ಮನೆಗೆ ಹೋಗದೆ ಶ್ರೀನಗರದ ವಾಯುನೆಲೆಗೆ ತೆರಳಿದ ವಿಂಗ್​ ಕಮಾಂಡರ್​ ಅಭಿನಂದನ್​

ನವದೆಹಲಿ: ನಾಲ್ಕು ವಾರಗಳ ಅನಾರೋಗ್ಯದ ರಜೆಯಲ್ಲಿರುವ ಭಾರತೀಯ ವಾಯುಪಡೆಯ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ಅವರು ತಮ್ಮ ಕುಟುಂಬಸ್ಥರೊಂದಿಗೆ ಕಾಲ ಕಳೆಯದೆ, ಶ್ರೀನಗರದ ವಾಯುನೆಲೆಗೆ ತೆರಲಿದ್ದಾರೆ ಎಂದು ತಿಳಿದು ಬಂದಿದೆ.

ಭಾರತದ ವಾಯುಪ್ರದೇಶವನ್ನು ಅಕ್ರಮವಾಗಿ ಪ್ರವೇಶ ಮಾಡಿದ್ದ ಪಾಕಿಸ್ತಾನದ ಯುದ್ಧ ವಿಮಾನಗಳನ್ನು ಬೆನ್ನತ್ತಿ ಹೋಗಿ ಹೊಡೆದುರುಳಿಸಿ, ನಂತರ ಅಲ್ಲಿನ ಸೇನೆಗೆ ಸೆರೆಸಿಕ್ಕು ಬಿಡುಗಡೆಯಾಗಿದ್ದ ಅಭಿನಂದನ್​ ಅವರ ವಿಚಾರಣೆ ನಡೆಸಲಾಗಿತ್ತು. ವಿಚಾರಣೆ ಪೂರ್ಣಗೊಂಡ ಬಳಿಕ ನಾಲ್ಕು ವಾರಗಳ ಅನಾರೋಗ್ಯದ ರಜೆ ಮೇಲೆ ತೆರಳುವಂತೆ ವಾಯುಪಡೆ ಸೂಚನೆ ನೀಡಿತ್ತು.

ಅನಾರೋಗ್ಯದ ರಜೆಯ ಸಂದರ್ಭದಲ್ಲಿ ಚೆನ್ನೈನಲ್ಲಿರುವ ಅವರ ಕುಟುಂಬಸ್ಥರೊಂದಿಗೆ ಕಾಲ ಕಳೆಯುವ ಆಯ್ಕೆ ಇತ್ತು. ಆದರೆ ಅವರು ಶ್ರೀನಗರ ವಾಯುನೆಲೆಯಲ್ಲಿರುವ ತಮ್ಮ ಸ್ಕ್ವಾಡ್ರನ್​ ಜತೆಯಲ್ಲಿ ರಜೆ ಕಳೆಯಲು ನಿರ್ಧರಿಸಿ ಅಲ್ಲಿಗೆ ತೆರಳಿದ್ದಾರೆ. ಪ್ರಸ್ತುತ ಅವರು ತಮ್ಮ ಸಹೋದ್ಯೋಗಿಗಳೊಂದಿಗೆ ಮತ್ತು ತಮ್ಮ ನೆಚ್ಚಿನ ಯುದ್ಧ ವಿಮಾನಗಳೊಂದಿಗೆ ಕಾಲ ಕಳೆಯುತ್ತಿದ್ದಾರೆ. ರಜೆ ಪೂರ್ಣಗೊಂಡ ಬಳಿಕ ಅವರು ದೆಹಲಿಗೆ ವಾಪಸ್ಸಾಗಲಿದ್ದಾರೆ. ಇಲ್ಲಿ ವೈದ್ಯಕೀಯ ಮಂಡಳಿಯು ಅವರ ದೈಹಿಕ ಸಾಮರ್ಥ್ಯದ ಪರೀಕ್ಷೆ ನಡೆಸಲಿದ್ದು, ಅವರು ಕರ್ತವ್ಯಕ್ಕೆ ಮರಳಲು ಸದೃಢರಾಗಿದ್ದಾರೆ ಎಂಬುದನ್ನು ನಿರ್ಧರಿಸಲಿದೆ ಎಂದು ವಾಯುಪಡೆಯ ಮೂಲಗಳು ತಿಳಿಸಿವೆ.

ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದಿದ್ದ ಜೈಷ್​ ಎ ಮೊಹಮದ್​ ಸಂಘಟನೆಯ ಭಯೋತ್ಪಾದನಾ ದಾಳಿಗೆ ಉತ್ತರವಾಗಿ ಭಾರತೀಯ ಸೇನೆಯೂ ಪಾಕಿಸ್ತಾನದ ಬಾಲಾಕೋಟ್​ನಲ್ಲಿರುವ ಉಗ್ರರ ಅಡಗುದಾಣಗಳ ಮೇಲೆ ದಾಳಿ ನಡೆಸಿತ್ತು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳುವ ಸಲುವಾಗಿ ಪಾಕಿಸ್ತಾನವು ಭಾರತದ ಮೇಲೆ ದಾಳಿ ಮಾಡುವ ಉದ್ದೇಶದಿಂದ ಹಲವು ಯುದ್ಧ ವಿಮಾನಗಳನ್ನು ಭಾರತದತ್ತ ರವಾನಿಸಿತ್ತು. ಈ ಯುದ್ಧ ವಿಮಾನಗಳನ್ನು ಹಿಮ್ಮೆಟ್ಟಿಸಲು ಹೊರಟಿದ್ದ ಭಾರತೀಯ ವಾಯುಸೇನೆಯ ವಿಂಗ್​ ಕಮಾಂಡರ್​ ಪಾಕಿಸ್ತಾನದ F16 ಅನ್ನು ಹೊಡೆದುರುಳಿಸಿದ್ದರು. ಈ ಕಾಳಗದಲ್ಲಿ ಅಭಿನಂದನ್​ ವಿಮಾನಕ್ಕೂ ಹಾನಿಯಾಗಿ ಅದು ಪಾಕಿಸ್ತಾನದಲ್ಲೆ ಪತನವಾಗಿತ್ತಾದರೂ, ಅಭಿನಂದನ್​ ಪ್ಯಾರಾಚೂಟ್​ ಬಳಸಿ ಪಾಕಿಸ್ತಾನದಲ್ಲಿ ಇಳಿದಿದ್ದರು. ನಂತರ ಅವರನ್ನು ಅಲ್ಲಿನ ಸೇನೆ ಬಂಧಿಸಿ ಎರಡು ದಿನಗಳ ನಂತರ ಬಿಡುಗಡೆ ಮಾಡಿತ್ತು.