ಎನ್ನೊಡಲಾದಡೆ ಎನ್ನಿಚ್ಛೆಯಲ್ಲಿರದೆ?
ನಿನ್ನೊಡಲಾದಡೆ ನಿನ್ನಿಚ್ಛೆಯಲ್ಲಿರದೆ?
ಅದು ಎನ್ನೊಡಲೂ ಅಲ್ಲ, ನಿನ್ನೊಡಲೂ ಅಲ್ಲ;
ಅದು ನೀ ಮಾಡಿದ ಜಗದ
ಬಿನ್ನಾಣದೊಡಲು ಕಾಣಾ, ರಾಮನಾಥ!
ಒಡಲಿನ ಕುರಿತಾದ ವಿವೇಚನೆಯೊಂದು ಪ್ರಸ್ತುತ ವಚನದ ಕೇಂದ್ರದಲ್ಲಿದೆ. ಇಲ್ಲಿ ಒಡಲನ್ನು ಕುರಿತ ಪ್ರಶ್ನೆಯಿದೆ; ಉತ್ತರವೂ ಇದೆ. ಈ ಪ್ರಶ್ನೋತ್ತರಗಳ ಹೆಣಿಗೆಯ ಮೂಲಕವೇ ಇಲ್ಲಿ ಅಸ್ತಿತ್ವವನ್ನು ಕುರಿತ ಮೀಮಾಂಸೆಯೊಂದು ಕೂಡ ಮಂಡಿತವಾಗುತ್ತಿದೆ.
ಒಡಲಿಗೆ ಸಂಬಂಧಿಸಿದಂತೆ ಇಲ್ಲೊಂದು ತ್ರಿಕೋನ ಸೃಷ್ಟಿಯಾಗಿದೆ. ಇದರ ಒಂದು ಬಿಂದುವಿನಲ್ಲಿ ರಾಮನಾಥನಿದ್ದರೆ, ಇನ್ನೊಂದು ಬಿಂದುವಿನಲ್ಲಿ ‘ಒಡಲಿಗ’ನಾದ ನಿರೂಪಕನಿದ್ದಾನೆ. ಮತ್ತೊಂದು ಬಿಂದುವಿನಲ್ಲಿ ಈ ಒಡಲು ಎಲ್ಲಿ ಅಸ್ತಿತ್ವ ಪಡೆದುಕೊಂಡಿದೆಯೋ ಆ ‘ಜಗ’ ಎನ್ನುವುದಿದೆ. ಈ ಮೂರು ಬಿಂದುಗಳ ಹೆಣಿಗೆಯಲ್ಲಿಯೇ ಇಲ್ಲಿ ಒಡಲನ್ನು ಕುರಿತ ಮಂಡನೆ ನಿಷ್ಪನ್ನವಾಗುತ್ತಿದೆ. ಮೊದಲನೆಯದಾಗಿ ವಚನವು ಒಡಲನ್ನು ಸ್ವತಂತ್ರ ಅಸ್ತಿತ್ವವೆಂದು ಭಾವಿಸುವುದಿಲ್ಲ. ವಚನವೇ ಹೇಳುವಂತೆ ಅದು ‘ಇಚ್ಛೆಯಲ್ಲಿರ’ಬೇಕಾದ ಅಸ್ತಿತ್ವವಾಗಿದೆ. ಈ ಇಚ್ಛೆಗೆ ಇಲ್ಲಿ ಎರಡು ಸಾಧ್ಯತೆಗಳಿವೆ. ಒಂದು, ಒಡಲಿಗನ ಇಚ್ಛೆ; ಇನ್ನೊಂದು, ರಾಮನಾಥನ ಇಚ್ಛೆ. ಒಡಲು ಒಡಲಿಗನ ಇಚ್ಛೆಯಂತಿದ್ದರೆ ಒಡಲಿಗನದಾಗುತ್ತದೆ; ರಾಮನಾಥನ ಇಚ್ಛೆಯಂತಿದ್ದರೆ ರಾಮನಾಥನದಾಗುತ್ತದೆ. ವಚನ ಈ ಎರಡೂ ಸಾಧ್ಯತೆಗಳನ್ನು ಏಕಕಾಲದಲ್ಲಿ ಒಪ್ಪುತ್ತದೆ. ಏಕೆಂದರೆ ಇದು ಒಡಲಿಗನ ಒಡಲೂ ಆಗಿದೆ; ರಾಮನಾಥನ ಒಡಲೂ ಆಗಿದೆ. ಇಲ್ಲಿ ತನ್ನದಾದ ಒಡಲನ್ನು ರಾಮನಾಥನ ಒಡಲನ್ನಾಗಿಸಬೇಕಾಗಿದೆ. ಹೀಗೆ ಆಗಬೇಕಾದರೆ ತನ್ನೊಡಲಿಗೆ ಮೊದಲು ತಾನು ಕರ್ತೃವಾಗಬೇಕು. ಅನಂತರ ಆ ಕರ್ತೃತ್ವವನ್ನು ರಾಮನಾಥನಿಗೆ ಒಪ್ಪಿಸಬೇಕು. ಇದನ್ನು ವಚನವು ‘ಇಚ್ಛೆ’ಯ ಮೂಲಕ ವಿವರಿಸುತ್ತಿದೆ. ಇಲ್ಲಿ ತನ್ನ ಇಚ್ಛೆಯೆನ್ನುವುದು ರಾಮನಾಥನ ಇಚ್ಛೆಯಾಗಬೇಕಾಗಿದೆ. ಇದನ್ನು ಒಡಲಿನ ಮಾಧ್ಯಮದ ಮೂಲಕ ಸಾಧಿಸಬೇಕಾಗಿದೆ. ಹೀಗಾಗಿ ಇಲ್ಲಿ ಇಚ್ಛೆಯ ಶರಣಾಗತಿಯೊಂದಿಗೆ ಒಡಲಿನ ಶರಣಾಗತಿ ಒಂದಾಗಿದೆ. ಹೀಗೆ ಇವೆರಡನ್ನೂ ಒಂದಾಗಿಸುವುದೇ ಇಲ್ಲಿನ ಭಕ್ತಿಯ ಪ್ರಕ್ರಿಯೆಯೂ ಆಗಿದೆ.
ಆದರೆ ವಚನವು ಈ ಭಕ್ತಿಯಲ್ಲಿ ತಲೆದೋರಿದ ಬಿಕ್ಕಟ್ಟನ್ನು ಮುಂದಿಡುತ್ತಿದೆ. ಇಲ್ಲಿ ಒಡಲು ಮತ್ತು ಒಡಲಿಗನ ನಡುವೆ ಕಂದರವಿದೆ. ಇಲ್ಲಿ ಇಚ್ಛೆ ಒಡಲಿಗನದಾಗಿದೆ. ಆದರೆ ಒಡಲು ಆ ಇಚ್ಛೆಗೆ ಹೊರತಾಗಿದೆ. ಇದು ಒಡಲಿಗನ ಒಡೆತನವನ್ನೇ ನಿರಾಕರಿಸುವಂಥದೂ ಆಗಿದೆ. ಅಲ್ಲದೆ ಈ ಒಡಲಿಗ ಮತ್ತು ರಾಮನಾಥ ಇವರಿಬ್ಬರ ನಡುವೆಯೂ ಕಂದರವೇರ್ಪಟ್ಟಿದೆ. ಏಕೆಂದರೆ ರಾಮನಾಥನ ಇಚ್ಛೆಗೆ ತನ್ನಿಚ್ಛೆಯನ್ನು ಶರಣಾಗಿಸುವುದೂ, ಹಾಗೆಯೇ ರಾಮನಾಥನ ಇಚ್ಛೆಯಲ್ಲಿ ತನ್ನೊಡಲು ಇರುವಂತೆ ಮಾಡುವುದೂ ಒಡಲಿಗನ ಉದ್ದೇಶವಾಗಿದೆ. ಆದರೆ ಇಲ್ಲಿ ಒಡಲೆನ್ನುವುದು ತಾನೇ ತಾನಾಗಿ ಈ ಇಚ್ಛೆಗಳಿಂದ ಮುಕ್ತವಾಗಿದೆ. ಇಚ್ಛೆಗಳಿಂದ ಮುಕ್ತವಾದ ಒಡಲೆನ್ನುವುದು ವಿಪರ್ಯಾಸವಾದರೂ ಅದೇ ಇಲ್ಲಿ ವಾಸ್ತವವಾಗಿದೆ. ಈ ವಿಪರ್ಯಾಸದ ವಾಸ್ತವದಲ್ಲೇ ಒಡಲಿಗನ ಹಂಗನ್ನು ತೊರೆದ ಒಡಲಿನ ಅಸ್ತಿತ್ವವಿದೆ. ಆದ್ದರಿಂದಲೇ ಇಲ್ಲಿ ಒಡಲಿನಿಂದ ಬಿಡಿಸಿಕೊಳ್ಳುವ ಒಡಲಿಗನ ಮಾತಿದೆ – ‘ಅದು ಎನ್ನೊಡಲೂ ಅಲ್ಲ’; ಹಾಗೆಯೇ ಇದರ ಮುಂದುವರಿಕೆಯೆಂಬಂತೆ ಅದನ್ನು ರಾಮನಾಥನಿಂದಲೂ ಬಿಡಿಸಲಾಗುತ್ತಿದೆ – ‘ನಿನ್ನೊಡಲೂ ಅಲ್ಲ’. ಒಡಲು ತನ್ನ ಹಂಗನ್ನು ತೊರೆದದ್ದಕ್ಕೆ ಪ್ರತಿಯಾಗಿ ತಾನು ಒಡಲಿನ ಹಂಗನ್ನು ತೊರೆಯುವ ‘ಪ್ರತಿಕ್ರಿಯೆ’ ಇಲ್ಲಿದೆ.
ಇಷ್ಟು ಹಿನ್ನೆಲೆಯಲ್ಲಿ ಮುಂದಿನ ಮಾತು ಒಡಲನ್ನು ವ್ಯಾಖ್ಯಾನಿಸಲು ಕಾತರವಾಗಿದ್ದಂತೆ ವ್ಯಕ್ತವಾಗಿದೆ – ‘ಅದು ನೀ ಮಾಡಿದ ಜಗದ ಬಿನ್ನಾಣದೊಡಲು ಕಾಣಾ, ರಾಮನಾಥ!’ ಇದು ಒಂದು ಕಡೆಯಿಂದ ಒಡಲಿನ ವ್ಯಾಖ್ಯಾನವಾಗಿದ್ದಂತೆ, ಇನ್ನೊಂದು ಕಡೆಯಿಂದ ಜಗದ ವ್ಯಾಖ್ಯಾನವೂ ಆಗಿದೆ. ಇಲ್ಲಿನ ಜಗತ್ತು ಎನ್ನುವುದು ಒಡಲುಗಳ ಜಗತ್ತಾಗಿದೆ. ಒಡಲುಗಳ ಜಗತ್ತೆಂದರೆ ಒಡಲಿಗರ ಇಚ್ಛೆಗಳಿಂದ ಒಡಲುಗಳನ್ನು ಬಿಡಿಸಿದ ಜಗತ್ತೂ ಆಗಿದೆ. ಹೀಗೆ ಬಿಡಿಸುವುದು ಇಲ್ಲಿ ಜಗದ ಇಚ್ಛೆಯಾಗಿದೆ. ಒಡಲುಗಳ ಮೇಲೆ ಅವುಗಳ ಕರ್ತೃಗಳಿಗಿರುವ ಕರ್ತೃತ್ವದಿಂದ ಒಡಲುಗಳನ್ನು ಬಿಡಿಸಿ ಅವುಗಳ ಮೇಲೆ ತನ್ನ ಕರ್ತೃತ್ವವನ್ನು ಸ್ಥಾಪಿಸುವುದು ಇಲ್ಲಿ ಜಗದ ಕ್ರಿಯೆಯಾಗಿದೆ. ಹೀಗಾಗಿ ಒಡಲುಗಳ ಜಗವೆನ್ನುವುದು ಕರ್ತೃತ್ವದ ಜವಾಬುದಾರಿಯಿಂದ ಕ್ರಿಯೆಗಳನ್ನು ಬೇರ್ಪಡಿಸಿದ ಜಗವಾಗಿದೆ. ಹಾಗಾಗಿಯೇ ‘ಜಗದ ಬಿನ್ನಾಣದೊಡಲು’ ಎಂಬ ಮಾತಿನಲ್ಲಿ ‘ಬಿನ್ನಾಣ’ ಎನ್ನುವುದು ಒಡಲಿನ ವಿಶೇಷಣವಾಗಿರುವಂತೆಯೇ ಜಗದ ವಿಶೇಷಣವೂ ಆಗಿದೆ. ಹೀಗಾಗಿ ಒಡಲಿಗನದು ‘ಕ್ರಿಯೆ’ಯಾದರೆ ಜಗತ್ತಿನದು ‘ಪ್ರತಿ-ಕ್ರಿಯೆ’ಯಾಗಿದೆ. ಒಡಲಿಗನನ್ನು ಅವನದಲ್ಲವೆಂಬಂತಿರುವ ಒಡಲಿನಲ್ಲಿ ವಾಸಿಸುವಂತೆ ಮಾಡಿರುವುದೇ ಜಗದ ಬಿನ್ನಾಣವೂ ಆಗಿದೆ. ಹೀಗಾಗಿ ವಚನಕಾರನ ಪ್ರಕಾರ ಜಗವೆನ್ನುವುದು ಕೇವಲ ಒಡಲುಗಳ ಜಗವಾಗಿದೆ. ಈ ಒಡಲುಗಳು ಎಲ್ಲ ಇಚ್ಛೆಗಳಿಂದ, ಅರ್ಥಾತ್ ಉತ್ತರದಾಯಿತ್ವದಿಂದ ಕಳಚಿಕೊಂಡ ‘ಬಿನ್ನಾಣ’ದ ಒಡಲುಗಳಾಗಿವೆ. ಈ ಬಿನ್ನಾಣದಲ್ಲೇ ಅವುಗಳು ಜೀವಂತಿಕೆಯನ್ನು ಕಳೆದುಕೊಂಡದ್ದರ ಸೂಚನೆಯೂ ಇದೆ. ಹೀಗಾಗಿ ಅವುಗಳ ಅಸ್ತಿತ್ವವು ಇದ್ದೂ ಇಲ್ಲದಂತಾಗಿದೆ.
ಜಗದಲ್ಲಿ ಮಾನುಷ ಒಡಲುಗಳಲ್ಲದೆ ಹಲವು ಹದಿನೆಂಟು ಬಗೆಯ ಸಾಂಸ್ಥಿಕ ಒಡಲುಗಳೂ ಇವೆ. ಆದರೆ ಜಗದ ಸ್ವ-ಭಾವವೇ ಬಿನ್ನಾಣವಾಗಿರುವುದರಿಂದ ಈ ಎಲ್ಲ ಒಡಲುಗಳೂ ಬಿನ್ನಾಣದ ಕಡೆಗೇ ಸೆಳೆಯಲ್ಪಡುತ್ತಿವೆ. ಹೀಗಾಗಿ ಇಲ್ಲಿ ಒಡಲುಗಳ ಜಗದ ಬೇರೊಂದು ವ್ಯಾಖ್ಯಾನವೂ ಇದೆ. ಇಷ್ಟರ ಮೇಲೆ ಇದು ರಾಮನಾಥನು ಮಾಡಿದ ಜಗವಾಗಿರುವುದರಿಂದ ಬಿನ್ನಾಣದ ಹೊಣೆಗಾರಿಕೆಯನ್ನು ಆತನಿಗೇ ಹೊರಿಸುತ್ತದೆ. ಈ ದೃಷ್ಟಿಯಿಂದ ಇದು ರಾಮನಾಥನ ಕರ್ತೃತ್ವದ ವಿಮರ್ಶೆಯೂ ಆಗಿದೆ.