ಚಳಿಗಾಲದಲ್ಲೂ ರಬ್ಬರ್ ಹಾಲು ಕೊರತೆ!

«ಇನ್ನೂ ಚಿಗುರಿಲ್ಲ ರಬ್ಬರ್ ತೋಟ *ಮಿತಿಮೀರಿದ ಮಳೆ ಪ್ರಮಾಣದಿಂದ ಶಿಲೀಂದ್ರ ಬಾಧೆ»

ಶ್ರವಣ್‌ಕುಮಾರ್ ನಾಳ, ಪುತ್ತೂರು
ಈ ಚಳಿಗಾಲದಲ್ಲಿ ರಬ್ಬರ್ ಕೃಷಿಕನ ಮುಖದಲ್ಲಿ ಮಂದಹಾಸವಿಲ್ಲ!
ಹಿಂದೆಲ್ಲ ಚಳಿಗಾಲದಲ್ಲಿ ರಬ್ಬರ್ ಉತ್ತಮ ಆದಾಯ ತಂದುಕೊಡುತ್ತಿತ್ತು. ಆದರೆ, ಈ ಬಾರಿ ಅಧಿಕ ಪ್ರಮಾಣದ ಮಳೆಯಿಂದ ಅಕಾಲಿಕವಾಗಿ ರಬ್ಬರ್ ಎಲೆ ಉದುರುತ್ತಿದ್ದು, ಇಳುವರಿ ಶೇ.70 ಕಡಿಮೆಯಾಗಿದೆ. ಧಾರಣೆ ಕುಸಿತದ ಬರೆ ಜತೆಗೆ ಇಳುವರಿ ಕುಸಿತದ ಪರಿಣಾಮ ರಬ್ಬರ್ ಬೆಳೆಗಾರ ಹೈರಾಣಾಗಿದ್ದಾನೆ.
2014ರಿಂದ ರಬ್ಬರ್ ಮಾರುಕಟ್ಟೆ ನಿರಂತರ ಧಾರಣೆ ಕುಸಿತದ ಹಾದಿಯಲ್ಲಿದೆ. 2017ರ ಆರಂಭದಲ್ಲಿ ರಬ್ಬರ್‌ಗೆ ಉತ್ತಮ ಬೆಲೆ ಬಂದಿತ್ತು, ಆದರೆ, ಗಗನಕ್ಕೇರುತ್ತಿದ್ದ ರಬ್ಬರ್ ಬೆಲೆ ಈಗ ಮತ್ತೆ ಪಾತಾಳಕ್ಕೆ ಇಳಿಯುತ್ತಿದೆ. ಗುಣಮಟ್ಟದ ರಬ್ಬರ್ ಪೂರೈಕೆ ಕೊರತೆಯಿಂದ ಬೆಲೆ ಇಳಿಕೆ ಒಂದೆಡೆ. ಇನ್ನೊಂದೆಡೆ ಮಿತಿಮೀರಿದ ಮಳೆಗೆ ಬಹುತೇಕ ರಬ್ಬರ್ ಗಿಡಗಳೆಲ್ಲ ಶಿಲೀಂದ್ರ ಬಾಧೆ ಕಾಣಿಸಿಕೊಂಡಿದೆ. ನಿಗದಿತ ಸಮಯದಲ್ಲಿ ಎಲೆ ಉದುರುವಿಕೆಯಾಗಿಲ್ಲ. ಈ ಕಾರಣಕ್ಕಾಗಿ ಇನ್ನೂ ರಬ್ಬರ್ ತೋಟಗಳಲ್ಲಿ ಹೊಸ ಎಲೆ ಚಿಗುರಿಲ್ಲ.
ನಿಯಂತ್ರಣಕ್ಕೆ ಬಾರದ ಶಿಲೀಂದ್ರ ಬಾಧೆ: ಕಳೆದ ಕೆಲವು ಮಳೆಗಾಲದಲ್ಲಿ ಬೆರಳೆಣಿಕೆಯ ರಬ್ಬರ್ ಗಿಡಗಳಲ್ಲಿ ಮಾತ್ರ ಶಿಲೀಂದ್ರ ಬಾಧೆ ಕಂಡುಬರುತ್ತಿತ್ತು. ಆದರೆ, ಕಳೆದ ಮಳೆಗಾಲದಿಂದ ಕರಾವಳಿಯ ಬಹುತೇಕ ರಬ್ಬರ್ ತೋಟಗಳು ಶಿಲೀಂದ್ರ ಬಾಧೆ ತುತ್ತಾಗಿವೆ. ಈ ಬಾಧಿತ ರಬ್ಬರ್ ಗಿಡದ ಬೇರು ತನ್ನ ಸ್ವಾಭಾವಿಕ ಕ್ರಿಯೆಗಳನ್ನು ದಿನದಿಂದ ದಿನಕ್ಕೆ ಕಡಿಮೆಗೊಳಿಸುವ ಪರಿಣಾಮ ಮರ ಸೊರಗುತ್ತಿದೆ. ಇಂತಹ ಸೊರಗಿದ ರಬ್ಬರ್ ಗಿಡಗಳಿಂದ ಗುಣಮಟ್ಟದ ರಬ್ಬರ್ ಸಿಗುತ್ತಿಲ್ಲ.

ಸಾಂಕ್ರಾಮಿಕ ರೋಗ
ಅತಿ ಮಳೆಯೇ ಶಿಲೀಂದ್ರ ರೋಗಕ್ಕೆ ಕಾರಣ. ರೋಗಸ್ಥ ಮರ ಆರು ತಿಂಗಳಲ್ಲಿ ಯಾವುದೇ ರೀತಿಯ ಬದಲಾವಣೆ ಕಾಣದೆ ಸ್ಥಿರವಾಗಿರುತ್ತದೆ. ಆದರೆ, ರಬ್ಬರ್ ಹಾಲಿನ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆ ಆಗಿ ಗುಣಮಟ್ಟದಲ್ಲಿ ಬದಲಾವಣೆ ಉಂಟಾಗುತ್ತದೆ. ಆರು ತಿಂಗಳು ಕಳೆದ ಬಳಿಕ ಮರದ ಎಲೆ ಹಳದಿ ಬಣ್ಣಕ್ಕೆ ತಿರುಗಿ ಮರದ ಬೇರು ಒಣಗಲು ಆರಂಭಗೊಳ್ಳುತ್ತದೆ. ನಂತರ ಕಾಂಡ ಒಣಗಿ ಎಲೆ ಉದುರಲಾರಂಭಿಸಿ ಹಂತ ಹಂತವಾಗಿ ಮರ ಸಾಯುತ್ತದೆ. ರೋಗಲಕ್ಷಣ ಕಂಡುಬಂದ ಮರಕ್ಕೆ ಬಹುತೇಕ ಬೆಳೆಗಾರರು ಮಾರುಕಟ್ಟೆಯಲ್ಲಿ ಲಭ್ಯವಿರುವ ಟಿಲ್ಟ್ ಎಂಬ ಕೀಟನಾಶಕ ಸಿಂಪಡಿಸಿ ಹತೋಟಿಗೆ ತಂದಿದ್ದಾರೆ. ಆದರೆ, ಈ ವರ್ಷ ರೋಗಕ್ಕೆ ತುತ್ತಾದ ಮರ ತನ್ನ ಮೂಲ ಆರೋಗ್ಯವನ್ನೇ ಕಳೆದುಕೊಳ್ಳುತ್ತ್ತಿದೆ.

ಹೊಸ ನಾಟಿಯೇ ಸೂಕ್ತ ಪರಿಹಾರ
ಒಂದು ಬಾರಿ ರಬ್ಬರ್ ಗಿಡಗಳಲ್ಲಿ ಶಿಲೀಂದ್ರ ಬಾಧೆ ಕಂಡುಬಂದರೆ, ಅದರ ನಿಯಂತ್ರಣ ಸಾಧ್ಯವಿಲ್ಲ. ಶಿಲೀಂದ್ರ ಬಾಧೆಗೊಳಗಾದ ರಬ್ಬರ್ ತೋಟ ಹಾಗೂ ಮರಗಳನ್ನು ಕಡಿದು ಹೊಸ ನಾಟಿ ಮಾಡುವುದೇ ಸೂಕ್ತ ಪರಿಹಾರ ಎಂದು ಕೇರಳದ ಕೃಷಿ ಸಂಶೋಧಕ ಹಾಗೂ ರಬ್ಬರ್ ಕೃಷಿಕ ಮಾಧವನ್ ನಾಯಕ್ ಸಲಹೆ ನೀಡಿದ್ದಾರೆ. ರಬ್ಬರ್ ಗಿಡಗಳು ಇತರ ಸಸ್ಯವರ್ಗದಂತಲ್ಲ, ರಬ್ಬರ್ ಗಿಡಗಳಿಗೆ ರೋಗ ನಿಯಂತ್ರಣ, ರೋಗ ಪ್ರತಿಕಾರಕಗಳನ್ನು ಉತ್ಪಾದಿಸುವ ಶಕ್ತಿ ಇಲ್ಲ. ಸ್ವಾಭಾವಿಕವಾಗಿ ಬೆಳೆಯುವ ಈ ಸಸ್ಯವರ್ಗಕ್ಕೆ ಒಂದು ಬಾರಿ ಯಾವುದೇ ರೋಗ ತಗುಲಿದರೆ, ನಿಧಾನವಾಗಿ ಚಟುವಟಿಕೆ ಸ್ಥಗಿತಗೊಳಿಸುತ್ತದೆ ಎಂದು ತಿಳಿಸಿದ್ದಾರೆ.

ಈ ಬಾರಿ ಮಿತಿಮೀರಿದ ಮಳೆಯಿಂದ ರಬ್ಬರ್ ತೋಟಗಳಲ್ಲಿ ಅಕಾಲಿಕ ಎಲೆ ಉದುರುವಿಕೆ ಕಂಡುಬಂದಿದೆ. ಇದು ಶಿಲೀಂದ್ರ ಬಾಧೆಯ ಪ್ರಭಾವ. ಮಳೆಗಾಲದಲ್ಲಿ ಎಲ್ಲ ರಬ್ಬರ್ ಗಿಡಗಳಿಗೆ ಶಿಲೀಂದ್ರ ನಿಯಂತ್ರಕ ದ್ರಾವಣ ಸಿಂಪಡಣೆಯೂ ಸಾಧ್ಯವಾಗಿಲ್ಲ. ಇದು ಶಿಲೀಂದ್ರ ಬಾಧೆಗೆ ಕಾರಣ.

ಕರ್ನಲ್ ಎಸ್.ಶರತ್ ಭಂಡಾರಿ, ಅಧ್ಯಕ್ಷ, ಅಖಿಲ ಕರ್ನಾಟಕ ರಬ್ಬರ್ ಬೆಳೆಗಾರರ ಸಂಘ