ರಾಜಧಾನಿಯಲ್ಲಿ 6 ವರ್ಷಗಳಲ್ಲೇ ಅತ್ಯಧಿಕ ಚಳಿ!

ಬೆಂಗಳೂರು: ನಗರದಲ್ಲಿ ಕನಿಷ್ಠ ತಾಪಮಾನ ಮತ್ತೆ 12 ಡಿಗ್ರಿ ಸೆಲ್ಸಿಯಸ್ ಆಸುಪಾಸಿಗೆ ಕುಸಿದಿದ್ದು, ಮೈಕೊರೆಯುವ ಚಳಿಯ ವಾತಾವರಣ ಸೃಷ್ಟಿಯಾಗಿದೆ.

ಮಂಗಳವಾರ ನಗರದಲ್ಲಿ ಕನಿಷ್ಠ ತಾಪಮಾನ 12.3 ಡಿಗ್ರಿ ಸೆಲ್ಸಿಯಸ್​ಗೆ ಕುಸಿದಿದೆ. ಮುಂದಿನ ನಾಲ್ಕೈದು ದಿನ ಚಳಿ ಹೆಚ್ಚಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜ.2ರಂದು ನಗರದಲ್ಲಿ ಕನಿಷ್ಠ ತಾಪಮಾನ 12.4 ಡಿಗ್ರಿ ಸೆಲ್ಸಿಯಸ್​ಗೆ ಕುಸಿದಿತ್ತು. ಇದಾದ ನಂತರ ಕನಿಷ್ಠ ತಾಪಮಾನ 13-15 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲೇ ಏರಿಳಿಕೆಯಾಗುತ್ತಿತ್ತು.

ದಾಖಲೆ ಚಳಿ: ಜನವರಿಯಲ್ಲಿ ಸಾಮಾನ್ಯವಾಗಿ ಕನಿಷ್ಠ ತಾಪಮಾನ ಸರಾಸರಿ 15.8 ಡಿಗ್ರಿ ಸೆಲ್ಸಿಯಸ್ ಇರುತ್ತ್ತೆ. ಚಳಿಗಾಲದಲ್ಲಿ ಜನವರಿಯಲ್ಲೇ ಅತಿಹೆಚ್ಚು ಚಳಿ ದಾಖಲಾಗುತ್ತದೆ. ಜ.15ರ ಚಳಿ ಕಳೆದ 6 ವರ್ಷದ ದಾಖಲೆ ಮುರಿದಿದೆ. 2012 ಜ.16ರಂದು ನಗರದಲ್ಲಿ ಕನಿಷ್ಠ ತಾಪಮಾನ 12 ಡಿಗ್ರಿ ಸೆಲ್ಸಿಯಸ್​ಗೆ ಕುಸಿದಿತ್ತು. ಇದಾದ ಬಳಿಕ 2019 ಜ.2ರಂದು ಕನಿಷ್ಠ ತಾಪಮಾನ 12.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಮಂಗಳವಾರ (ಜ.15) ನಗರ ಕೇಂದ್ರ ಭಾಗದಲ್ಲಿ 12.3 ಡಿಗ್ರಿ ಸೆಲ್ಸಿಯಸ್, ಎಚ್​ಎಎಲ್ ವಿಮಾನ ನಿಲ್ದಾಣ ಪ್ರದೇಶದಲ್ಲಿ 12.2 ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶದಲ್ಲಿ 14.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ.

ರಾತ್ರಿ ಹಾಗೂ ಬೆಳಗಿನ ಜಾವದಲ್ಲಿ ಮೈಕೊರೆಯುವ

ಚಳಿ ಎಷ್ಟಿದೆಯೋ ಅದರಷ್ಟೇ ಮಧ್ಯಾಹ್ನದ ವೇಳೆ ಮೈಸುಡುವ ಬಿಸಿಲಿನ ವಾತಾವರಣ ನಗರದಲ್ಲಿದೆ. ಜ.19ರವರೆಗೆ ನಗರದಲ್ಲಿ ಕನಿಷ್ಠ ತಾಪಮಾನ 13-14 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ ತಾಪಮಾನ 29-30 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಹಲವು ಜಿಲ್ಲೆಗಳಲ್ಲಿ ಹೆಚ್ಚಿದ ಚಳಿ: ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ಕುಸಿಯುತ್ತಿದೆ. ಆಗುಂಬೆಯಲ್ಲಿ 8.9 ಡಿಗ್ರಿ ಸೆಲ್ಸಿಯಸ್, ದಾವಣಗೆರೆಯಲ್ಲಿ 9.8, ಮಡಿಕೇರಿಯಲ್ಲಿ 10.3, ಶಿವಮೊಗ್ಗದಲ್ಲಿ 12.8, ಮಂಡ್ಯದಲ್ಲಿ 13.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಕಳೆದೊಂದು ತಿಂಗಳಿಂದ ನಿರಂತರವಾಗಿ ಮೈಕೊರೆಯುವ ಚಳಿ ಇದೆ.