ಕಲಾತಂಡಗಳಿಲ್ಲದೆ ಕಳೆಗುಂದಿದ ಮೆರವಣಿಗೆ

ಯಳಂದೂರು: ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಗೆ ಕಲಾತಂಡಗಳಿಲ್ಲದೆ ಕಳೆಗುಂದಿದ್ದು, ಕಂಸಾಳೆ, ಡೊಳ್ಳು ಹಾಗೂ ಮಂಗಳವಾದ್ಯ ಹೊರತುಪಡಿಸಿ ಯಾವ ಕಲಾತಂಡಗಳು ಭಾಗವಹಿಸಿರಲಿಲ್ಲ.
ಶಾಲಾ-ಕಾಲೇಜು ವಿದ್ಯಾರ್ಥಿಗಳು, ಕೆಲ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು. ಕೆಲವೇ ಕೆಲ ಆಟೋಗಳು ಮಾತ್ರ ಮೆರವಣಿಗೆಯಲ್ಲಿ ಭಾಗವಹಿಸಿದ್ದವು.

ಮೆರವಣಿಗೆ ಷಡಕ್ಷರ ಗದುಗೆಯಿಂದ ಆರಂಭಗೊಂಡಿತು. ತೆರೆದ ವಾಹನದಲ್ಲಿ ಸಮ್ಮೇಳನಾಧ್ಯಕ್ಷರಾದ ಭ್ರಮರಾಂಬ ಹಾಗೂ ತಹಸೀಲ್ದಾರ್ ಗೀತಾ ಹುಡೇದ ಮೆರವಣಿಗೆಯಲ್ಲಿ ಸಾಗಿದರು. ತಾ.ಪಂ. ಅಧ್ಯಕ್ಷ ನಿರಂಜನ್ ಮೆರವಣಿಗೆಗೆ ಕನ್ನಡ ಬಾವುಟ ಹಾರಿಸುವ ಮೂಲಕ ಚಾಲನೆ ನೀಡಿದರು.

ಇದಕ್ಕೂ ಮೊದಲು ಸಮ್ಮೇಳನ ನಡೆಯುವ ಎಂ.ಎನ್.ವ್ಯಾಸರಾವ್ ವೇದಿಕೆಯ ಮುಂಭಾಗ ತಹಸೀಲ್ದಾರ್ ಗೀತಾ ಹುಡೇದ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಪಿಎಸ್‌ಐ ಕೆ.ಕೆ.ಶ್ರೀಧರ್ ನಾಡಧ್ವಜ, ಕಸಾಪ ತಾಲೂಕು ಅಧ್ಯಕ್ಷ ಮದ್ದೂರು ವಿರೂಪಾಕ್ಷ ಪರಿಷತ್ ಧ್ವಜ ನೆರವೇರಿಸಿದರು. ಜಿಲ್ಲಾ ಉಸ್ತುವರಿ ಸಚಿವ ಸಿ.ಪುಟ್ಟರಂಗಶೆಟ್ಟಿ, ಮಾಜಿ ಶಾಸಕರಾದ ಎಸ್.ಜಯಣ್ಣ ಎಸ್. ಬಾಲರಾಜು ಮೆರವಣಿಗೆಯಲ್ಲಿ ಭಾಗವಹಿಸಿದ್ದರು..