More

    ಇನ್ನು ಚಳಿಗಾಲದ ಕದನ: ನಾಳೆಯಿಂದ ರಾಜ್ಯ ವಿಧಾನಮಂಡಲ ಅಧಿವೇಶನ

    | ವಿಲಾಸ ಮೇಲಗಿರಿ ಬೆಂಗಳೂರು

    ಆಡಳಿತಾರೂಢ ಬಿಜೆಪಿ ಉಪಸಮರ, ಪರಿಷತ್ ಚುನಾವಣೆ ಗೆಲುವಿನ ಹುಮ್ಮಸ್ಸು, ಉಮೇದಿನಲ್ಲಿರುವ ಸಂದರ್ಭದಲ್ಲೇ ಸೋಮವಾರ (ಡಿ.7ರಿಂದ 15) ಆರಂಭವಾಗಲಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವಿನ ಮೇಲಾಟದಿಂದ ಬಿಸಿಯೇರು ವುದು ನಿಚ್ಚಳ. ಬಿಜೆಪಿಯ ಮೈಚಳಿ ಬಿಡಿಸಲು ಪ್ರತಿಪಕ್ಷಗಳು ಅಧಿವೇಶನವನ್ನು ಅಸ್ತ್ರವನ್ನಾಗಿ ಬಳಸಲು ಸಜ್ಜಾಗಿವೆ. ಸರ್ಕಾರದ ವೈಫಲ್ಯ, ಆರ್​ಎಸ್​ಎಸ್​ನ ಹಿಡನ್ ಅಜಂಡಾ ಜಾರಿಯನ್ನು ಪ್ರತಿನಿತ್ಯ ಕೆಣಕುತ್ತಿರುವ ಕಾಂಗ್ರೆಸ್ ಈ ಅಧಿವೇಶನದಲ್ಲಿ ಆ ಎಲ್ಲ ವಿಷಯಗಳನ್ನು ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸನ್ನದ್ಧವಾಗಿದೆ.ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್ ಕಾಯ್ದೆ ಜಾರಿಗೆ ತಂದು ಈಗಾಗಲೇ 2 ಪ್ರಕರಣ ದಾಖಲಿಸಿರುವುದನ್ನು ಉಲ್ಲೇಖಿಸುವ ಮೂಲಕ ರಾಜ್ಯದಲ್ಲಿ ಇಂಥ ಕಾಯ್ದೆ ತರಲು ಮುಂದಾಗಿರುವ ಸರ್ಕಾರಕ್ಕೆ ಬ್ರೇಕ್ ಹಾಕಲು ಪ್ರತಿಪಕ್ಷಗಳು ತಯಾರಿ ನಡೆಸಿವೆ.

    ಲವ್ ಜಿಹಾದ್ ಕಾಯ್ದೆ ಜಾರಿಯಿಂದ ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗುತ್ತದೆ. ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ಬರುತ್ತದೆ. ಜಾತ್ಯತೀತ ರಾಷ್ಟ್ರ ಪರಿಕಲ್ಪನೆಗೆ ಕೊಡಲಿ ಏಟು ಬೀಳುತ್ತದೆ ಎಂದು ಪ್ರತಿಪಾದಿಸುವ ಮೂಲಕ ಈ ಕಾಯ್ದೆ ಹೇಗೆ ಮಾರಕವಾಗಬಹುದು ಎಂಬುದನ್ನು ಮನದಟ್ಟು ಮಾಡಿಕೊಡಲು ಕೆಲವು ಶಾಸಕರು ಅಧ್ಯಯನ ನಿರತರಾಗಿದ್ದಾರೆ.

    ಗೋಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ ಜಾರಿ ವಿಚಾರ ಕೂಡ ವಿಧಾನ ಮಂಡಲದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸುವ ಸಾಧ್ಯತೆ ಇದೆ. ಈ ವಿಚಾರದಲ್ಲಿ ಈಗಾಗಲೇ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಬಹಿರಂಗ ಸವಾಲ್-ಜವಾಬ್​ಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಇಂಬುಕೊಟ್ಟಿವೆ. ಗೋಹತ್ಯೆ ನಿಷೇಧ ಕಾಯ್ದೆಗೆ ತಿದ್ದುಪಡಿ ತರುವುದು ಬೇಡ. ಸಂವಿಧಾನದಲ್ಲಿ ಈಗಾಗಲೇ ಇರುವ ಅವಕಾಶವನ್ನೇ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಲು ಪ್ರತಿಪಕ್ಷಗಳು ತಾಲೀಮು ನಡೆಸಿವೆ.

    ಬಿಜೆಪಿ ಚಿಂತೆ ಏನು?

    ಬಿಜೆಪಿಯಲ್ಲಿನ ರಾಜಕೀಯ ವಿದ್ಯಮಾನಗಳಿಂದಾಗಿ ಚಳಿಗಾಲದ ಅಧಿವೇಶನದ ಬಗ್ಗೆ ಕೆಲವು ಸಚಿವರು ಹಾಗೂ ಶಾಸಕರು ಕೂಡ ನಿರೀಕ್ಷಿಸಿದಷ್ಟು ಉತ್ಸಾಹ ತೋರುವ ಹಾಗೂ ಸರ್ಕಾರವನ್ನು ಸಮರ್ಥಿಸಿಕೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ನಾಯಕತ್ವ ಬದಲಾವಣೆ ವಿಚಾರ, ಗುಂಪುಗಾರಿಕೆ, ಸಂಪುಟ ವಿಸ್ತರಣೆ ವಿಳಂಬ, ಸಚಿವ ಸ್ಥಾನ ಆಕಾಂಕ್ಷಿಗಳ ನಿರಾಸೆ, ನಿಗಮ-ಮಂಡಳಿ ನೇಮಕದಲ್ಲಿ ಏಕಪಕ್ಷೀಯ ನಿರ್ಧಾರ, ಸಚಿವರು ಹಾಗೂ ಬಿಜೆಪಿ ನಾಯಕರ ದ್ವಂದ್ವ ಹೇಳಿಕೆಗಳು ಅಧಿವೇಶನದ ಮೇಲೆ ಕರಿನೆರಳು ಬೀರುವ ಸಾಧ್ಯತೆಗಳಿವೆ.

    ಚರ್ಚೆ ಸಾಧ್ಯತೆ

    (ವಿಪಕ್ಷಗಳ ಪ್ರಮುಖ ಆದ್ಯತೆ)

    *ಸರ್ಕಾರದಲ್ಲಿ ಸಿಎಂ ಪುತ್ರ ವಿಜಯೇಂದ್ರ ನೇರ ಹಸ್ತಕ್ಷೇಪ

    *ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ಆತ್ಮಹತ್ಯೆ ಯತ್ನದ ಕಾರಣ ಬಹಿರಂಗಕ್ಕೆ ಪಟ್ಟು ಹಿಡಿಯುವುದು

    *ಕುರುಬ ಜಾತಿಯನ್ನು ಪರಿಶಿಷ್ಟ ವರ್ಗಕ್ಕೆ ಸೇರ್ಪಡೆ ಮಾಡುವುದು

    *ವೀರಶೈವ ಅಭಿವೃದ್ಧಿ ನಿಗಮ ರಚನೆ ಹಾಗೂ ಅದಕ್ಕೆ ಘೋಷಿಸಿರುವ ಬಹು ದೊಡ್ಡ ಮೊತ್ತ, ಮರಾಠ ನಿಗಮ, ಕಾಡುಗೊಲ್ಲ ಅಭಿವೃದ್ಧಿ ನಿಗಮ ರಚನೆ ಗೊಂದಲ

    *ಕರೊನಾ ನಿರ್ವಹಣೆಯಲ್ಲಿನ ವೈಫಲ್ಯ

    *ನೆರೆಪೀಡಿತ ಪ್ರದೇಶಗಳ ಕಡೆಗಣನೆ, ಅನುದಾನ ಕೊರತೆ, ಸಂತ್ರಸ್ತರ ಪಡಿಪಾಟಲನ್ನು ಎತ್ತಿ ತೋರಿಸಿ ಜನರಿಗೆ ಸರ್ಕಾರದ ಸೋಲನ್ನು ಮನಗಾಣಿಸುವುದು

    ಬಿಜೆಪಿ ಪ್ರತಿತಂತ್ರ

    ಸರ್ಕಾರ ಕೂಡ ಪ್ರತಿಪಕ್ಷಗಳಿಗೆ ತಕ್ಕ ಉತ್ತರ ನೀಡಲು ಸಜ್ಜಾಗಿದೆ. ನೆರೆ, ಬರದ ವಿಚಾರದಲ್ಲಿ ಕೇಂದ್ರ ಬಿಡುಗಡೆ ಮಾಡಿರುವ ಅನುದಾನವನ್ನು ಅಂಕಿ-ಸಂಖ್ಯೆ ಸಮೇತ ಎತ್ತಿ ಹೇಳಿ ಪ್ರತಿಪಕ್ಷಗಳಿಗೆ ಕೌಂಟರ್ ಕೊಡಲು ಕಂದಾಯ ಸಚಿವ ಅಶೋಕ್ ತುದಿಗಾಲ ಮೇಲೆ ನಿಂತಿದ್ದಾರೆ. ಇದರ ಜತೆಗೆ ಸರ್ಕಾರದ ಬಗ್ಗೆ ಜೆಡಿಎಸ್ ತೋರುತ್ತಿರುವ ಮೃದುಧೋರಣೆಯನ್ನು ಬಳಸಿಕೊಂಡು ಕಾಂಗ್ರೆಸ್ಸನ್ನು ಎದುರಿಸಲು ಬಿಜೆಪಿ ತಯಾರಾಗಿದೆ.

    ಸಭಾಪತಿ ವಿರುದ್ಧ ಅವಿಶ್ವಾಸ

    ವಿಧಾನ ಪರಿಷತ್​ನಲ್ಲಿ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ವಿರುದ್ಧ ಅವಿಶ್ವಾಸಕ್ಕೆ ಬಿಜೆಪಿ ನೋಟಿಸ್ ನೀಡಿದೆ. ಜೆಡಿಎಸ್ ನೆರವಿನಲ್ಲಿ ಗೆಲುವು ಸಾಧಿಸಿದರೆ ಹೊಸ ಸಭಾಪತಿ ಆಯ್ಕೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.

    ಸುಗ್ರೀವಾಜ್ಞೆ ವಿಧೇಯಕ

    ಕಳೆದ ಅಧಿವೇಶನದಲ್ಲಿ ಭೂ ಸುಧಾರಣೆ, ಎಪಿಎಂಸಿ ತಿದ್ದುಪಡಿ ವಿಧೇಯಕಗಳು ಪರಿಷತ್​ನಲ್ಲೇ ಸ್ಥಗಿತವಾದವು. ಅವುಗಳನ್ನು ಮತ್ತೆ ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಲಾಗಿತ್ತು. ಆ ಕಾಯ್ದೆಗಳಿಗೆ ಅಧಿವೇಶನದಲ್ಲಿ ಅಂಗೀಕಾರ ಪಡೆದುಕೊಳ್ಳಲಾಗುತ್ತದೆ.

    ಸುನೀಲ್ ಪತ್ರ ಚರ್ಚೆ

    ವಿಧಾನಸಭೆಯ ಸರ್ಕಾರದ ಮುಖ್ಯ ಸಚೇತಕ ಸುನೀಲ್ ಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬರೆದ ಪತ್ರವನ್ನು ಬಳಸಿಕೊಂಡು ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಸಂದೇಶವನ್ನು ಜನರಿಗೆ ತಲುಪಿಸಲು ಪ್ರತಿಪಕ್ಷಗಳು ಮುಂದಾಗಿವೆ.

    ಶಾಸಕರ ಸಭೆ ಸಾಧ್ಯತೆ:

    ಅಧಿವೇಶನ ಆರಂಭವಾದ ಒಂದೆರಡು ದಿನಗಳಲ್ಲಿ ಮುಖ್ಯಮಂತ್ರಿಗಳು ಶಾಸಕರು, ಸಚಿವರ ಸಭೆ ಕರೆದು ಪ್ರತಿಪಕ್ಷವನ್ನು ಯಾವ ರೀತಿ ಎದುರಿಸಬೇಕು ಎಂದು ಹೇಳುವ ಜತೆಗೆ ಒಗ್ಗಟ್ಟು ಪ್ರದರ್ಶಿಸಲು ಕಿವಿಮಾತು ಹೇಳಲಿದ್ದಾರೆ ಎನ್ನಲಾಗಿದೆ.

    ‘ಒಂದು ದೇಶ, ಒಂದು ಚುನಾವಣೆ’ ಕುರಿತ ಚರ್ಚೆಗೆ 2 ದಿನ ನಿಗದಿಪಡಿಸಲಾಗಿದೆ. ಕೇಂದ್ರ ಸರ್ಕಾರದ ಉದ್ದೇಶಿತ ಕಾಯ್ದೆ ಬಗ್ಗೆ ಅನೇಕ ಶಾಸಕರು, ಸಚಿವರು ಅಧ್ಯಯನ ಮಾಡಿಕೊಂಡು ಬಂದು ಸಾಧಕ-ಬಾಧಕಗಳನ್ನು ಮಂಡಿಸಲಿದ್ದಾರೆ.

    ಮೊಟಕು ಸಂಭವ

    ಅಧಿವೇಶನ ದಿನಾಂಕ ನಿಗದಿಯಾದ ನಂತರ ರಾಜ್ಯ ಚುನಾವಣಾ ಆಯೋಗ ಗ್ರಾಪಂ ಚುನಾವಣೆಗೆ ದಿನಾಂಕ ನಿಗದಿ ಮಾಡಿದೆ. ಆ ಹಿನ್ನೆಲೆಯಲ್ಲಿ ಅಧಿವೇಶನ ಒಂದು ವಾರದ ಬದಲು ಎರಡು ದಿನಕ್ಕೆ ಮೊಟಕಾದರೂ ಆಶ್ಚರ್ಯವಿಲ್ಲ.

    ಬಿಜೆಪಿ ಪ್ರತಿತಂತ್ರ

    ಸರ್ಕಾರ ಕೂಡ ಪ್ರತಿಪಕ್ಷಗಳಿಗೆ ತಕ್ಕ ಉತ್ತರ ನೀಡಲು ಸಜ್ಜಾಗಿದೆ. ನೆರೆ, ಬರದ ವಿಚಾರದಲ್ಲಿ ಕೇಂದ್ರ ಬಿಡುಗಡೆ ಮಾಡಿರುವ ಅನುದಾನವನ್ನು ಅಂಕಿ-ಸಂಖ್ಯೆ ಸಮೇತ ಎತ್ತಿ ಹೇಳಿ ಪ್ರತಿಪಕ್ಷಗಳಿಗೆ ಕೌಂಟರ್ ಕೊಡಲು ಕಂದಾಯ ಸಚಿವ ಅಶೋಕ್ ತುದಿಗಾಲ ಮೇಲೆ ನಿಂತಿದ್ದಾರೆ. ಇದರ ಜತೆಗೆ ಸರ್ಕಾರದ ಬಗ್ಗೆ ಜೆಡಿಎಸ್ ತೋರುತ್ತಿರುವ ಮೃದುಧೋರಣೆಯನ್ನು ಬಳಸಿಕೊಂಡು ಕಾಂಗ್ರೆಸ್ಸನ್ನು ಎದುರಿಸಲು ಬಿಜೆಪಿ ತಯಾರಾಗಿದೆ.

    ವಿಪಕ್ಷಗಳ ಅಸ್ತ್ರ

    ಗೋಹತ್ಯೆ ನಿಷೇಧ, ಲವ್ ಜಿಹಾದ್ ವಿಧೇಯಕ ವಿಚಾರಗಳ ಜತೆಗೆ ಭ್ರಷ್ಟಾಚಾರ, ವರ್ಗಾವಣೆ ದಂಧೆ ಮತ್ತಿತರ ವಿಷಯಗಳನ್ನು ಕೈಗೆತ್ತಿ ಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ನಾಯಕರು ಯುದ್ಧೋತ್ಸಾಹ ತೋರಲಿದ್ದಾರೆ. ಬಿಜೆಪಿ ಯಲ್ಲಿನ ನಾಯಕತ್ವ ಬದಲಾವಣೆ, ಸಂಪುಟ ವಿಚಾರದ ಗೊಂದಲಗಳಿಂದ ಅಧಿಕಾರಶಾಹಿ ನಿಷ್ಕ್ರಿಯತೆ, ಆಡಳಿತದ ಮೇಲಾಗಿರುವ ದುಷ್ಪರಿಣಾಮ ಎತ್ತಿ ತೋರಿಸುವುದು ಪಕ್ಷದ ತಂತ್ರ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts