ಕುಡ್ಲದಲ್ಲಿ ತುಳು ಫಿಲ್ಮ್ ಇನ್‌ಸ್ಟಿಟ್ಯೂಟ್

ಮಂಗಳೂರು: ತುಳು ಚಲನಚಿತ್ರ ಹೆಮ್ಮರವಾಗಿ ಬೆಳೆಯುತ್ತಿದೆ. ಮಂಗಳೂರಿನಲ್ಲಿ ತುಳು ಫಿಲ್ಮ್ ಇನ್‌ಸ್ಟಿಟ್ಯೂಟ್ ಸ್ಥಾಪಿಸುವ ಮತ್ತು ಪ್ರಾದೇಶಿಕ ಚಿತ್ರಕ್ಕೆ ಸಬ್ಸಿಡಿ ಪ್ರಮಾಣ ಏರಿಕೆ ಬಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮನವಿ ನೀಡುವೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು.

ಕೋಸ್ಟಲ್‌ವುಡ್‌ನಲ್ಲಿ 100 ಚಿತ್ರಗಳು ತೆರೆಕಂಡ ಹಿನ್ನೆಲೆಯಲ್ಲಿ ಕೋಸ್ಟಲ್‌ವುಡ್ ಕಲಾವಿದರ ಮತ್ತು ತಂತ್ರಜ್ಞರ ಒಕ್ಕೂಟ ಭಾನುವಾರ ನೆಹರು ಮೈದಾನದಲ್ಲಿ ಆಯೋಜಿಸಿದ್ದ ತುಳು ಚಿತ್ರ ಶತೋತ್ಸವ ಉದ್ಘಾಟಿಸಿ ಮಾತನಾಡಿದರು.

ಕರಾವಳಿ ಕಾಲೇಜ್ ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಎಸ್.ಗಣೇಶ್ ರಾವ್ ಧ್ವಜಾರೋಹಣ ನೆರವೇರಿಸಿ, ತುಳು ಚಿತ್ರಗಳು ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ಸದ್ವಿಚಾರ ಹೊಂದಿರುವ ಸಿನಿಮಾಗಳ ಸಂಖ್ಯೆ ಹೆಚ್ಚಲಿ ಎಂದು ಹಾರೈಸಿದರು.

ಬಳಿಕ ತುಳುಚಿತ್ರ ಸಂವಾದ, ತುಳು ಚಿತ್ರ ಕ್ವಿಜ್, ತುಳು ಚಿತ್ರದ ಜನಪ್ರಿಯ ಹಾಡುಗಳ ಸಂಗೀತ ರಸಮಂಜರಿ, ತುಳು ಚಿತ್ರರಂಗದ ನಟ-ನಟಿಯರಿಂದ ತುಳು ಚಿತ್ರದ ಹಾಡಿಗೆ ನೃತ್ಯ ಕಾರ್ಯಕ್ರಮ, ನಿರ್ಮಾಪಕರು, ನಿರ್ದೇಶಕರು ಹಾಗೂ ಚಿತ್ರಮಂದಿರ ಮಾಲೀಕರಿಗೆ, ವ್ಯವಸ್ಥಾಪಕರಿಗೆ ಅಭಿನಂದನೆ ನೀಡಲಾಯಿತು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ, ಕನ್ನಡ ಸಾಹಿತ್ಯ ಪರಿಷತ್‌ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ನಿರ್ಮಾಪಕ, ನಿರ್ದೇಶಕ ಡಾ.ರಿಚರ್ಡ್ ಕ್ಯಾಸ್ಟಲಿನೋ, ನಿರ್ಮಾಪಕ ಡಾ.ಸಂಜೀವ ದಂಡಕೇರಿ, ಪಾಲಿಕೆ ಸದಸ್ಯ ದಿವಾಕರ್ ಪಾಂಡೇಶ್ವರ, ಉದ್ಯಮಿ ಗಣೇಶ್, ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ, ಶರತ್ ಕದ್ರಿ, ವೈ.ರಾಮರಾವ್, ಬಿ.ಅಶೋಕ್ ಕುಮಾರ್, ಜಗನ್ನಾಥ ಶೆಟ್ಟಿ ಬಾಳ, ಕೋಸ್ಟಲ್‌ವುಡ್ ಕಲಾವಿದರ ಮತ್ತು ತಂತ್ರಜ್ಞರ ಒಕ್ಕೂಟದ ಗೌರವಾಧ್ಯಕ್ಷ ಕಿಶೋರ್ ಡಿ.ಶೆಟ್ಟಿ, ಅಧ್ಯಕ್ಷ ಪಮ್ಮಿ ಕೊಡಿಯಾಲ್‌ಬೈಲ್, ಸ್ಥಾಪಕಾಧ್ಯಕ್ಷೆ ಅಶ್ವಿನಿ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

ಶುಲ್ಕವಿಲ್ಲದೆ ಶೂಟಿಂಗ್ ಅವಕಾಶ: ತುಳು ಚಿತ್ರಗಳ ಗುಣಮಟ್ಟದ ಬಗ್ಗೆ ದೂರುಗಳಿವೆ. ಇದನ್ನು ಸುಧಾರಿಸಲು ಒಂದು ವರ್ಷದ ಮಟ್ಟಿಗೆ ಕರ್ನಾಟಕದ ಯಾವುದೇ ಪ್ರವಾಸಿ ಸ್ಥಳದಲ್ಲಿ ಶುಲ್ಕವಿಲ್ಲದೆ ಶೂಟಿಂಗ್‌ಗೆ ಅವಕಾಶ ಕೊಡಬೇಕು ಎಂದು ಬಹುಭಾಷಾ ನಟ ಸುಮನ್ ತಲ್ವಾರ್ ಹೇಳಿದರು. ತುಳು ಚಿತ್ರ ಶತೋತ್ಸವ ಸಮಾರೋಪದಲ್ಲಿ ಮಾತನಾಡಿದರು. ತುಳು ಚಿತ್ರಗಳ ಗುಣಮಟ್ಟ ಸುಧಾರಣೆಗೆ ಸರ್ಕಾರದ ಪ್ರೋತ್ಸಾಹ ಬೇಕು ಎಂದು ಈಗಾಗಲೇ ಮುಖ್ಯ ಮಂತ್ರಿ ಕುಮಾರಸ್ವಾಮಿಗೆ ಮನವಿ ಮಾಡಿದ್ದೇನೆ. ತುಳು ಚಿತ್ರ ನಿರ್ಮಾಪಕರ ಮನವಿಗೆ ವಾಣಿಜ್ಯ ಮಂಡಳಿಯೂ ಸಹಕಾರ ಕೊಡಬೇಕು ಎಂದರು.

ತುಳು ಚಿತ್ರರಂಗ ಹೊಸ ನಟ, ನಿರ್ದೇಶಕರಿಗೆ ಉತ್ತಮ ವೇದಿಕೆ ಕಲ್ಪಿಸುತ್ತಿದೆ. ಹಿರಿಯ ನಾಟಕಕಾರರು, ನಿರ್ದೇಶಕರು, ಕಲಾವಿದರು ಹಾಕಿ ಕೊಟ್ಟ ಅಡಿಪಾಯದಲ್ಲಿ ಬೆಳೆಯುತ್ತದೆ. ಉತ್ತಮ ಕಥೆ ಆಧಾರಿತ ಚಿತ್ರಗಳು ಹೆಚ್ಚಲಿ.
|ಯು.ಟಿ.ಖಾದರ್, ಜಿಲ್ಲಾ ಉಸ್ತುವಾರಿ ಸಚಿವ