More

  ಜಲ್ಲಿ ಕ್ರಷರ್‌ಗಾಗಿ ಶಾಲೆ ಸ್ಥಳಾಂತರಕ್ಕೆ ಹುನ್ನಾರ ?

  ಚೆನ್ನಮ್ಮನ ಪಾಳ್ಯದಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಗೆ ಉಳಿವಿಗಾಗಿ ಗ್ರಾಮಸ್ಥರ ಹೋರಾಟ

   

  ಚೇತನ್ ಚಕ್ಕೆರೆ ಬಿಡದಿ
  ಗುಣಮಟ್ಟದ ಶಿಕ್ಷಣ ಒದಗಿಸುವಲ್ಲಿ ಏನಾದರೂ ಸಮಸ್ಯೆಯಾದಾಗ ಶಿಕ್ಷಕ, ಮುಖ್ಯಶಿಕ್ಷಕ, ಸಿಬ್ಬಂದಿಯನ್ನು ವರ್ಗಾಯಿಸುವುದು ಸಾಮಾನ್ಯ. ಆದರೆ ಇಲ್ಲೊಂದು ಸರ್ಕಾರಿ ಶಾಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ವ್ಯಾಸಂಗ ಮಾಡುತ್ತಿದ್ದರೂ ಶಾಲೆಯನ್ನು ಬೇರೆಡೆ ಎತ್ತಗಂಡಿ ಮಾಡಿಸುವ ಹುನ್ನಾರ ನಡೆದಿದ್ದು, ವಿಷಯ ತಿಳಿದ ಗ್ರಾಮಸ್ಥರು ಶಾಲೆ ಉಳಿವಿಗಾಗಿ ಹೋರಾಟಕ್ಕೆ ಮುಂದಾಗಿದ್ದಾರೆ.


  ಹೌದು…! ಬಿಡದಿ ಹೋಬಳಿಯ ಚೆನ್ನಮ್ಮನ ಪಾಳ್ಯದಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಗೆ ಕಂಟಕ ಎಂದುರಾಗಿದೆ. ಗ್ರಾಮದಲ್ಲಿರುವ ಸರ್ಕಾರಿ ಶಾಲೆಯ ಜಾಗ ನಮ್ಮದು ಎಂದು ದಾಖಲೆ ಹಿಡಿದು ಬೆಂಗಳೂರಿನ ನಾಗನಾಯಕನಹಳ್ಳಿ ಮೂಲದ ನರಸಿಂಹಯ್ಯ ಎಂಬುವವರು ಶಾಲೆಯನ್ನು ಬೇರೆಡೆ ಸ್ಥಳಾಂತರ ಮಾಡಿಕೊಳ್ಳಿ. ನಾವು ಕಟ್ಟಡ ನಿರ್ಮಾಣ ಮಾಡಬೇಕೆಂದು ವಾರದ ಹಿಂದೆ ಗಲಾಟೆ ಮಾಡಿದ್ದಾರೆ.

  ಶಾಲೆಗೆ ದಾನವಾಗಿ ನೀಡಿದ್ದ ಜಾಗ

  ಗ್ರಾಮದಲ್ಲಿ ಶಾಲೆ ಇಲ್ಲದ ವೇಳೆ 1997ರಲ್ಲಿ ಗ್ರಾಮದ ನರಸಿಂಹಯ್ಯ ಹಾಗೂ ಜಯಮ್ಮ ಅವರ ಮನೆಯಲ್ಲಿ ಶಾಲೆ ಪ್ರಾರಂಭವಾಗಿತ್ತು. ಇದಾದ ಎರಡು ವರ್ಷಗಳ ಬಳಿಕ ನರಸಿಂಹಯ್ಯ ಹಾಗೂ ಜಯಮ್ಮ ಅವರು 20 ಗುಂಟೆ ಜಮೀನನ್ನು ಶಾಲೆ ಕಟ್ಟಡಕ್ಕೆಂದು 1999ರಲ್ಲಿ ಶಿಕ್ಷಣ ಇಲಾಖೆಗೆ ದಾನವಾಗಿ ಬರೆದುಕೊಟ್ಟಿದ್ದರು.

  ಸದರಿ ಜಾಗದಲ್ಲಿ ಶಿಕ್ಷಣ ಇಲಾಖೆಯು ಎರಡು ಕಟ್ಟಡ ಸಹ ಕಟ್ಟಿ, ಪ್ರಾಥಮಿಕ ಶಾಲೆ ಆರಂಭಿಸಿದ್ದು, ಈಗ ಗ್ರಾಮದ ಅಕ್ಕಪಕ್ಕದ ಲಿಂಗಪ್ಪನದೊಡ್ಡಿ, ಚನ್ನಮ್ಮನಪಾಳ್ಳ, ಕಳ್ಳಿಪಾಳ್ಯ, ಕೆ.ಜಿ.ಗೊಲ್ಲರಪಾಳ್ಯ, ಅಪ್ಕೊ ಫ್ಯಾಕ್ಟರಿ ಸೇರಿ ಒಟ್ಟು ನಾಲ್ಕೈದು ಹಳ್ಳಿಗಳಿಂದ 25ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಈ ಶಾಲೆಗೆ ಬರುತ್ತಿದ್ದಾರೆ.

  ಶಾಲೆ ಸ್ಥಳಾಂತರಕ್ಕೆ ನಡೆದಿದೆಯಾ ಹುನ್ನಾರ?


  1999ರಲ್ಲಿ ಆರಂಭಗೊಂಡಿರುವ ಸರ್ಕಾರಿ ಶಾಲೆಯ ಸ್ಥಳಾಂತರಕ್ಕೆ ಹುನ್ನಾರ ನಡೆದಿದೆ ಎಂಬುದು ಸ್ಥಳೀಯರ ಆರೋಪವಾಗಿದೆ. ಇದಕ್ಕೆಲ್ಲ ಕಾರಣವಾಗಿರೋದು ಕಲ್ಲಿನ ಕ್ರಷರ್. ಕ್ರಷರ್ ಈಗ ಸರ್ಕಾರಿ ಶಾಲೆ ಕಾರಣದಿಂದಾಗಿ ಬಂದ್ ಆಗಿದೆ. ಹಾಗಾಗಿ ಕ್ರಷರ್ ಮಾಲೀಕರು ಸರ್ಕಾರಿ ಶಾಲೆಯನ್ನು ಬೇರೆಡೆಗೆ ಸ್ಥಳಾಂತರ ಮಾಡುವ ಉದ್ದೇಶದಿಂದ ಗ್ರಾಮಕ್ಕೆ ಹಾಗೂ ಜಾಗಕ್ಕೆ ಸಂಬಂಧವೇ ಇಲ್ಲದ ಮೂರನೇ ವ್ಯಕ್ತಿಯನ್ನು ಕರೆತಂದು, ತಕರಾರು ತಗೆಯುವಂತೆ ಮಾಡಿದ್ದಾರೆ ಎಂಬುದು ಗ್ರಾಮಸ್ಥರ ಆರೋಪ.

  ಬದಲಾದ ನಿಯಮ:


  ಚನ್ನಮ್ಮನಪಾಳ್ಯ ಗ್ರಾಮದ ಕೂಗಳತೆ ದೂರದಲ್ಲಿ 2005ರಲ್ಲಿ ಕಲ್ಲುಪುಡಿ ಮಾಡುವ ಕಾರ್ಖಾನೆಯೊಂದು ಆರಂಭಗೊಂಡಿತ್ತು. ಆಗ ಕ್ರಷರ್‌ನ 2 ಕಿಮೀ ವ್ಯಾಪ್ತಿಯಲ್ಲಿ ಶಾಲೆ ದೇವಾಲಯಗಳು ಇದ್ದರೂ ಕ್ರಷರ್ ನಡೆಸಲು ಅನುಮತಿ ನೀಡಲಾಗುತ್ತಿತ್ತು. 2013ರಲ್ಲಿ ಇದಕ್ಕೆ ಸರ್ಕಾರ ತಿದ್ದುಪಡಿ ತಂದು 2 ಕಿಮೀ ವ್ಯಾಪ್ತಿಯನ್ನು 500 ಮೀಟರ್‌ಗೆ ಇಳಿಸಿತ್ತು. ಈ ನಿಯಮದ ಪ್ರಕಾರ ಕ್ರಷರ್‌ನಿಂದ ಸರ್ಕಾರಿ ಶಾಲೆಗೆ ಕೇವಲ 430 ಮೀಟರ್ ಅಂತರವಿತ್ತು.

  ಈ ಬಗ್ಗೆ ಗ್ರಾಮದ ಯುವಕ ಮಂಜುನಾಥ್ ಎಂಬಾತ ಕ್ರಷರ್ ಕಾನೂನು ಬಾಹಿರವಾಗಿ ನಡೆಯುತ್ತಿದೆ ಎಂದು 2023ರಲ್ಲಿ ಲೋಕಾಯುಕ್ತರ ಮೊರೆ ಹೋಗಿದ್ದರು. ಲೋಕಾಯುಕ್ತರ ಸೂಚನೆಯಂತೆ ರಾಮನಗರದ ಜಿಲ್ಲಾಧಿಕಾರಿಗಳು ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪ ನಿರ್ದೇಶಕರು ಹಾಗೂ ಎಸಿ ತಂಡ ಸ್ಥಳಕ್ಕೆ ಭೇಟಿ ನೀಡಿ, ಶಾಲೆ ಮತ್ತು ಕ್ರಷರ್ ಅಂತರವನ್ನು ಅಳತೆ ಮಾಡಿಸಿದ್ದರು.

  ಈ ವೇಳೆ ಕ್ರಷರ್‌ನಿಂದ ಸರ್ಕಾರಿ ಶಾಲೆ 430 ಮೀ. ದೂರವಿರುವುದು ದೃಢಪಟ್ಟಿತ್ತು. ಈ ಬಗ್ಗೆ ಅಂದಿನ ಜಿಲ್ಲಾಧಿಕಾರಿಗಳು ಕ್ರಮವಹಿಸಿ ಕ್ರಷರ್‌ಗೆ ಬೀಗ ಜಡೆದಿದ್ದರು. ಹಾಗಾಗಿ ಏನಾದರು ಮಾಡಿ ಶಾಲೆಯನ್ನು ಇಲ್ಲಿಂದ 50 ಮೀಟರ್ ದೂರ ಅಥವಾ ಬೇರೆಡೆಗೆ ಸ್ಥಳಾಂತರ ಮಾಡುವ ಹುನ್ನಾರವನ್ನು ಕ್ರಷರ್ ಮಾಲೀಕರು ಮಾಡುತ್ತಿದ್ದಾರೆ. ಇದೇ ವಿಚಾರದಲ್ಲಿ ಜಾಗ ನಮ್ಮದು ಎಂದು ಬಂದ ನರಸಿಂಹಯ್ಯ ಹಾಗೂ ಗ್ರಾಮಸ್ಥರ ನಡುವೆ ಗಲಾಟೆ ನಡೆದು ಪ್ರಕರಣ ಬಿಡದಿ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

  ಅಧಿಕಾರಿಗಳ ನಿರ್ಲಕ್ಷ್ಯ?

  ಜಲ್ಲಿ ಕ್ರಷರ್‌ಗಾಗಿ ಶಾಲೆ ಸ್ಥಳಾಂತರಕ್ಕೆ ಹುನ್ನಾರ ?
  ಶಿಕ್ಷಣ ಇಲಾಖೆಗೆ 1999ರಲ್ಲಿ ನರಸಿಂಹಯ್ಯ ಹಾಗೂ ಜಯಮ್ಮ 20 ಗುಂಟೆ ಜಾಗವನ್ನು ದಾನ ಬರೆದುಕೊಟ್ಟಿದ್ದರು. ದಾನ ಬರೆದುಕೊಟ್ಟ ಮೇಲೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕ್ರಮವಹಿಸಿ ಖಾತೆ ಮಾಡಿಸಿಕೊಳ್ಳಬೇಕಿತ್ತು. ಆದರೆ ಈ ಗೋಜಿಗೆ ಅಧಿಕಾರಿಗಳು ಹೋಗದೆ ಕೈ ಚೆಲ್ಲಿದ್ದರು. ಅಧಿಕಾರಿಗಳು ಶಾಲೆಯ ಜಾಗವನ್ನು ನಿಯಮಾನುಸಾರ ಖಾತೆ ಮಾಡಿಸಿಕೊಂಡಿದ್ದರೆ ಇಂದು ಖಾಸಗಿ ವ್ಯಕ್ತಿಗಳು ಬಂದು ಜಾಗದ ಸಮಸ್ಯೆಯ ಕ್ಯಾತೆ ತೆಗೆಯುತ್ತಿರಲಿಲ್ಲ ಎಂದು ಪಾಲಕರು ಕಿಡಿಕಾರಿದ್ದಾರೆ.

  ನಮ್ಮ ಗ್ರಾಮದಲ್ಲಿ 1999ರಿಂದ ಇರುವ ಸರ್ಕಾರಿ ಶಾಲೆಯನ್ನು ಗ್ರಾಮದಿಂದ ಎತ್ತಂಗಡಿ ಮಾಡಲು ಕೆಲವರು ಹುನ್ನಾರ ನಡೆಸುತ್ತಿದ್ದಾರೆ. 2005ರಿಂದ ಇಲ್ಲದ ಸಮಸ್ಯೆ ಈಗ ಕ್ರಷರ್ ಬಾಗಿಲು ಹಾಕಿದ ಮೇಲೆ ಶುರುವಾಗಿದೆ. ಕ್ರಷರ್ ಶಾಲೆಗೆ ಹತ್ತಿರ ಇದೆ ಹಾಗೂ ಕ್ರಷರ್‌ನಿಂದ ಗ್ರಾಮದ ಮನೆಗಳಿಗೆ ಸಮಸ್ಯೆ ಆಗುತ್ತಿದೆ ಎಂದು ನಾನು ಲೋಕಾಯುಕ್ತಕ್ಕೆ ದೂರು ಕೊಟ್ಟಿದೆ. ದೂರಿನ ಹಿನ್ನೆಲೆಯಲ್ಲಿ ಕ್ರಷರ್ ಬಾಗಿಲು ಮುಚ್ಚಿತ್ತು. ಆದರೆ ಮಾಲೀಕ ಪ್ರಭಾವಿಯಾಗಿದ್ದು, ಪ್ರಭಾವ ಬಳಸಿ ಶಾಲೆ ಜಾಗದ ನಕಲಿ ದಾಖಲೆ ಹಾಗೂ ನಕಲಿ ಮಾಲೀಕನನ್ನು ಸೃಷ್ಟಿ ಮಾಡಿ ಶಾಲೆ ಸ್ಥಳಾಂತರ ಮಾಡಲು ಸಂಚು ರೂಪಿಸಿದ್ದಾರೆ.
  ಮಂಜುನಾಥ್,
  ಗ್ರಾಮಸ್ಥ ಹಾಗೂ ದೂರುದಾರ

   

  ಚೆನ್ನಮ್ಮನಪಾಳ್ಯ ಸರ್ಕಾರಿ ಶಾಲೆ ಜಾಗದ ಸಮಸ್ಯೆ ಸಂಬಂಧಿಸಿದಂತೆ ತಹಸೀಲ್ದಾರ್ ಗಮನಕ್ಕೆ ತಂದಿದ್ದು, 1999ರಲ್ಲಿ ಜಾಗ ಇಲಾಖೆಗೆ ನೋಂದಣಿಯಾಗಿದ್ದು, ಗ್ರಾಮ ಪಂಚಾಯಿತಿಯಲ್ಲಿ ಇ-ಖಾತೆ ಆಗಿದೆ. ಸರ್ವೇ ನಂಬರ್ ಜಾಗ ಆಗಿರುವುದರಿಂದ ಗ್ರಾಮ ಪಂಚಾಯಿತಿ ಮಟ್ಟದ ಖಾತೆ ಊರ್ಜಿತವಲ್ಲ. ಹಾಗಾಗಿ ಇಸಿ ಪಡೆದುಕೊಂಡು ತಹಸೀಲ್ದಾರ್ ಕಚೇರಿಯಲ್ಲಿ ಖಾತೆ ಮಾಡಲು ಹಾಕಿ ಎಂದು ತಿಳಿಸಿದ್ದಾರೆ. ಇಸಿಗೆ ಅರ್ಜಿ ಹಾಕಲಾಗಿದ್ದು, ಬಳಿಕ ಜಾಗವನ್ನು ಇಲಾಖೆ ಹೆಸರಿಗೆ ಖಾತೆ ಮಾಡಿಕೊಳ್ಳಲಾಗುವುದು.
  ಸೋಮಲಿಂಗಯ್ಯ, ಬಿಇಒ, ರಾಮನಗರ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts