ಮರಳುಗಾರಿಕೆ ಸುಗಮಗೊಳಿಸಲು ಕ್ರಮ

ಉಡುಪಿ: ನಾನ್ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮರಳು ದಿಬ್ಬಗಳನ್ನು ಗುರುತಿಸಿ ಅ.15ರೊಳಗೆ ಸಾಂಪ್ರದಾಯಿಕ ಮರಳುಗಾರಿಕೆ ಪ್ರಾರಂಭಿಸಲು ಜಿಲ್ಲಾ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಸಭೆ ಕುರಿತು ಮಾಹಿತಿ ನೀಡಿದರು.

ಸಿಆರ್‌ಝಡ್ ಮರಳುಗಾರಿಕೆ ಸಂಬಂಧ ಎನ್‌ಐಟಿಕೆ ತಂತ್ರಜ್ಞರಿಂದ ಮರಳು ದಿಬ್ಬ ಗುರುತಿಸುವಿಕೆ ಕಾರ್ಯ ನಡೆಯುತ್ತಿದ್ದು, ಹೆಚ್ಚು ದಿಬ್ಬಗಳನ್ನು ಗುರುತಿಸಲು ಸೂಚನೆ ನೀಡಲಾಗಿದೆ. ಅ.5ರೊಳಗೆ ವರದಿ ಕೊಡುವ ನಿರೀಕ್ಷೆ ಇದೆ. ಇದನ್ನು ಪರಿಶೀಲಿಸಿ ರಾಜ್ಯಮಟ್ಟದ ಸಮಿತಿಗೆ ಸಲ್ಲಿಸಲಾಗುತ್ತದೆ. ಅಲ್ಲಿಂದ ಅನುಮತಿ ದೊರೆತ ನಂತರ ಶೀಘ್ರ ಮರಳುಗಾರಿಕೆ ಆರಂಭವಾಗಲಿದೆ ಎಂದು ಸಚಿವರು ತಿಳಿಸಿದರು.

ಜಿಲ್ಲೆಯಲ್ಲಿ ಮರಳು ಕೊರತೆಯಿಂದ ಸರ್ಕಾರದ ಅನುದಾನದಲ್ಲಿ ನಡೆಯುತ್ತಿರುವ 3 ಸಾವಿರ ಮನೆಗಳ ಕಾಮಗಾರಿ ನಿಂತಿದೆ. ನಾನ್ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆ ಪ್ರಾರಂಭವಾಗುತ್ತಿದ್ದು, ಆಯಾ ಪಂಚಾಯಿತಿ ವ್ಯಾಪ್ತಿಯಲ್ಲಿ ಎಷ್ಟು ಮರಳಿನ ಅಗತ್ಯವಿದೆ ಎಂದು ಪಿಡಿಒಗಳು ಕೋರಿಕೆ ಸಲ್ಲಿಸಲು ಸೂಚಿಸಲಾಗಿದೆ. ಅಷ್ಟು ಪ್ರಮಾಣದ ಮರಳು ನೇರ ದಿಬ್ಬದಿಂದಲೇ ಕಳುಹಿಸಲು ವ್ಯವಸ್ಥೆ ಮಾಡುತ್ತೇವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಪಡಿತರ ಚೀಟಿ: ಜಿಲ್ಲೆಯಲ್ಲಿ 7,598 ಪಡಿತರ ಚೀಟಿ ಅರ್ಜಿಗಳು ಬಾಕಿ ಇದ್ದು, ತಿಂಗಳಾಂತ್ಯದಲ್ಲಿ ವಿಲೇವಾರಿ ಮಾಡಲು ಸೂಚನೆ ನೀಡಲಾಗಿದೆ. 36 ರಾಷ್ಟ್ರೀಯ ಮಾಧ್ಯಮಿಕ ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ತಿಂಗಳಾಂತ್ಯದಲ್ಲಿ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸಲು ತೀರ್ಮಾನಿಸಲಾಗಿದೆ. 11 ಅಂಬೇಡ್ಕರ್ ಭವನದಲ್ಲಿ 5 ಕಾಮಗಾರಿ ಬಾಕಿ ಇದ್ದು, ಅ.15ರೊಳಗೆ ಇಲಾಖೆ ಹಸ್ತಾಂತರಿಸುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.

14.54 ಕೋಟಿ ರೂ. ಬಿಡುಗಡೆ: ಪ್ರಾಕೃತಿಕ ವಿಕೋಪ ಹಾನಿ ದುರಸ್ತಿಗೆ ವಿವಿಧ ಇಲಾಖೆಗಳಿಗೆ 14.54 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಗ್ರಾಮೀಣಾಭಿವೃಧ್ಧಿ ಇಲಾಖೆಗೆ 3.75 ಲಕ್ಷ ರೂ, ಲೋಕೋಪಯೋಗಿ ಇಲಾಖೆಗೆ 8.63 ಕೋಟಿ, ನಗರಾಭಿವೃದ್ಧಿ ಇಲಾಖೆಗೆ 1.17 ಕೋಟಿ ರೂ., ನೀರಾವರಿ ಇಲಾಖೆಗೆ 94 ಲಕ್ಷ ರೂ. ಒದಗಿಸಲಾಗಿದೆ. ದುರಸ್ತಿ ಕಾರ್ಯಕ್ಕೆ ಕ್ರಿಯಾ ಯೋಜನೆ ತಯಾರಿಸಲಾಗುತ್ತಿದ್ದು, ಹೆಚ್ಚಿನ ಅನುದಾನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. 2ನೇ ಹಂತದಲ್ಲಿ ಕೊಳೆರೋಗದಿಂದ 5784 ಹೆಕ್ಟೇರ್ ಪ್ರದೇಶದಲ್ಲಿ ನಷ್ಟ ಸಂಭವಿಸಿದ್ದು, ಈ ಬಗ್ಗೆ ವರದಿ ಸಲ್ಲಿಸಲಾಗಿದೆ ಎಂದು ಜಯಮಾಲ ತಿಳಿಸಿದರು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಹೇಶ್ವರ ರಾವ್, ಜಿಪಂ ಸಿಇಒ ಶಿವಾನಂದ ಕಾಪಶಿ ಉಪಸ್ಥಿತರಿದ್ದರು.

ಹೆದ್ದಾರಿ ಗುಂಡಿಮುಚ್ಚಲು ಆದೇಶ: ರಾಷ್ಟ್ರೀಯ ಹೆದ್ದಾರಿ 66ರ ಗುಂಡಿ ಮುಚ್ಚಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಮೀಡಿಯನ್ ಸರಿಪಡಿಸಲು ಮತ್ತು ಸರ್ವೀಸ್ ರಸ್ತೆಗಳನ್ನು ಹೆದ್ದಾರಿಗೆ ಸಂಪರ್ಕ ಕಲ್ಪಿಸಲು ಗುತ್ತಿಗೆ ಕಂಪನಿಗೆ ನಿರ್ದೇಶನ ನೀಡಲಾಗಿದೆ. ಕರಾವಳಿ ಬೈಪಾಸ್ ಡಿಸೆಂಬರ್ ಒಳಗೆ ಸಂಚಾರಕ್ಕೆ ಮುಕ್ತವಾಗಲಿದೆ. ಮಾರ್ಚ್ ಒಳಗೆ ಹೆದ್ದಾರಿ ಕಾಮಗಾರಿ ಮುಗಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಸಚಿವರು ತಿಳಿಸಿದರು.

ಮೊಬೈಲ್ ಅಂಗನವಾಡಿ: ವಲಸೆ ಕಾರ್ಮಿಕರ ಮಕ್ಕಳಿಗೆ ಮೊಬೈಲ್ ಅಂಗನವಾಡಿ ಪ್ರಾರಂಭಿಸಲಾಗುವುದು. ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 1 ಮೊಬೈಲ್ ಅಂಗನವಾಡಿ ಮಂಜೂರು ಮಾಡಲು ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ. ಕಟ್ಟಡ ಕಾರ್ಮಿಕರಿಗೆ ಹೆಚ್ಚಿನ ಸೌಲಭ್ಯ ನೀಡಲು ಕ್ರಮ ವಹಿಸಲಾಗಿದೆ ಎಂದು ಸಚಿವರು ತಿಳಿಸಿದರು. ಮಹಿಳಾ ಒಕ್ಕೂಟಕ್ಕೆ ಜಮೀನು ಮಂಜೂರು ಮಾಡುವಂತೆ ಡಿಸಿ ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ಬಗ್ಗೆ ಸೂಕ್ತಕ್ರಮ ಕೈಗೊಳ್ಳಲಾಗುವುದು. ಸೌಭಾಗ್ಯ ಯೋಜನೆಯಡಿ 3,364 ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗುವುದು ಎಂದರು.

ಹಾರುಬೂದಿ ಅಲ್ಲ: ಉಡುಪಿಯಲ್ಲಿ ಇತ್ತೀಚೆಗೆ ಸುರಿದದ್ದು ಹಾರುಬೂದಿ ಮಳೆ ಅಲ್ಲ. ಈ ಬಗ್ಗೆ ಎನ್‌ಐಟಿಕೆ ವರದಿಯಲ್ಲಿ ಬೂದಿ ಎಂದು ಮಾತ್ರ ಉಲ್ಲೇಖವಿದೆ. ಮೊದಲ ಬಾರಿ ಇಂಥ ಮಳೆಯಾದ ಸಂದರ್ಭದಲ್ಲಿ ಕೇಂದ್ರ ಪರಿಸರ ಇಲಾಖೆ ತಜ್ಞರು ಜಿಲ್ಲೆಗೆ ಆಗಮಿಸಿ, ಸಮೀಕ್ಷೆ ಮಾಡಿ ವರದಿ ಸಲ್ಲಿಸಿದ್ದಾರೆ. ಅದರಲ್ಲಿ ಯಾವುದೇ ಹಾರುಬೂದಿ ಬಗ್ಗೆ ಉಲ್ಲೇಖವಿಲ್ಲ ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ತಿಳಿಸಿದರು.

ನದಿ ಬತ್ತಿರುವ ವರದಿ: ಜಿಲ್ಲೆಯಲ್ಲಿ ನದಿಗಳು ಬತ್ತುತ್ತಿರುವ ಬಗ್ಗೆ ಕೆಆರ್‌ಇಸಿ ಇಂಜಿನಿಯರ್‌ಗೆ ವರದಿ ತಯಾರಿಸಲು ಕೋರಲಾಗಿದೆ. ನೀರಿನ ಅಭಾವ ತಡೆಗೆ ಕಿಂಡಿ ಅಣೆಕಟ್ಟುಗಳು ಫೈಬರ್ ಹಲಗೆ ಹಾಲಕಲು ನಿರ್ದೇಶನ ನೀಡಲಾಗಿದೆ. ಆದರೆ ನವರಾತ್ರಿ ಬಳಿಕ ಅಳವಡಿಸುವಂತೆ ರೈತರು ಕೋರಿದ್ದಾರೆ ಎಂದು ಡಿಸಿ ತಿಳಿಸಿದರು.

ದ್ವೇಷ ರಾಜಕಾರಣ ಮಾಡಲ್ಲ: ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಘಟನೆ ಬಗ್ಗೆ ನಗರಸಭಾ ಸದಸ್ಯರ ವಿರುದ್ಧ ಕ್ರಮ ತೆಗೆದುಕೊಳ್ಳುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಜಯಮಾಲ, ನಾನು ದ್ವೇಷ ರಾಜಕಾರಣ ಮಾಡೋದಿಲ್ಲ. ಪಕ್ಷದ ಕಾರ್ಯಕರ್ತರ ಭಾವನೆ ನನಗೆ ಅರ್ಥ ಆಗುತ್ತದೆ. ಮಂತ್ರಿ ಸ್ಥಾನ ಜನಸೇವೆ ಮಾಡಲು ಸಿಕ್ಕಿದ ಅವಕಾಶ ಎಂದಷ್ಟೇ ಹೇಳಿದರು.

ಆದಿಉಡುಪಿಯಲ್ಲಿ ರಂಗಾಯಣ ಮತ್ತು ರಂಗಮಂದಿರ ನಿರ್ಮಾಣಕ್ಕೆ 1 ಎಕರೆ ಜಾಗ ಗುರುತಿಸಲಾಗಿದ್ದು, ಶೀಘ್ರದಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು.
|ಜಯಮಾಲ, ಜಿಲ್ಲಾ ಉಸ್ತುವಾರಿ ಸಚಿವೆ