ಒಂದೇ ವೇದಿಕೆಯಲ್ಲಿ ಜೆಡಿಎಸ್​-ಕಾಂಗ್ರೆಸ್​ ನಾಯಕರು: ನಿಖಿಲ್​ಗೆ ಅಂಬಿ ಆಪ್ತ ಅಮರಾವತಿ ಜೈ

ಮಂಡ್ಯ: ಮಂಡ್ಯದ ಕಾಂಗ್ರೆಸ್​ ನಾಯಕರು ಪರೋಕ್ಷವಾಗಿ ಸುಮಲತಾ ಅವರಿಗೆ ಬೆಂಬಲ ನೀಡಲಿದ್ದಾರೆ ಎಂಬ ಊಹಾಪೋಹಗಳ ನಡುವೆಯೇ ಶುಕ್ರವಾರ ಬೆಳಗ್ಗೆ ಕಾಂಗ್ರೆಸ್​ ಹಾಗೂ ಜೆಡಿಎಸ್​ ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸಿದ್ದು, ನಿಖಿಲ್​ ಕುಮಾರಸ್ವಾಮಿಯನ್ನು ಗೆಲ್ಲಿಸುವುದಾಗಿ ಶಪಥ ಮಾಡಿದ್ದಾರೆ.

ಮೊದಲಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್​ ಪುಟ್ಟರಾಜು, “ಮಂಡ್ಯ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿದಿರುವ ಕಾಂಗ್ರೆಸ್​-ಜೆಡಿಎಸ್​ನ ಮೈತ್ರಿ ಅಭ್ಯರ್ಥಿ ನಿಖಿಲ್​ ಗೆಲ್ಲುತ್ತಾರೆ. ನಿಖಿಲ್ ಅವರು ಚಲುವರಾಯಸ್ವಾಮಿ ಅವರನ್ನು ಭೇಟಿ ಮಾಡುತ್ತಾರೆ. ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ನಾವು ಮಂಡ್ಯದಲ್ಲಿ ಮತ ಕೇಳುತ್ತೇವೆ,” ಎಂದರು.

“25ರ ಸೋಮವಾರ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸುತ್ತಾರೆ. ಈ ಕುರಿತು ನಿನ್ನೆ ಕಾಂಗ್ರೆಸ್- ಜೆಡಿಎಸ್ ಮುಖಂಡರು ಸಭೆ ನಡೆಸಿ ಮಾತುಕತೆ ಮಾಡಿದ್ದೇವೆ. ಅಂದು ರಾಜ್ಯ ಮಟ್ಟದ ನಾಯಕರು ಭಾಗವಹಿಸುತ್ತಾರೆ. ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸುತ್ತೇವೆ. ಡಿಸಿ ಕಚೇರಿಯಿಂದ ನೂರು ಮೀ. ದೂರದಲ್ಲಿ ಬಹಿರಂಗ ಸಮಾವೇಶ ಮಾಡಲಿದ್ದೇವೆ,” ಎಂದೂ ಅವರು ಹೇಳಿದರು.

ಇನ್ನು ನಟರ ಕುರಿತ ಜೆಡಿಎಸ್​ ನಾಯಕರ ನಕಾರಾತ್ಮಕ ಹೇಳಿಕೆಗಳ ಕುರಿತು ಪ್ರತಿಕ್ರಿಯಿಸಿದ ಪುಟ್ಟರಾಜು, “ನಟ ದರ್ಶನ್, ಯಶ್ ಬಗ್ಗೆ ಮಾತಾಡದಂತೆ ಸಿಎಂ ಸೂಚನೆ ಕೊಟ್ಟಿದ್ದಾರೆ,” ಎಂದು ತಿಳಿಸಿದರು.

ನಿಖಿಲ್​ಗಾಗಿ ದುಡಿಯುವೆ: ಅಂಬಿ ಆಪ್ತ ಅಮರಾವತಿ ಚಂದ್ರಶೇಖರ್​

ಸುದ್ದಿಗೋಷ್ಠಿಯಲ್ಲಿ ಮಂಡ್ಯ ಕಾಂಗ್ರೆಸ್​ನ ಬಹುತೇಕ ನಾಯಕರು ಭಾಗವಹಿಸಿದ್ದರು. ಅಂಬರೀಷ್​ ಅವರ ಆಪ್ತರಾಗಿದ್ದ ಅಮರಾವತಿ ಚಂದ್ರಶೇಖರ್​ ಕೂಡ ಜೆಡಿಎಸ್ ನಾಯಕರ ಜತೆಗಿದ್ದು, ನಿಖಿಲ್​ ಪರವಾಗಿ ಕೆಲಸ ಮಾಡುವುದಾಗಿ ಘೋಷಿಸಿದರು. ” ನಾನು ಕಾಂಗ್ರೆಸ್​ನಲ್ಲಿದ್ದೆ. ಅಂಬರೀಷ್​ಗೆ ಆಪ್ತನಾಗಿದ್ದೆ. ಅಂಬರೀಷ್​ ನಂತರವೂ ನಾನು ಕಾಂಗ್ರೆಸ್​ನಲ್ಲಿ ಮುಂದುವರಿದಿದ್ದೇನೆ. ಅಂಬರೀಷ್​ ಅವರೂ ಕೂಡಲ ಕಾಂಗ್ರೆಸ್​ ಸಿದ್ಧಾಂತಗಳಲ್ಲಿ ನಂಬಿಕೆ ಇಟ್ಟವರಾಗಿದ್ದರು. ಹಾಗಾಗಿ ಅವರ ನಂತರವೂ ನಾನು ಕಾಂಗ್ರೆಸ್​ನಲ್ಲೇ ಮುಂದುವರಿದಿದ್ದೇನೆ. ಪಕ್ಷ ಸೂಚಿಸಿದಂತೆ ಮೈತ್ರಿ ಅಭ್ಯರ್ಥಿಪರ ಕೆಲಸ ಮಾಡುತ್ತೇನೆ,” ಎಂದು ಘೋಷಿಸಿದರು.

ಇನ್ನು ಸುಮಲತಾ ಅವರು ಬೆಂಬಲ ಯಾಚಿಸಿದರೇ ಎಂಬ ಪ್ರಶ್ನೆಗೆ ಉತ್ತರಿಸಿ, ” ಅವರು ನನ್ನ ಬಳಿ ಮಾತನಾಡಿಲ್ಲ. ಒಂದು ವೇಳೆ ಅವರು ಕಾಂಗ್ರೆಸ್​ನ ಅಭ್ಯರ್ಥಿಯಾಗಿದ್ದರೆ ಅವರ ಪರವಾಗಿ ದುಡಿಯುತ್ತಿದ್ದೆ. ಅದರೆ, ಹಾಗೆ ಆಗಿಲ್ಲ. ನಾನು ಕಾಂಗ್ರೆಸಿಗ. ಪಕ್ಷಕ್ಕಾಗಿ ದುಡಿಯುತ್ತೇನೆ. ಪಕ್ಷವಿದ್ದರಷ್ಟೇ ನಾವುಗಳು,” ಎಂದು ಹೇಳಿದರು.

ಇನ್ನುಳಿದಂತೆ ಮಾಜಿ ಸಚಿವ ಆತ್ಮಾನಂದ, ಕೆಪಿಸಿಸಿ ಕಾರ್ಯದರ್ಶಿ ರಾಮಲಿಂಗಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಮಂಡ್ಯ ಕಾಂಗ್ರೆಸ್ ಉಸ್ತುವಾರಿ ಎನ್.ಸಂಪಂಗಿ ಮತ್ತಿತರರು ಇದ್ದರು.

One Reply to “ಒಂದೇ ವೇದಿಕೆಯಲ್ಲಿ ಜೆಡಿಎಸ್​-ಕಾಂಗ್ರೆಸ್​ ನಾಯಕರು: ನಿಖಿಲ್​ಗೆ ಅಂಬಿ ಆಪ್ತ ಅಮರಾವತಿ ಜೈ”

Comments are closed.