ಸ್ಮಾರ್ಟ್‌ ಫೋನ್‌ ಇನ್ನಷ್ಟು ಸ್ಮಾರ್ಟ್‌: ತನ್ನಷ್ಟಕ್ಕೆ ತಾನೇ ರಿಪೇರಿಯಾಗೋ ಫೋನ್‌ ಗೊತ್ತಾ?

| ಚಂದ್ರ ಮೋಹನ್​

ನವದೆಹಲಿ: ಇತ್ತೀಚೆಗಂತೂ ಮಾರುಕಟ್ಟೆಯಲ್ಲಿ ತರಹೇವಾರಿ ಸ್ಮಾರ್ಟ್‌ಫೋನ್‌ಗಳು ಲಭ್ಯವಿವೆ. ಆದರೆ ಸ್ಮಾರ್ಟ್‌ ಫೋನ್‌ ಖರೀದಿಗಿಂತ ಅದರ ಪ್ರೊಟೆಕ್ಟರ್​​ಗಳು ಸಹ ಅನಿವಾರ್ಯ ಎನ್ನುವಂತಾಗಿದೆ. ಇದಕ್ಕಾಗಿಯೇ ಕಲರ್​ ಕಲರ್​ ಪೌಚ್, ಸ್ಕ್ರೀನ್​ ಗಾರ್ಡ್, ಸ್ಕ್ರ್ಯಾಚ್​ ಗಾರ್ಡ್​ಗಳು ಮಾರುಕಟ್ಟೆಗೆ ಬಂದಿವೆ. ಒಂದು ವೇಳೆ ಸ್ಕ್ರೀನ್‌ ಒಡೆದರೂ ತಾನೇ ತಾನಾಗಿ ರಿಪೇರಿಯಾಗೋ ಫೋನ್​ ಒಂದು ಬಂದಿದ್ದರೆ ಎಷ್ಟು ಚೆನ್ನಾಗಿರ್ತಿತ್ತು ಅಲ್ವಾ?

ಹೌದು, ಇಂತದ್ದೊಂದು ತಂತ್ರಜ್ಞಾನವುಳ್ಳ ಸ್ಮಾರ್ಟ್‌ಫೋನ್‌ ಕಂಡು ಹಿಡಿಯಲು ಮೋಟೋರೋಲಾ, ಸ್ಯಾಮ್​ಸಂಗ್​ ಮುಂದಾಗಿವೆ. ಇದಕ್ಕಾಗಿ ಈ ವರ್ಷದ ಆರಂಭದಲ್ಲಿಯೇ ಪೇಟೆಂಟ್​​ಗೆ ಅಪ್ಲೈ ಮಾಡಿವೆ.

ಥಿಯೋರಿಯಾ ಎನ್ನುವ ಒಂದು ವಸ್ತು ಇದ್ದು, ಇದರ ಅಣುಗಳು ಒಡೆದು ಹೋದಾಗ, ಸ್ವಲ್ಪ ಒತ್ತಡ ಹೇರಿದರೆ ತಾನೇ ತಾನಾಗಿ ರಿಪೇರಿಯಾಗಿ ಮೊದಲಿದ್ದ ಆಕಾರಕ್ಕೆ ಬರುತ್ತದೆ ಎಂದು ಟೋಕಿಯೋ ವಿವಿ ಪ್ರೊಫೆಸರ್​ ಟಕುಜೋ ಐಡಾ ಕಂಡುಕೊಂಡಿದ್ದಾರೆ.

ಅವರೇನು ಇದರ ಸಂಶೋದನೆಗೇನು ತೊಡಗಿರಲಿಲ್ಲ. ಏನೋ ಮಾಡಲು ಹೋಗಿ ಇನ್ನೇನೋ ಆಯಿತು ಎನ್ನುವಂತೆ ಈ ಆವಿಷ್ಕಾರ ಬೆಳಕಿಗೆ ಬಂದಿದೆ. ಆದರೆ ಈ ಆವಿಷ್ಕಾರವನ್ನು ಹೊರಾಂಗಣ ವಾತಾವರಣದಲ್ಲಿ ಬಳಸಲಾಗದೆ ಒಳಾಂಗಣಕ್ಕೆ ಮಾತ್ರ ಬಳಸಬಹುದಾಗಿದೆ ಎಂದು ಅವರು ಹೇಳುತ್ತಾರೆ.

ಇದೇ ರೀತಿ ಕ್ಯಾಲಿಫೋರ್ನಿಯಾ ವಿವಿ ಕೂಡ ಹೊಸ ಸ್ಮಾರ್ಟ್​ಫೋನ್​ ರೆಡಿ ಮಾಡಿದ್ದು, ಹೊಸ ಬಗೆಯ ಪಾಲಿಮರ್‌ಗಳಿಂದ ಫೋನ್​ ತಯಾರಾಗಿದೆ. ಇದರಿಂದಾಗಿ ಫೋನ್​ ತಾನೇ ತಾನಾಗಿ ಸ್ಕ್ರ್ಯಾಚ್​, ಕ್ರ್ಯಾಕ್​ಗಳನ್ನು ರಿಪೇರಿ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇದು ಕೂಡ ಇನ್ನೂ ಪ್ರಾರಂಭಿಕ ಹಂತದಲ್ಲಿದ್ದು, ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನದಲ್ಲಿ ಮಾತ್ರ ಪರೀಕ್ಷೆ ಮಾಡಿದ್ದಾರೆ.

ಕಾರ್ನೆಜಿ ಮೆಲ್ಲೋನ್​ ವಿವಿ ಸಂಶೋಧಕರು ತಾನೇ ತಾನಾಗಿ ರಿಪೇರಿಯಾಗೋ ಸರ್ಕಿಟ್​ ಸ್ಮಾರ್ಟ್​ಫೋನ್​ ಕಂಡು ಹಿಡಿದಿದ್ದಾರೆ. ಈ ಸ್ಮಾರ್ಟ್​ಫೋನ್​ನ ಸ್ಕ್ರೀನ್​ ಒಡೆದರೆ, ಒಳಗಿರೋ ಸರ್ಕಿಟ್​ಗಳು ಸ್ಕ್ರೀನ್​ ರಿಪೇರಿ ಮಾಡೋ ಸಾಮರ್ಥ್ಯ ಹೊಂದಿದೆ.

ಇದೇ ರೀತಿಯ ಹಲವು ಪ್ರಯತ್ನಗಳನ್ನು ವಿಶ್ವದ ಹಲವು ಸಂಶೋಧಕರು ನಡೆಸುತ್ತಿದ್ದಾರೆ. ತಾನೇ ತಾನಾಗಿ ರಿಪೇರಿಯಾಗುವ ಸ್ಮಾರ್ಟ್​​ಫೋನ್​ಗಳ ಕಂಡು ಹಿಡಿಯೋ ಆರಂಭಿಕ ಪ್ರಯತ್ನಗಳಲ್ಲಿ ವಿಜ್ಞಾನಿಗಳು ತಕ್ಕ ಮಟ್ಟಿನ ಯಶಸ್ಸು ಕಂಡಿದ್ದಾರೆ.

ಒಟ್ಟಿನಲ್ಲಿ ಆರಂಭಿಕ ಯಶಸ್ಸನ್ನು ಗಳಿಸಿರುವ ವಿಜ್ಞಾನಿಗಳು, ಕೆಲವೇ ವರ್ಷಗಳಲ್ಲಿ ಅಥವಾ ತಿಂಗಳುಗಳಲ್ಲಿ ತಾನೇ ತಾನಾಗಿ ರಿಪೇರಿಯಾಗುವ ಸ್ಮಾರ್ಟ್‌ಫೋನ್‌ಗಳನ್ನು ನಾವು-ನೀವು ಕೂಡ ಬಳಸಬಹುದು ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)