಿ. ನೀರಿಲ್ಲದಾಗ ಇಂಥ ಗಯಗಳಲ್ಲಿ ಹತ್ತಾರು ಮೋಟಾರುಗಳು ಸೇರಿಕೊಳ್ಳುತ್ತವೆ. ಇದರ ನೀರು ಹೆಚ್ಚೆಂದರೆ ಒಂದೆರಡು ವಾರಕ್ಕೆ ಸಾಕು!

Leave a Reply

Your email address will not be published. Required fields are marked *