ಮುಂಬೈ: ಬೆಂಕಿ ಹಚ್ಚಿ ಶಿಕ್ಷಕಿ ಹತ್ಯೆ ಮಾಡಿದವವರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಶಿಕ್ಷಕಿಗೆ ಬೆಂಕಿ ಹಚ್ಚಿದ ಘಟನೆ ಅಮಾನವೀಯವಾದುದು. ಇದನ್ನು ವಿವರಿಸಲು ಪದಗಳು ಸಾಲುವುದಿಲ್ಲ. ಘಟನೆಗೆ ಕಾರಣರಾದವರನ್ನು ಸುಮ್ಮನೆ ಬಿಡುವುದಿಲ್ಲ. ಅವರನ್ನು ಕಠಿಣ ಶಿಕ್ಷೆಗೆ ಒಳಪಡಿಸಲಾಗುವುದು ಎಂದು ಅವರು ಹೇಳಿದರು.
ಕಳೆದ ವಾರ ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯಲ್ಲಿ 24 ವರ್ಷದ ಮಹಿಳೆಗೆ ವಿಕ್ಕಿ ನಾಗ್ರಾಳೆ ಎಂಬಾತ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ. ಆಕೆ ತೀವ್ರ ಸುಟ್ಟಗಾಯಗಳಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ತ್ವರಿತ ಕೋರ್ಟ್ನಲ್ಲಿ ವಿಚಾರಣೆ: ಶಿಕ್ಷಕಿಯನ್ನು ಬೆಂಕಿ ಹಚ್ಚಿ ಕೊಲೆ ಮಾಡಿರುವ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ತ್ವರಿತ ಕೋರ್ಟ್ ಸ್ಥಾಪಿಸಿ ಪ್ರಕರಣ ವಿಚಾರಣೆ ನಡೆಸಿ ಅಪರಾಧಿಗಳಿಗೆ ಶೀಘ್ರವಾಗಿ ಶಿಕ್ಷೆ ವಿಧಿಸಲಾಗುವುದು. ಸಂತ್ರಸ್ತೆ ಕುಟುಂದ ಸದಸ್ಯರಿಗೆ ಸರ್ಕಾರಿ ಹುದ್ದೆ ನೀಡಲಾಗುವುದು ಎಂದು ಗೃಹ ಸಚಿವ ಅನಿಲ್ ದೇಶ್ಮುಖ್ ಹೇಳಿದರು.
ಆರೋಪಿ ವಿಕ್ಕಿಗೆ ವಿವಾಹವಾಗಿದ್ದು, 7 ತಿಂಗಳ ಪುತ್ರನಿದ್ದಾನೆ. ಶಿಕ್ಷಕಿ ಮೃತಪಟ್ಟ ನಂತರ ಸ್ಥಳೀಯರು ವಿಕ್ಕಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿದ್ದರು. (ಏಜೆನ್ಸೀಸ್)