ಕನಸುಗಳ ಬೆನ್ನೇರಿದ ಸಾಧಕಿ

| ಉಮೇಶ್ ಕುಮಾರ್ ಶಿಮ್ಲಡ್ಕ

ಪ್ರಸಿದ್ಧಿ, ಸಾಧನೆ ರಾತ್ರಿ ಬೆಳಗಾಗುವುದರೊಳಗೆ ಸಿಗುವಂಥದ್ದೂ ಅಲ್ಲ, ಸಾಧ್ಯವಾಗುವಂಥದ್ದೂ ಅಲ್ಲ. ಬೆಳೆವ ಸಿರಿ ಮೊಳಕೆಯಲ್ಲಿ ಎನ್ನುವ ಗಾದೆ ಎಲ್ಲರಿಗೂ ಅನ್ವಯವಾಗುವುದಿಲ್ಲ. ಅದು ಹುಟ್ಟು ಪ್ರತಿಭೆಗಳಿಗಷ್ಟೇ ಅನ್ವಯ. ಕೆಲವು ಮಕ್ಕಳಲ್ಲಿ ಅವರ ಪಾಲಕರು ಬಿತ್ತುವ ಕನಸು ಇದೆಯಲ್ಲ, ಅದು ಅನೇಕ ಸಂದರ್ಭಗಳಲ್ಲಿ ಕೆಲಸ ಮಾಡಿಬಿಡುತ್ತದೆ. ಆ ಕನಸು ಬಿತ್ತುವ ಶೈಲಿ ಕೆಲವೊಮ್ಮೆ ಬೆದರಿಕೆಯೂ ಆಗಿರಬಹುದು. ಅಂತಹ ಬೆದರಿಕೆಯನ್ನು ಕೇಳುತ್ತ ಕೇಳುತ್ತ ನಾನೇನಾದರೂ ಮಾಡಿ ಆ ಕನಸನ್ನು ಸಾಧಿಸಿಬಿಡಬೇಕೆಂಬ ಛಲ ಮೂಡಿಬಿಡುವ ಸಾಧ್ಯತೆ ಹೆಚ್ಚು. ಹೆಣ್ಣುಮಕ್ಕಳ ಪಾಲಿಗೆ ಹದಿನೆಂಟರಲ್ಲೇ ‘ಮದುವೆ’ ಮಾಡಿ ಗಂಡನ ಮನೆಗೆ ಕಳುಹಿಸುವ ಬೆದರಿಕೆ ಹೆಚ್ಚು ಪರಿಣಾಮಕಾರಿ. ಅದನ್ನು ಈಗಲೂ ಅನೇಕ ಪಾಲಕರು ಮಾಡುತ್ತಿದ್ದಾರೆ ಕೂಡ. ಅಂತಹ ಬೆದರಿಕೆ ಕೇಳುತ್ತ ಕೇಳುತ್ತ ಬೆಳೆದ ಹೆಣ್ಮಗಳು 12 ವರ್ಷ ಜಗತ್ತಿನ ಜನಪ್ರಿಯ ಪಾನೀಯ ಕಂಪನಿಯ ಸಿಇಒ ಆಗಿ, ಅದನ್ನು ಕಿಂಚಿತ್ತೂ ವಿವಾದಕ್ಕೆಡೆ ಇಲ್ಲದಂತೆ ಮುನ್ನಡೆಸಿದ್ದು ಸಾಧನೆಯೇ ಅಲ್ಲವೇ?

ಹೌದು, ಕಳೆದ ವಾರ ಸುದ್ದಿಯಲ್ಲಿದ್ದ ಪೆಪ್ಸಿ ಕಂಪನಿಯ ಸಿಇಒ ಇಂದ್ರಾ ನೂಯಿ ಅವರ ಕುರಿತಾಗಿಯೇ ಪ್ರಸ್ತಾಪಿಸಿದ್ದು. ಹದಿನೆಂಟರಲ್ಲಿ ಇಂಥ ಬೆದರಿಕೆ ಕೇಳುತ್ತ ಬೆಳೆದು 50ನೇ ವಯಸ್ಸಿನಲ್ಲಿ ಜಗತ್ತಿನ ಬೃಹತ್ ಪಾನೀಯ ಕಂಪನಿ ಪೆಪ್ಸಿಯ ಸಿಇಒ ಆಗಿದ್ದ ಇಂದ್ರಾ ನೂಯಿ ಕಳೆದ ವಾರ, ಆ ಹೊಣೆಗಾರಿಕೆಯನ್ನು ಅಕ್ಟೋಬರ್ 3ರಂದು ಆಡಳಿತ ಮಂಡಳಿ ನಿಯೋಜಿಸಿದ ರಮೋನ್ ಲಾಗೊರ್ಟಾರಿಗೆ ವಹಿಸುವುದಾಗಿ ಘೋಷಿಸಿದರು.

ಇಂದ್ರಾ ನೂಯಿ (ವಿವಾಹಕ್ಕೆ ಮುನ್ನ ಇಂದ್ರಾ ಕೃಷ್ಣಮೂರ್ತಿ) ಅವರ ಹೆಸರೇ ಸೂಚಿಸುವಂತೆ ಭಾರತೀಯ ಮೂಲದವರು. 1955ರ ಅಕ್ಟೋಬರ್ 28ರಂದು ಚೆನ್ನೈನಲ್ಲಿ ಜನನ. ತಂದೆ ಕೃಷ್ಣಮೂರ್ತಿ, ಬ್ಯಾಂಕ್ ಉದ್ಯೋಗಿ. ತಾಯಿ ಶಾಂತಾ ಕೃಷ್ಣಮೂರ್ತಿ. ನಾರಾಯಣ ಕೃಷ್ಣಮೂರ್ತಿ ಸಹೋದರ, ಚಂದ್ರಿಕಾ ಟಂಡನ್ ಸಹೋದರಿ. ಮಧ್ಯಮ ವರ್ಗದ ಕುಟುಂಬ. ಇಂದ್ರಾ ಚೆನ್ನೈನ ಹೋಲಿ ಏಂಜೆಲ್ಸ್ ಆಂಗ್ಲೋ ಇಂಡಿಯನ್ ಹೈಯರ್ ಸೆಕೆಂಡರಿ ಸ್ಕೂಲ್, ಮದ್ರಾಸ್ ಕ್ರಿಶ್ಚಿಯನ್ ಕಾಲೇಜ್​ನಲ್ಲಿ ಶಿಕ್ಷಣ ಪಡೆದರು. ಅದೇ ಕಾಲೇಜಿನಲ್ಲಿ ಗಿಟಾರ್ ನುಡಿಸುವುದನ್ನೂ ಕಲಿತು ಅಲ್ಲಿನ ತಂಡ ಸೇರಿದ್ದರು. ಅದೇ ರೀತಿ ಕ್ರಿಕೆಟ್​ನಲ್ಲೂ ಮುಂದಿದ್ದರು. 1974ರಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ವಿಷಯದಲ್ಲಿ ಪದವಿ ಪಡೆದರು. ಆ ಕಾಲಕ್ಕೆ ವಾಣಿಜ್ಯ, ವ್ಯಾಪಾರ ವಿಷಯ ಕಲಿಯುತ್ತಿದ್ದ ಕೆಲವೇ ಕೆಲವು ಮಹಿಳೆಯರ ಪೈಕಿ ಇವರೂ ಒಬ್ಬರಾಗಿದ್ದರು. ಅದಾಗಿ, ಸ್ಪರ್ಧಾತ್ಮಕ ಪರೀಕ್ಷೆ ಬರೆದು ಕಲ್ಕತಾದ ಐಐಎಂನಲ್ಲಿ ಸೀಟುಗಿಟ್ಟಿಸಿಕೊಂಡರು. ಶಿಕ್ಷಣ ಪೂರ್ಣಗೊಂಡ ಬಳಿಕ ಮೆಟ್ಟೂರು ಬೆರ್ಡ್​ಸೆಲ್​ನಲ್ಲೂ, ಮುಂಬೈನ ಜಾನ್ಸನ್ ಆಂಡ್ ಜಾನ್ಸನ್​ನಲ್ಲೂ ಕೆಲಸ ಮಾಡಿದರು. ಜಾನ್ಸನ್ ಆಂಡ್ ಜಾನ್ಸನ್​ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ‘ಸ್ಟೇ ಫ್ರೀ’ ಬ್ರಾ್ಯಂಡ್​ನ ಸ್ಯಾನಿಟರಿ ನ್ಯಾಪ್ಕಿನ್ ಬಿಡುಗಡೆ ಮಾಡುವಲ್ಲಿ ಸಹಕರಿಸಿದರು. ಇದೇ ಸಂದರ್ಭದಲ್ಲಿ ಅಮೆರಿಕದ ಯಾಲೆಗೆ ಹೋಗಿ ಕಲಿಕೆ ಮುಂದುವರಿಸಬೇಕೆಂದು ಬಯಸಿ ವಿದ್ಯಾರ್ಥಿವೇತನಕ್ಕೆ ಪ್ರಯತ್ನಿಸಿ, ಯಶಸ್ವಿಯೂ ಆದರು. ಆಗಿನ ಕಾಲದಲ್ಲಿ ಅವಿವಾಹಿತ ಮಹಿಳೆ ವಿದೇಶಕ್ಕೆ ತೆರಳುವುದೆಂದರೆ ಸಮಾಜದಲ್ಲಿ ಸದ್ದು ಮಾಡುವ ವಿಚಾರವೇ ಆಗಿತ್ತು. ಆದರೆ, ಪಾಲಕರ ಪ್ರೋತ್ಸಾಹ ಸಿಕ್ಕಿದ್ದರಿಂದ ಯಾವುದಕ್ಕೂ ಅಡ್ಡಿಯಾಗಿರಲಿಲ್ಲ. ‘1978ರಲ್ಲಿ 500 ಡಾಲರ್ ಹಣ ಹೊಂದಿಸಿಕೊಂಡು ಅಮೆರಿಕಕ್ಕೆ ಪಯಣ ಬೆಳೆಸಿದೆ. ಅರೆಕಾಲಿಕ ಉದ್ಯೋಗವಾಗಿ ರಿಸೆಪ್ಶನಿಸ್ಟ್ ಕೆಲಸದಿಂದ ಹಿಡಿದು ಬೇರೆ ಬೇರೆ ಕೆಲಸ ಮಾಡುತ್ತ ಯಾಲೆ ಸ್ಕೂಲ್ ಆಫ್ ಮ್ಯಾನೇಜ್​ವೆುಂಟ್​ನಲ್ಲಿ ಪಬ್ಲಿಕ್ ಆಂಡ್ ಪ್ರೖೆವೇಟ್ ಮ್ಯಾನೇಜ್​ವೆುಂಟ್ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು 1980ರಲ್ಲಿ ಪಡೆದೆ. ಇಷ್ಟೆಲ್ಲ ಆಗುವ ಹೊತ್ತಿಗೆ ವಯಸ್ಸು 25ರ ಅಂಚು ತಲುಪಿತ್ತು. ಮದುವೆ ಪ್ರಸ್ತಾಪ ಆಗಿದ್ದರಿಂದ ಅತ್ತ ಗಮನಹರಿಸಿದೆ’ ಎಂದು ಹೇಳಿರುವ ಇಂದ್ರಾ, ಐಟಿ ಕ್ಷೇತ್ರದ ಸಾಧಕ ನಂದನ ನಿಲೇಕಣಿ ಅವರ ಜತೆಗಿನ ಕುಶಲೋಪರಿ(ಎಕನಾಮಿಕ್ ಟೈಮ್್ಸ 2007ರ ಫೆ.7) ವೇಳೆ ಇನ್ನಷ್ಟು ವಿಷಯಗಳನ್ನು ಬಹಿರಂಗಗೊಳಿಸಿದ್ದಾರೆ.

‘ಚೆನ್ನಾಗಿ ಓದಿ ಪ್ರಧಾನಮಂತ್ರಿಯಾದರೆ ಸರಿ ಇಲ್ಲದಿದ್ದರೆ, ಹದಿನೆಂಟಾಗುತ್ತಲೇ ಮದುವೆ ಮಾಡಿಸುತ್ತೇವೆ ಎಂದು ಬಾಲ್ಯದಲ್ಲೇ ಬೆದರಿಸಿ ಕನಸು ಬಿತ್ತಿದ್ದ ಅಮ್ಮ ಪ್ರತಿ ಹಂತದಲ್ಲೂ ನೆನಪಾಗುತ್ತಾರೆ. ಹಾಗೆ, 1980ರಲ್ಲಿ ರಾಜ್ ನೂಯಿ ಜತೆಗೆ ವೈವಾಹಿಕ ಬದುಕಿಗೆ ಕಾಲಿರಿಸಿದೆ. ಅವರು ನನ್ನ ಕನಸುಗಳಿಗೆ ಬೆಂಬಲವಾಗಿ ನಿಂತರು. ಆ ವರ್ಷವೇ ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್​ಗೆ ಸೇರಿದೆ.

ಆರು ವರ್ಷ ಇಂಟರ್​ನ್ಯಾಷನಲ್ ಕಾರ್ಪೆರೇಟ್ ಸ್ಟ್ರಾಟಜಿ ಪ್ರಾಜೆಕ್ಟ್​ಗಳನ್ನು ನಿರ್ವಹಿಸಿದೆ. 1986ರಲ್ಲಿ ಮೋಟೊರೋಲ ಕಂಪನಿಗೆ ಬಿಜಿನೆಸ್ ಡೆವಲಪ್​ವೆುಂಟ್ ಎಕ್ಸಿಕ್ಯೂಟಿವ್ ಆಗಿ ಸೇರಿದೆ. 1990ರಲ್ಲಿ ಸ್ವಿಜರ್ಲೆಂಡ್​ನ ಅಸಿಯಾ ಬ್ರೌನ್ ಬೊವರಿ ಕಂಪನಿ ಸೇರಿ, ಆಡಳಿತ ಮಂಡಳಿಯ ಭಾಗವಾದೆ. 1994ರಲ್ಲಿ ಬದುಕಿಗೆ ಮಹತ್ತರದ ತಿರುವು ಸಿಕ್ಕಿತು. ಅಮೆರಿಕದ ಆಹಾರ ಮತ್ತು ಪಾನೀಯ ಕ್ಷೇತ್ರದ ದಿಗ್ಗಜ ಸಂಸ್ಥೆ ಪೆಪ್ಸಿ ಕಂಪನಿಯಲ್ಲಿ ಹಿರಿಯ ಉಪಾಧ್ಯಕ್ಷರ (ಸೀನಿಯರ್ ವೈಸ್ ಪ್ರೆಸಿಡೆಂಟ್ ಫಾರ್ ಸ್ಟ್ರಾಟಜಿಕ್ ಪ್ಲಾನಿಂಗ್) ಹೊಣೆಗಾರಿಕೆ ಸಿಕ್ಕಿತು’. ‘ದಿನಕ್ಕೆ ನಾಲ್ಕೇ ತಾಸು ನಿದ್ದೆ. ಆ ಮಟ್ಟದ ಹೊಣೆಗಾರಿಕೆ ಇರುವಾಗ ಅಷ್ಟು ನಿದ್ದೆ ಸಾಕಾಗುತ್ತದೆ. ಆರಂಭದಲ್ಲೆಲ್ಲ ಕೆಲಸ ಮುಗಿಸಿ ಮನೆಗೆ ಬಂದು ಅಮ್ಮನ ಜತೆಗೆ ಕಚೇರಿ ವಿಷಯ ಹೇಳೋಣ ಎಂದೆನಿಸುತ್ತಿತ್ತು. ಏನಾದರೂ ಹೇಳಲು ಹೊರಟಾಗಲೇ ಅಮ್ಮ, ಏನಾದರೂ ಕೆಲಸ ಹೇಳುತ್ತಿದ್ದರು. ಹೀಗೆ, ಮನೆ, ಪತಿ, ಮಕ್ಕಳು ಮತ್ತು ಕೆಲಸದ ನಡುವೆ ಹೊಂದಾಣಿಕೆ ಸಾಧಿಸುವುದೇ ಸಾಹಸ’ ಎಂದು ಸ್ಮರಿಸಿಕೊಂಡಿದ್ದರು. ರಾಜ್ ನೂಯಿ ಮಂಗಳೂರು ಸಮೀಪ ಗುರುಪುರದವರು. ರಾಜ್-ಇಂದ್ರಾ ದಂಪತಿಗೆ ಇಬ್ಬರು ಪುತ್ರಿಯರು.

ಇಂತಹ ಇಂದ್ರಾ ಪೆಪ್ಸಿ ಕಂಪನಿಯಲ್ಲಿ ಸುದೀರ್ಘ 24 ವರ್ಷ ಸೇವೆ ಸಲ್ಲಿಸಿದ್ದಾರೆ. ವಿವಿಧ ಹಂತಗಳ ಹೊಣೆಗಾರಿಕೆ ಬಳಿಕ 2006ರಲ್ಲಿ ಕಂಪನಿಯ ಮುಖ್ಯಸ್ಥೆಯನ್ನಾಗಿ ಆಡಳಿತ ಮಂಡಳಿ ನಿಯೋಜಿಸಿತು. ಅಮೆರಿಕನ್ ಕಂಪನಿಯ ಅತ್ಯುನ್ನತ ಹುದ್ದೆಗೇರಿದ ಮೊಟ್ಟ ಮೊದಲ ಮಹಿಳೆ ಎಂಬ ಕೀರ್ತಿಗೆ ಇಂದ್ರಾ ನೂಯಿ ಭಾಜನರಾದರು. ಮುಂದುವರಿದ ರಾಷ್ಟ್ರವಾದರೂ ಅಲ್ಲಿನ ಮಹಿಳೆ ಮಾಡದ ಸಾಧನೆಯನ್ನು ಭಾರತದ ಈ ಮಾತೆ ಮಾಡಿ ತೋರಿಸಿದ್ದರು. ನಂತರದ ಹಾದಿ ಇತಿಹಾಸವೇ ಸರಿ. ವಿಶ್ವದ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಜಾಗ ಗಿಟ್ಟಿಸಿಕೊಂಡು ಕಂಪನಿಯನ್ನೂ ವಿಶ್ವ ಮಟ್ಟದಲ್ಲಿ ಉನ್ನತಿ ಗೇರಿಸಿದರು. ಈ ನಡುವೆ, ಸಹಜವಾದ ವ್ಯಾಪಾರದ ಏರಿಳಿತಗಳು ಇಂದ್ರಾ ಅವರನ್ನೂ ಕಾಡಿದೆ. ಈಗ ಹನ್ನೆರಡು ವರ್ಷಗಳ ಸಿಇಒ ಹೊಣೆಗಾರಿಕೆಯಿಂದ ಮುಕ್ತರಾಗಿ, ಅಧ್ಯಕ್ಷ ಸ್ಥಾನದಲ್ಲಿ ಮುಂದಿನ ವರ್ಷದ ತನಕ ಮುಂದುವರಿಯಲಿರುವ ಇಂದ್ರಾ ಅವರ ಮುಂದಿನ ನಡೆ ಏನು ಎಂಬ ಕುತೂಹಲ ವಾಣಿಜ್ಯ ವಲಯದಲ್ಲಿ ಇದ್ದೇ ಇದೆ.

Leave a Reply

Your email address will not be published. Required fields are marked *