ಅತ್ಯಧಿಕ ಮತಗಳ ಅಂತರದಿಂದ ಕಾಂಗ್ರೆಸ್‌ಗೆ ಗೆಲುವು

ಹನೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್.ಧ್ರುವನಾರಾಯಣ 30,000ಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಶಾಸಕ ಆರ್.ನರೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಚುನಾವಣಾ ಪ್ರಚಾರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಹನೂರು ಕ್ಷೇತ್ರವು ಬಹುಮುಖ್ಯ ಪಾತ್ರವಹಿಸಲಿದೆ. ಈ ಕ್ಷೇತ್ರವು 2009ರ ಚುನಾವಣೆಯಲ್ಲಿ 8,000, 2014ರ ಚುನಾವಣೆಯಲ್ಲಿ 28 ಸಾವಿರ ಮತಗಳ ಅಂತರ ನೀಡಿತ್ತು. ಈ ಬಾರಿಯೂ ಹೆಚ್ಚಿನ ಅಂತರ ನೀಡಲಾಗುವುದು ಎಂದರು.

ಕಳೆದ ಬಾರಿ 75 ದಿನಗಳ ಮುಂಚೆಯೇ ಪ್ರಚಾರ ಕಾರ್ಯ ಆರಂಭಿಸಲಾಗಿತ್ತು. ಈ ಬಾರಿ 15 ದಿನಗಳು ಮಾತ್ರ ದೊರಕಿದೆ. ಈ ಹಿನ್ನೆಲೆ ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು ಮತ್ತು ಕಾರ್ಯಕರ್ತರು ಚುನಾವಣೆಯ ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದರು.

ಸಂಸದ ಆರ್. ಧ್ರುವನಾರಾಯಣ ಅವರಿಗೆ ಇದು 3ನೇ ಚುನಾವಣೆಯಾಗಿದ್ದು, ಕಳೆದ 2 ಚುನಾವಣೆಗಳಲ್ಲೂ ಹನೂರು ಕ್ಷೇತ್ರ ಬಹುಮುಖ್ಯ ಪಾತ್ರವಹಿಸಿದೆ ಎಂದರು.

ಸಂಸದರಿಂದ 2 ದಿನಗಳ ಪ್ರಚಾರ: ಸಂಸದ ಧ್ರುವನಾರಾಯಣ ಏ.2 ಮತ್ತು 12ರಂದು ಕ್ಷೇತ್ರದಲ್ಲಿ ಪ್ರಚಾರ ಮಾಡಲಿದ್ದಾರೆ. 2 ರಂದು ಸತ್ತೇಗಾಲ, ಪಾಳ್ಯ, ಲೊಕ್ಕನಹಳ್ಳಿ ಮತ್ತು ಹನೂರು ಪಟ್ಟಣ, 12ರಂದು ಕೌದಳ್ಳಿ, ಮಾರ್ಟಳ್ಳಿ, ರಾಮಾಪುರ ಮತ್ತು ಬಂಡಳ್ಳಿಯಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಜಿಪಂ ಅಧ್ಯಕ್ಷೆ ಶಿವಮ್ಮ, ಸದಸ್ಯರಾದ ಬಸವರಾಜು, ಮರುಗದಮಣಿ, ತಾಪಂ ಅಧ್ಯಕ್ಷ ರಾಜೇಂದ್ರ, ಸದಸ್ಯ ರಾಜು ಮುಖಂಡರಾದ ಪಾಳ್ಯಕೃಷ್ಣ, ಕೊಪ್ಪಾಳಿ ಮಹಾದೇವ ನಾಯ್ಕ, ಚಿಕ್ಕತಮ್ಮಯ್ಯ, ಗುಂಡಾಪುರ ಜಯರಾಜು, ಈಶ್ವರ್, ಕೆಂಪಯ್ಯ, ಚಾಂದ್‌ಪಾಷ ಭಾಗವಹಿಸಿದ್ದರು.