ವಿಶ್ವಕಪ್​ನಲ್ಲಿ 70 ಕೋಟಿ ರೂ. ಪಣಕ್ಕೆ!

ಲಂಡನ್: ಇಂಗ್ಲೆಂಡ್ ಆತಿಥ್ಯದಲ್ಲಿ ನಡೆಯಲಿರುವ 12ನೇ ಆವೃತ್ತಿಯ ಏಕದಿನ ವಿಶ್ವಕಪ್ ಟೂರ್ನಿಯ ಬಹುಮಾನ ಮೊತ್ತವನ್ನು ಐಸಿಸಿ ಶುಕ್ರವಾರ ಪ್ರಕಟಿಸಿದೆ.

ಒಟ್ಟಾರೆ 10 ದಶಲಕ್ಷ ಯುಎಸ್ ಡಾಲರ್ (70.17 ಕೋಟಿ ರೂ.) ಬಹುಮಾನ ಮೊತ್ತದಲ್ಲಿ ಈ ಬಾರಿಯ ಟೂರ್ನಿ ನಡೆಯಲಿದೆ. ವಿಜೇತ ತಂಡ 28 ಕೋಟಿ ರೂ. ಬಹುಮಾನ (4 ದಶಲಕ್ಷ ಯುಎಸ್ ಡಾಲರ್) ಗೆಲ್ಲಲಿದೆ. ಇದು ಈವರೆಗಿನ ವಿಶ್ವಕಪ್​ನ ಗರಿಷ್ಠ ಬಹುಮಾನ ಮೊತ್ತ ಎನಿಸಿದೆ.

ರನ್ನರ್​ಅಪ್ ತಂಡ 14 ಕೋಟಿ ರೂ. ಜಯಿಸಲಿದೆ. ಅದಲ್ಲದೆ, ಪ್ರತಿ ಪಂದ್ಯದ ಗೆಲುವಿಗೂ ತಂಡಕ್ಕೆ ಭತ್ಯೆ ಕೂಡ ಸಿಗಲಿದೆ. ಸೆಮಿಫೈನಲ್ ಹಂತದಲ್ಲಿ ಸೋತ ಎರಡೂ ತಂಡಗಳು ತಲಾ 5.5 ಕೋಟಿ ರೂ. ಬಹುಮಾನ ಪಡೆಯಲಿವೆ. ಲೀಗ್ ಹಂತದಲ್ಲಿ ಪ್ರತಿ ಗೆಲುವಿಗೆ ತಂಡವೊಂದು 28 ಲಕ್ಷ ರೂ. ಹಾಗೂ ಲೀಗ್ ಹಂತ ದಾಟಿದ (ಸೆಮಿಫೈನಲ್ಸ್, ಫೈನಲ್) ಆರು ತಂಡಗಳು 70 ಲಕ್ಷ ರೂ. ಗೆಲ್ಲಲಿವೆ. ಮೇ 30ರಿಂದ ಇಂಗ್ಲೆಂಡ್-ವೇಲ್ಸ್​ನ 11 ತಾಣಗಳಲ್ಲಿ 10 ತಂಡಗಳು 46 ದಿನಗಳ ಕಾಲ ಹೋರಾಡಲಿವೆ. ಜುಲೈ 14ರಂದು ಫೈನಲ್ ಪಂದ್ಯ ಲಾರ್ಡ್ಸ್​ನಲ್ಲಿ ನಡೆಯಲಿದೆ.

ಧ್ಯೇಯಗೀತೆ ಬಿಡುಗಡೆ

ಏಕದಿನ ವಿಶ್ವಕಪ್ ಟೂರ್ನಿಯ ಅಧಿಕೃತ ಧ್ಯೇಯಗೀತೆಯನ್ನು ಐಸಿಸಿ ಶುಕ್ರವಾರ ಅನಾವರಣ ಮಾಡಿದೆ. ಹೊಸ ಪ್ರತಿಭೆ ಲೋರ್ಯನ್ ಹಾಗೂ ಬ್ರಿಟನ್​ನ ಅತ್ಯಂತ ಯಶಸ್ವಿ ಬ್ಯಾಂಡ್ ರುಡಿಮೆಂಟಲ್ ‘ಸ್ಯಾಂಡ್ ಬೈ’ ಹೆಸರಿನ ಗೀತೆಯನ್ನು ರಚಿಸಿದೆ. ಎಲ್ಲ ಆನ್​ಲೈನ್ ಸ್ಟ್ರೀಮಿಂಗ್ ವೇದಿಕೆಗಳಲ್ಲಿ ಇದು ಲಭ್ಯವಿದ್ದು, ಮೇ 30ರಂದು ಆರಂಭವಾಗಿ ಇಂಗ್ಲೆಂಡ್​ನ ಎಲ್ಲ ಕ್ರಿಕೆಟ್ ಮೈದಾನಗಳು ಹಾಗೂ ವಿಶ್ವಕಪ್ ಕುರಿತಾದ ಕಾರ್ಯಕ್ರಮಗಳಲ್ಲಿ ಈ ಗೀತೆ ಬಿತ್ತರವಾಗಲಿದೆ ಎಂದು ಐಸಿಸಿ ತಿಳಿಸಿದೆ.

Leave a Reply

Your email address will not be published. Required fields are marked *