ರೈಲು ದುರಂತದ ಸಂತ್ರಸ್ತ ಮಕ್ಕಳನ್ನು ದತ್ತು ಪಡೆಯುತ್ತೇನೆ: ನವಜೋತ್​ ಸಿಂಗ್​ ಸಿಧು

ಅಮೃತಸರ: ರೈಲು ದುರಂತದಲ್ಲಿ ಮೃತಪಟ್ಟ ಪಾಲಕರ ಮಕ್ಕಳನ್ನು ನಾನು ದತ್ತು ತೆಗೆದುಕೊಳ್ಳುತ್ತೇನೆ ಎಂದು ಪಂಜಾಬ್​ ಸಚಿವ ಮತ್ತು ಕಾಂಗ್ರೆಸ್​ ನಾಯಕ ನವ​ಜೋತ್​ ಸಿಂಗ್​ ಸಿಧು ಘೋಷಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಧು, “ದುರಂತದಲ್ಲಿ ಪಾಲಕರನ್ನು ಕಳೆದುಕೊಂಡ ಮಕ್ಕಳನ್ನು ನಾನು ಮತ್ತು ನನ್ನ ಪತ್ನಿ ದತ್ತು ಪಡೆದುಕೊಳ್ಳುತ್ತೇವೆ. ನಾವು ಜೀವಂತವಾಗಿರುವವರೆಗೆ ಅವರ ಜವಾಬ್ದಾರಿ ನಮ್ಮದು. ನಮ್ಮ ವೈಯಕ್ತಿಕ ಮೂಲದಲ್ಲಿ ಅವರಿಗೆ ಉತ್ತಮ ಸಂಸ್ಥೆಯಲ್ಲಿ ಶಿಕ್ಷಣ ಒದಗಿಸುವುದರಿಂದ ಹಿಡಿದು ಎಲ್ಲ ವೆಚ್ಚವನ್ನು ನಾವೇ ನೋಡಿಕೊಳ್ಳುತ್ತೇವೆ . ಜತೆಗೆ ದುರಂತದಲ್ಲಿ ಪತಿಯನ್ನು ಕಳೆದುಕೊಂಡ ಮಹಿಳೆಯರಿಗೂ ಸೌಲಭ್ಯ ಕಲ್ಪಿಸಲಾಗುವುದು ಎಂದರು.

ಪಂಜಾಬ್​ ಸರ್ಕಾರ ಸೋಮವಾರ ಅಮೃತಸರ ದುರಂತದಲ್ಲಿ ಪ್ರಾಣ ಕಳೆದುಕೊಂಡ 21 ಸಂತ್ರಸ್ತ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಧನ ವಿತರಿಸಿದೆ.

ಇನ್ನು ರೈಲು ಚಾಲಕನಿಗೆ ಕ್ಲೀನ್​ಚಿಟ್​ ನೀಡಿದ ವಿಷಯ ಕುರಿತು ರೈಲ್ವೆ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡು,”ದುರಂತದ ಬಗ್ಗೆ ತನಿಖೆ ನಡೆಸದೆ ರೈಲ್ವೆ ಇಲಾಖೆ ಚಾಲಕ ಮತ್ತು ಇತರ ಸಿಬ್ಬಂದಿಗೆ ಹೇಗೆ ಕ್ಲೀನ್ ಚಿಟ್ ನೀಡಿದ್ದಾರೆ? ಕಾರ್ಯಕ್ರಮ ನಡೆಯುತ್ತಿರುವುದು ಹಾಗೂ ರೈಲ್ವೆ ಟ್ರ್ಯಾಕ್​ ಮೇಲೆ ಅಷ್ಟು ಜನ ನಿಂತಿದ್ದರೂ ಗೇಟ್​ಮ್ಯಾನ್​ ಏಕೆ ಚಾಲಕನಿಗೆ ರೈಲಿನ ವೇಗವನ್ನು ಕಡಿಮೆ ಮಾಡುವಂತೆ ಮಾಹಿತಿ ನೀಡಲಿಲ್ಲ?” ಎಂದು ವಾಗ್ದಾಳಿ ನಡೆಸಿದರು.

ಏನಿದು ಘಟನೆ?
ದಸರಾ ಪ್ರಯುಕ್ತ ಸ್ಥಳೀಯ ಕಾಂಗ್ರೆಸಿಗರು ಆಯೋಜಿಸಿದ್ದ ರಾವಣನ ಪ್ರತಿಕೃತಿ ದಹನ ಕಾರ್ಯಕ್ರಮದಲ್ಲಿ ನವಜೋತ್​ ಸಿಂಗ್ ಸಿಧು ಕೂಡ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮವನ್ನು ಸುಮಾರು 1,500 ಸಾವಿರ ಜನ ರೈಲ್ವೆ ಹಳಿಯ ಮೇಲೆ ನಿಂತು ವೀಕ್ಷಿಸುತ್ತಿದ್ದಾಗ, ಜಂಟಿ ರೈಲು ಹರಿದು 61 ಜನ ಮೃತಪಟ್ಟಿದ್ದರು. ಅಮೃತಸರದಲ್ಲಿ ಭೀಕರ ರೈಲು ದುರಂತವಾದ ನಂತರ ಕಾರ್ಯಕ್ರಮ ಕುರಿತಾಗಿ ವಿಪಕ್ಷದವರು ಸಿಧುವನ್ನು ಟೀಕಿಸಿದ್ದರು. (ಏಜೆನ್ಸೀಸ್)

ಅಮೃತಸರ ರೈಲು ದುರಂತ: ರೈಲ್ವೆ ಅಧಿಕಾರಿಗಳ ಬಳಿ ರೈಲು ಚಾಲಕ ಹೇಳಿದ್ದೇನು?