ವಿಪರೀತ ಥಂಡಿಗೆ ಬೆಚ್ಚಿದ ಗಿರಿಜಿಲ್ಲೆ ಜನತೆ

ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿ
ಎರಡ್ಮೂರು ದಿನಗಳಿಂದ ಗಿರಿ ಜಿಲ್ಲೆಯಲ್ಲಿ ಚಳಿಯ ಅಬ್ಬರ ಹೆಚ್ಚಾಗಿದೆ. ವಿಪರೀತ ಥಂಡಿಗೆ ಬೆಚ್ಚಿದ ಜನತೆ ಹಗಲಲ್ಲೂ ಹೊರಗಡೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಯಾವಾಗಲೂ ಸೆಕೆಯಿಂದಲೇ ಕೂಡಿರುವ ಜಿಲ್ಲೆ ಜನತೆ ಫ್ಯಾನ್​ ಅಥವಾ ಏರ್​ಕೂಲರ್  ಇಲ್ಲದೆ ನಿದ್ದೆ ಮಾಡುವುದಿಲ್ಲ. ಆದರೀಗ ಚಳಿಗಾಲ ಇದ್ದುದರಿಂದ ಮೂರು ದಿನಗಳಿಂದ ಜನತೆ ತತ್ತರಿಸುತ್ತಿದ್ದು, ಬೆಳಗ್ಗೆ 8 ಗಂಟೆಯಾದರೂ ಹೊರಗೆ ಬರುತ್ತಿಲ್ಲ. ಇದರಿಂದಾಗಿ 9ರವರೆಗೂ ರಸ್ತೆಗಳೆಲ್ಲ ಬಿಕೋ ಎನ್ನುತ್ತಿವೆ.
ಚಳಿ ಎಫೆಕ್ಟ್​ನಿಂದ  ಮಧ್ಯಾಹ್ನ 3 ಗಂಟೆಯಾದರೂ ಬೆಳಗ್ಗೆ 8ರ ವಾತಾವರಣದ ಅನುಭವವಾಗುತ್ತಿದೆ. ಜನತೆ ಸ್ವೆಟರ್ ಮತ್ತು ಮಾಸ್ಕ್ಗಳಿಗೆ ಮೊರೆ ಹೋಗುತ್ತಿದ್ದರೆ, ಕೆಲವರು ಬೆಳಗ್ಗಿನ ಜಾವ ಬೆಂಕಿ ಕಾಯಿಸಿಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಬಿಸಿಲಿಗೆ ಹೆದರದ ಜಿಲ್ಲೆ ಜನ ಈ ಬಾರಿ ಮೈ ಕೊರೆಯುವ ಶೀತದ ಚಳಿಗೆ ಅಕ್ಷರಶಃ ನಲುಗಿ ಹೋಗಿದ್ದಾರೆ.
ಕಳೆದ ಬಾರಿಗಿಂತ ಈ ಸಲ ಥಂಡಿ ಪ್ರಭಾವ ಹೆಚ್ಚಾಗಿದೆ ಎನ್ನುತ್ತಿದ್ದಾರೆ ನಿವಾಸಿಗಳು. ಬೆಳಗ್ಗಿನ ಜಾವ ಯಾವುದೇ ಹೋಟೆಲ್ನಲ್ಲಿ ನೋಡಿದ್ರೂ ಬಿಸಿ ಬಿಸಿ ಚಹಾ ಕೊಡಿ ಎಂಬ ಮಾತುಗಳೇ ಕಿವಿಗೆ ಬೀಳುತ್ತಿವೆ. ಮನೆಯಲ್ಲಿನ ಮಹಿಳೆಯರು, ಮಕ್ಕಳು ಸೇರಿ ಅನಿವಾರ್ಯ ಕಾರಣದಿಂದ ಬೆಳಗ್ಗೆ ಬೇಗ ಹೊರಗಡೆ ಹೋಗಬೇಕಿರುವವರು ಗೊಣಗುತ್ತಲೇ ಏಳುತ್ತಿದ್ದಾರೆ.
ಇನ್ನುಳಿದವರು ಏಳುವುದು 8 ಗಂಟೆ ನಂತರವೇ. ಚಳಿ ಮಾತ್ರ ಯಾದಗಿರಿ ಜನರನ್ನು ಭಯಭೀತರನ್ನಾಗಿಸಿದೆ. ಚಳಿಗೆ ಮನೆಯಲ್ಲಿರುವವರಿಗೆ ಮಂಡಿ ನೋವು ಶುರುವಾಗಿದ್ದು, ವಯಸ್ಸಾದವರ ಸ್ಥಿತಿ ದೇವರೇ ಗತಿ ಎನ್ನುವಂತಾಗಿದೆ. ಪ್ರತಿವರ್ಷ ಚಳಿಗಾಲದಲ್ಲಿ 18ರಿಂದ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರುತ್ತಿತ್ತು. ಆದರೆ ಪ್ರಸಕ್ತ ಸಾಲಿನಲ್ಲಿ ಇದು 10ರಿಂದ 12 ಡಿಗ್ರಿಗೆ ಇಳಿದಿದೆ ಎನ್ನಲಾಗುತ್ತಿದೆ. ನಗರದಲ್ಲಿ ಇಬ್ಬನಿ ಬೀಳುತ್ತಿದ್ದು, ನಸುಕಿನಲ್ಲಿ ವಾಕಿಂಗ್ ಬರುತ್ತಿದ್ದವರು ಒಂದು ವಾರದಿಂದ ಚಳಿಗೆ ಅಂಜಿ ಮನೆ ಬಿಟ್ಟು ಹೊರಗೆ ಬರುತ್ತಿಲ್ಲ. ಇನ್ನು ಏಲ್ಲಿಯಾದರೂ ಒಬ್ಬಿಬ್ಬರು ವಾಕಿಂಗ್ ಬರುವವರು ಮೈ ತುಂಬ ಸ್ವೆಟರ್ ಧರಿಸಿ, ಮುಖಕ್ಕೆ ಮಂಕಿ ಕ್ಯಾಪ್ ಹಾಕಿಕೊಂಡು ಹೊರ ಬರುತ್ತಿದ್ದಾರೆ.
`ಎನ್ ಸರ್ ಈ ಸರ್ತಿ ಥಂಡಿ ಭಾಳ ಆದ್ ನೋಡ್ರಿ. ಮುಂಜಾನಿ ಆಫೀಸ್ಗ ತಯಾರಾಗಬೇಕಾದ್ರ ಕಣ್ಣಾಗ್ ನೀರೇ ಬರ್ತಾವ್ರಿ. ಚಳಿ ಜಗ್ಗಿ ಇರ ಕಾರಣ ಮೈಯಾಗ ಇರೋ ಬ್ಯಾನಿ ಈಗ ಹೊರಗ್ ಬರ್ಲಿಕತ್ಯಾವ್. ಯಾವಾಗಾರ ಈ ಚಳಿಗಾಲ ಮುಗಿತಾದೋ ಅಂತ ಕಾಯೋಂಗಾಗ್ಯದ’. ಈ ರೀತಿಯ ಉದ್ಗಾರಗಳು ಜನರ ಬಾಯಿಂದ ಕೇಳಿ ಬರುತ್ತಿರುವುದು ಸಾಮಾನ್ಯವಾಗಿದೆ.
ಮುನ್ನೆಚ್ಚರಿಕೆ ಅಗತ್ಯ: ಚಳಿಯಿಂದ ರಕ್ಷಿಸಿಕೊಳ್ಳಲು ಜನತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಯಾದಗಿರಿ ವೈದ್ಯ ಡಾ.ಶರಣರಡ್ಡಿ ಕೋಡ್ಲಾ ಕೆಲ ಟಿಪ್ಸ್ ನೀಡಿದ್ದಾರೆ. ಚಳಿಯಿಂದ ರಕ್ಷಣೆ ಪಡೆಯಲಾದರೂ ಬೆಚ್ಚಗಿನ ಸ್ಕಾರ್ಫ್​ಗಳು ನಿಮ್ಮ ಬಳಿ ಇರಲಿ. ಮಕ್ಕಳಿಗೆ ಐಸ್ಕ್ರೀಮ್ ಕೊಡಿಸುವುದು ಬೇಡವೇ ಬೇಡ. ತಂಪು ಪಾನೀಯ ಸೇವನೆಯಿಂದ ಆದಷ್ಟು ದೂರವಿರಿ. ಒಣ ತ್ವಚೆ ಚಳಿಗಾಲದಲ್ಲಿ ಸರ್ವೇ ಸಾಮಾನ್ಯ. ಅದರಲ್ಲೂ ಕೈಗಳು ಒಡೆಯದಂತೆ ಹ್ಯಾಂಡ್ ಕ್ರೀಮ್ ಬಳಸಿದರೆ ಅನುಕೂಲ. ಪ್ರತಿನಿತ್ಯ ಬೆಳಗ್ಗೆ ಒಂದು ಲೋಟ ಬಿಸಿ ನೀರು ಸೇವಿಸಿ. ಇದು ಅಮೃತಕ್ಕೆ ಸಮಾನ. ಅಸ್ತಮಾ ಕಾಯಿಲೆ ಇದ್ದರೂ ಆದಷ್ಟು ಬೆಚ್ಚನೆ ಸ್ಥಳದಲ್ಲಿದ್ದರೆ ಉತ್ತಮ.