More

    ತಲೆಯಲ್ಲಿ ಮೂರು, ಮುಖಕ್ಕೆ ಒಂದು ಬುಲೆಟ್​ ಹೊಕ್ಕಿ ಗಾಯಗೊಂಡರೂ 7 ಕಿ.ಮೀ. ಚಲಿಸಿ ದೂರು ದಾಖಲಿಸಿದ ಮಹಿಳೆ!

    ಚಂಡೀಗಢ: ತಲೆಯಲ್ಲಿ ಮೂರು ಹಾಗೂ ಮುಖಕ್ಕೆ ಒಂದು ಬುಲೆಟ್​ ಹೊಕ್ಕು ಗಾಯಗೊಂಡರೂ ಸುಮಾರು 7 ಕಿ.ಮೀ. ಚಲಿಸಿ ಮಹಿಳೆಯೊಬ್ಬಳು ಜಮೀನು ಕಸಿದ ಪ್ರಕರಣದಡಿಯಲ್ಲಿ ಸಹೋದರ ಮತ್ತು ಸೋದರಳಿಯನ ವಿರುದ್ಧ ದೂರು ನೀಡಿರುವ ಘಟನೆ ಪಂಜಾಬ್​ನ ಮುಕ್ತ್ಸಾರ್​ ಜಿಲ್ಲೆಯಲ್ಲಿ ನಡೆದಿರುವುದಾಗಿ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

    ಸಂತ್ರಸ್ತ ಮಹಿಳೆ ಸುಮಿತ್ ಕೌರ್​(46) ಸೋದರಳಿಯ ಹತ್ತನೇ ತರಗತಿಯ ವಿದ್ಯಾರ್ಥಿಯಾಗಿದ್ದಾನೆ. ಈತನೇ ಸುಮಿತ್​ ಮತ್ತು ಆಕೆಯ ತಾಯಿ ಸುಖಜಿಂದರ್​(65) ಮೇಲೆ ಗುಂಡಿನ ದಾಳಿ ನಡೆಸಿದ ಎಂದು ಆರೋಪಿಸಲಾಗಿದೆ. ಮುಕ್ತ್ಸಾರ್​ ಜಿಲ್ಲೆಯ ಸಮೆವಲಿ ಗ್ರಾಮದಲ್ಲಿರುವ ಜಮೀನು ವಿವಾದ ಹಿನ್ನೆಲೆಯಲ್ಲಿ ಬುಧವಾರ ಸಂಜೆ ಈ ಘಟನೆ ನಡೆದಿದ್ದು, ಸುಖಜಿಂದರ್ ಕಾಲಿಗೆ ಗುಂಡು ತಾಗಿ ಗಂಭೀರವಾಗಿ ಗಾಯಗೊಂಡಿದ್ದಾರೆ.

    ಸಹೋದರ ಹರಿಂದರ್​ ಸಿಂಗ್​ ಮತ್ತು ಸೋದರಳಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

    ಸುಮಿತ್​ಗೂ ಗುಂಡು ತಗುಲಿದ್ದು, ಮೊದಲು ಪೊಲೀಸ್​ ಠಾಣೆಗೆ ತೆರಳಿ ದೂರು ದಾಖಲಿಸಿ ಬಳಿಕ ಆಂಬುಲೆನ್ಸ್​ ಸಹಾಯದಿಂದ ಆಸ್ಪತ್ರೆಗೆ ತೆರಳಿ ಬುಲೆಟ್​ ತೆಗೆಸಿದ್ದಾರೆ. ಸದ್ಯ ಸಂತ್ರಸ್ತೆ ಮಹಿಳೆ ಮತ್ತು ಆಕೆಯ ತಾಯಿ ಇಬ್ಬರು ಕ್ಷೇಮವಾಗಿದ್ದಾರೆ.

    ಈ ಬಗ್ಗೆ ಮಾತನಾಡಿರುವ ವೈದ್ಯ ಮುಕೇಶ್​ ಬನ್ಸಾಲ್​, ತಲೆಯಲ್ಲಿ ಬುಲೆಟ್​ ಹೊಕ್ಕಿದ್ದರೂ ಬದುಕುಳಿದಿರುವುದನ್ನು ನೋಡಿ ಅಚ್ಚರಿಯಾಯಿತು. ಆಕೆಯ ತಲೆಬುರಡೆಯನ್ನು ಬುಲೆಟ್​ ಗಾಯಗೊಳಿಸಿದೆ. ಆದರೆ, ಮೆದುಳು ಪ್ರವೇಶಿಸಲು ವಿಫಲವಾಗಿರುವುದರಿಂದ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ವೈದ್ಯರು ತಿಳಿಸಿಸ್ದಾರೆ.

    ಇದಕ್ಕೂ ಮುಂಚೆಯೂ ದಾಳಿ ನಡೆದಿದೆ
    ತಂದೆ ಮರಣ ನಂತರ 40 ಎಕರೆ ಜಮೀನನ್ನು ನನಗೆ, ನನ್ನ ತಾಯಿಗೆ ಹಾಗೂ ಸಹೋದರನಿಗೆ ಹಂಚಲಾಗಿದೆ. ನಾನು 16 ಎಕರೆ ಪಡೆದಿದ್ದೇನೆ. ಆದಾಗ್ಯ ನನ್ನ ಸಹೋದರ ನಮ್ಮ ಪಾಲನ್ನು ಕಸಿದುಕೊಳ್ಳಲು ಬಯಸುತ್ತಿದ್ದಾರೆ. ಅದಕ್ಕಾಗಿ ನಮ್ಮನ್ನು ಕೊಲ್ಲಲು ಆತನ ಮಗನನ್ನು ಕಳುಹಿಸಿದ್ದಾರೆ ಎಂದು ಸುಮಿತ್​ ದೂರಿನಲ್ಲಿ ತಿಳಿಸಿದ್ದಾರೆ. ಈ ಹಿಂದೆಯೂ ಹಲವು ಬಾರಿ ಹಲ್ಲೆ ನಡೆಸಿರುವುದಾಗಿ ಆರೋಪಿಸಿದ್ದಾರೆ.

    ಸದ್ಯ ದೂರು ದಾಖಲಾಗಿದ್ದು, ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಅಲ್ಲದೆ, ತನಿಖೆ ಕೈಗೊಂಡಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts