ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ದೊವಲ್​ ಈಗ ದೇಶದ ಅತ್ಯಂತ ಪ್ರಭಾವಿ ಅಧಿಕಾರಿ

ನವದೆಹಲಿ: ತಮ್ಮ ಮೊದಲ ಅಧಿಕಾರವಧಿಯ ಅಂತ್ಯಭಾಗದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ರಕ್ಷಣಾ ಕಾರ್ಯತಂತ್ರ ನೀತಿ ನಿರೂಪಣಾ ಸಮಿತಿ ( Strategic Policy Group -SPG)ಯನ್ನು ರಾಷ್ಟ್ರೀಯ ಭದ್ರತಾ ಮಂಡಿಳಿಗೆ ಸಹಕಾರ ನೀಡುವಂತೆ ಪುನಾರಚನೆ ಮಾಡಲು ನಿರ್ಧಾರ ಕೈಗೊಂಡಿದ್ದಾರೆ. ಹೀಗಾಗಿ ಸದ್ಯ ರಾಷ್ಟ್ರೀಯ ಭದ್ರತಾ (ಎನ್​ಎಸ್​ಎ) ಸಲಹೆಗಾರರಾಗಿರುವ ಅಜಿತ್​ ದೊವಲ್ ಅವರು, ಎಸ್​ಪಿಜಿಯ ಮುಖ್ಯಸ್ಥರಾಗಲಿದ್ದಾರೆ. ಈ ಮೂಲಕ ದೇಶದ ಅತ್ಯಂತ ಪ್ರಭಾವಿ ಅಧಿಕಾರಿಯಾಗಿ ದೊವಲ್​ ಹೊರಹೊಮ್ಮಿದ್ದಾರೆ.

ರಾಷ್ಟ್ರೀಯ ಭದ್ರತಾ ಮಂಡಳಿಯೊಂದಿಗೆ ಸಹಕರಿಸುವ, ಮತ್ತು ದೀರ್ಘಕಾಲೀನ ರಕ್ಷಣಾ ಕಾರ್ಯತಂತ್ರಗಳನ್ನು ಪರಾಮರ್ಶೆಗೆ ಒಳಪಡಿಸುವ ಕಾರ್ಯವ್ಯಾಪ್ತಿಯನ್ನು ಹೊಂದಿರುವ ಎಸ್​ಪಿಜಿ, ಸಚಿವಾಲಯಗಳ ಸಮನ್ವಯತೆಯಲ್ಲೂ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ರಾಷ್ಟ್ರೀಯ ಭದ್ರತಾ ನೀತಿ ನಿರೂಪಣೆಯಲ್ಲಿಯೂ ಕಾರ್ಯನಿರ್ವಹಿಸುತ್ತದೆ ಎಂದು ಗೃಹ ಇಲಾಖೆಯ ಮೂಲಗಳು ತಿಳಿಸಿವೆ.

ಇದಕ್ಕೂ ಹಿಂದೆ ಎಸ್​ಜಿಪಿಗೆ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯಾಗಿದ್ದ ಕ್ಯಾಬಿನೆಟ್​ ಕಾರ್ಯದರ್ಶಿ ಮುಖ್ಯಸ್ಥರಾಗಿದ್ದರು. ಸದ್ಯ ಎಸ್​ಪಿಜಿಯನ್ನು ಬಲಪಡಿಸಿ, ಅದರ ಮುಖ್ಯಸ್ಥರನ್ನಾಗಿ ಅಜಿತ್​ ದೊವಲ್​ ಅವರನ್ನು ನೇಮಿಸಿರುವುದರಿಂದ ಇನ್ನು ಮುಂದೆ ಕ್ಯಾಬಿನೆಟ್​ ಕಾರ್ಯದರ್ಶಿಗಳೂ ಅಜಿತ್​ ದೊವಲ್​ ಅವರಿಗೆ ವರದಿ ಮಾಡಿಕೊಳ್ಳಲಿದ್ದಾರೆ.

ಸದ್ಯ ಎಸ್​ಪಿಜಿ ಅಡಿಯಲ್ಲೇ ನೀತಿ ಆಯೋಗವೂ ಬರಲಿದ್ದು, ಅಜಿತ್​ ದೊವಲ್​ ನೀತಿ ಆಯೋಗದ ಮುಖ್ಯಸ್ಥರಿಗೂ ಹೆಚ್ಚಿನ ಅಧಿಕಾರ ಉಳ್ಳವರಾಗಲಿದ್ದಾರೆ.

ನೀತಿ ಆಯೋಗದಲ್ಲಿ ಅದರ ಅಧ್ಯಕ್ಷರು, ಕ್ಯಾಬಿನೆಟ್​ ಕಾರ್ಯದರ್ಶಿ, ರಕ್ಷಣಾ ಪಡೆಯ ಮೂರೂ ವಿಭಾಗದ ಮುಖ್ಯಸ್ಥರು, ರಿಸರ್ವ್​ ಬ್ಯಾಂಕ್​ ಗವರ್ನರ್​, ವಿದೇಶಾಂಗ ಕಾರ್ಯದರ್ಶಿ, ಗೃಹ ಮತ್ತು ಹಣಕಾಸು ಇಲಾಖೆ ಕಾರ್ಯದರ್ಶಿಗಳು ಸದಸ್ಯರಾಗಿದ್ದಾರೆ. ಅಜಿತ್​ ದೊವಲ್​ ಈ ಎಲ್ಲರಿಗಿಂತಲೂ ಹೆಚ್ಚಿನ ಅಧಿಕಾರವನ್ನು ಹೊಂದಲಿದ್ದಾರೆ. ತಾವು ಬಯಸಿದಾಗ ನಡೆಸುವ ಸಭೆಗಳಿಗೆ ಈ ಎಲ್ಲರೂ ಬರಬೇಕಾದ ಜರೂರಿರುತ್ತದೆ.
1998ರಲ್ಲಿ ಯುಪಿಎ ಅಧಿಕಾರವಧಿಯಲ್ಲಿ ಎಸ್​ಪಿಜಿಯನ್ನು ಅಸ್ತಿತ್ವಕ್ಕೆ ತರಲಾಗಿತ್ತು.