ಆರು ತಿಂಗಳ ಬಳಿಕ ಮಿಗ್​ 21 ಯುದ್ಧವಿಮಾನದ ಕಾಕ್​ಪಿಟ್​ಗೆ ಮರಳಿದ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​

ನವದೆಹಲಿ: ಪಾಕಿಸ್ತಾನದ ಎಫ್​ 16 ಯುದ್ಧವಿಮಾನವನ್ನು ಹೊಡೆದುರುಳಿಸಿ, ಶತ್ರು ರಾಷ್ಟ್ರದವರಿಗೆ ಸೆರೆ ಸಿಕ್ಕಿದ್ದರೂ ಧೈರ್ಯದಿಂದ ಪರಿಸ್ಥಿತಿಯನ್ನು ಎದುರಿಸಿ, ರಾಷ್ಟ್ರಕ್ಕೆ ಮರಳಿ ಬಂದ ಭಾರತೀಯ ವಾಯುಪಡೆಯ ವಿಂಗ್​ ಕಮಾಂಡರ್​ ವೀರ ಚಕ್ರ ಪುರಸ್ಕೃತ ಅಭಿನಂದನ್​ ವರ್ಧಮಾನ್ ಮತ್ತೆ ​ಮಿಗ್​ 21 ಯುದ್ಧವಿಮಾನದ ಕಾಕ್​ಪಿಟ್​ಗೆ ಮರಳಿದ್ದಾರೆ.

ಸದ್ಯ ರಾಜಸ್ಥಾನದ ವಾಯುನೆಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಂಗ್​ ಕಮಾಂಡರ್​ ಅಭಿನಂದನ್​ ಮತ್ತೊಮ್ಮೆ ಮಿಗ್​ ಯುದ್ಧವಿಮಾನದ ಕಾಕ್​ಪಿಟ್​ನಲ್ಲಿ ಕುಳಿತುಕೊಂಡಿದ್ದಾಗಿ ವಾಯುಪಡೆ ಮೂಲಗಳು ತಿಳಿಸಿವೆ.
ಪಾಕಿಸ್ತಾನದ ಬಾಲಾಕೋಟ್​ನಲ್ಲಿರುವ ಉಗ್ರರ ನೆಲೆಗಳ ಮೇಲೆ ಭಾರತೀಯ ವಾಯುಪಡೆ ಯೋಧರು ದಾಳಿ ನಡೆಸಿದ ಬೆನ್ನಲ್ಲೇ ಭಾರತದ ವೈಮಾನಿಕ ಗಡಿಯೊಳಗೆ ಪ್ರವೇಶಿಸಲು ಪಾಕ್​ ಯುದ್ಧವಿಮಾನಗಳು ಯತ್ನಿಸಿದ್ದವು.

ಆ ಯುದ್ಧವಿಮಾನಗಳನ್ನು ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಎಫ್​ 16 ಯುದ್ಧವಿಮಾನವನ್ನು ತಮ್ಮ ಮಿಗ್​ 21 ಬೈಸನ್​ ಯುದ್ಧವಿಮಾನದಲ್ಲಿ ಬೆನ್ನಟ್ಟಿದ್ದ ಅಭಿನಂದನ್​ ಅದನ್ನು ಹೊಡೆದುರುಳಿಸಿದ್ದರು. ಈ ಜಟಾಪಟಿಯಲ್ಲಿ ಅವರಿದ್ದ ಯುದ್ಧವಿಮಾನವೂ ಹಾನಿಗೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರು ವಿಮಾನದಿಂದ ಹೊರ ಜಿಗಿದು ಪ್ರಾಣ ಉಳಿಸಿಕೊಳ್ಳಲು ಪ್ರಯತ್ನಿಸಿದ್ದರು.

ಈ ಪ್ರಯತ್ನದಲ್ಲಿ ಅವರು ತೀವ್ರವಾಗಿ ಗಾಯಗೊಂಡಿದ್ದರು. ಹಾಗೂ ಪಾಕ್​ ಆಕ್ರಮಿತ ಕಾಶ್ಮೀರದೊಳಗೆ ಇಳಿದಿದ್ದರಿಂದ ಪಾಕ್​ ಯೋಧರು ಅಭಿನಂದನ್​ ಅವರನ್ನು ಬಂಧಿಸಿದ್ದರು. ಬಳಿಕ ಭಾರತ ಸರ್ಕಾರ ಪಾಕಿಸ್ತಾನದ ಮೇಲೆ ಜಾಗತಿಕ ಒತ್ತಡ ಹೇರಿತ್ತು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಅಭಿನಂದನ್​ ಅವರನ್ನು ಈ ವರ್ಷದ ಮಾರ್ಚ್​ 1ರಂದು ಬಿಡುಗಡೆ ಮಾಡಿತ್ತು.

3 ವಾರಗಳ ಹಿಂದೆ ಅನುಮತಿ
ಗಾಯಗೊಂಡಿದ್ದ ಅಭಿನಂದನ್​ ಸಂಪೂರ್ಣ ಗುಣಮುಖರಾದ ಬಳಿಕ ಬೆಂಗಳೂರಿನಲ್ಲಿರುವ ಏರೋಸ್ಪೇಸ್​ ಮೆಡಿಸಿನ್​ ಆಸ್ಪತ್ರೆಯಲ್ಲಿ ಸಮಗ್ರ ಪರೀಕ್ಷೆಗೆ ಒಳಪಟ್ಟಿದ್ದರು. ಇವರನ್ನು ಪರೀಕ್ಷಿಸಿದ್ದ ಏರೋಸ್ಪೇಸ್​ ಮೆಡಿಸಿನ್​ ಆಸ್ಪತ್ರೆಯ ವೈದ್ಯರು ಯುದ್ಧವಿಮಾನಗಳನ್ನು ಚಲಾಯಿಸಲು ಅಭಿನಂದನ್​ ಸಂಪೂರ್ಣ ಸಮರ್ಥರಾಗಿರುವುದಾಗಿ ಪ್ರಮಾಣೀಕರಿಸಿ, ವಿಮಾನ ಚಲಾಯಿಸಲು ಅನುಮತಿ ನೀಡಿದ್ದರು. (ಏಜೆನ್ಸೀಸ್​)

Leave a Reply

Your email address will not be published. Required fields are marked *