ಶಿವಮೊಗ್ಗ ಕ್ಷೇತ್ರದಲ್ಲಿ ಮೈತ್ರಿಯಾದರೆ ಜೆಡಿಎಸ್ ಬೆಂಬಲಿಸುತ್ತೇವೆ

ಶಿವಮೊಗ್ಗ: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿದೆ. ಶಿವಮೊಗ್ಗ ಕ್ಷೇತ್ರ ಯಾವ ಪಕ್ಷಕ್ಕೆ ಸಿಕ್ಕರೂ ಸರಿಯೇ. ಒಂದು ವೇಳೆ ಜೆಡಿಎಸ್​ಗೆ ಸಿಕ್ಕರೆ ನಾವು ಬೆಂಬಲಿಸುತ್ತೇವೆ ಎಂದು ಕಾಂಗ್ರೆಸ್​ ಮುಖಂಡರೂ, ಮಾಜಿ ಸಚಿವರೂ ಆದ ಕಾಗೋಡು ತಿಮ್ಮಪ್ಪ ಮತ್ತು ಕಿಮ್ಮನೆ ರತ್ನಾಕರ ಅವರು ಸೋಮವಾರ ಸ್ಪಷ್ಟಪಡಿಸಿದ್ದಾರೆ.

ಖಾಸಗಿ ಹೋಟೆಲ್​ನಲ್ಲಿ ನಡೆದ ಕಾಂಗ್ರೆಸ್​ ಮುಖಂಡರ ಸಭೆಯ ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿದ ಇಬ್ಬರೂ ಮುಖಂಡರೂ ಈ ವಿಷಯ ಸ್ಪಷ್ಟಪಡಿಸಿದರು.

ಶಿವಮೊಗ್ಗ ಲೋಕಸಭೆ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗಿದೆ. ಕಾಂಗ್ರೆಸ್​​ನಿಂದ ಈವರೆಗೆ ಅಭ್ಯರ್ಥಿ ಅಂತಿಮಗೊಂಡಿಲ್ಲ. ಈ ಬಗ್ಗೆ ಚರ್ಚಿಸಲು ನಾಳೆ ಬೆಂಗಳೂರಿನಲ್ಲಿ ಶಿವಮೊಗ್ಗ ಜಿಲ್ಲೆಯ ನಾಯಕರ ಸಭೆ ಕರೆಯಲಾಗಿದೆ. ಅಲ್ಲಿ ಅಭ್ಯರ್ಥಿ ಹಾಕುವ ಬಗ್ಗೆ ಅಥವಾ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಕ್ಷೇತ್ರ ಕಾಂಗ್ರೆಸ್​ಗೆ ಸಿಕ್ಕರೆ ನಮ್ಮವರು ಸ್ಪರ್ಧೆ ಮಾಡುತ್ತಾರೆ. ಒಂದು ವೇಳೆ ಜೆಡಿಎಸ್​ಗೆ ಸಿಕ್ಕರೆ ಅವರ ಅಭ್ಯರ್ಥಿಯನ್ನು ಬೆಂಬಲಿಸುತ್ತೇವೆ ಎಂದು ಕಾಗೋಡು ತಿಮ್ಮಪ್ಪ ಹೇಳಿದರು.

ಕಿಮ್ಮನೆ ರತ್ನಾಕರ್​ ಮಾತನಾಡಿ, ಶಿವಮೊಗ್ಗ ಕ್ಷೇತ್ರ ಯಾರಿಗೆ ಸಿಕ್ಕರೂ ಸರಿಯೇ. ಸರ್ಕಾರದ ಹಂತದಲ್ಲೇ ಮೈತ್ರಿಯಾಗಿರುವುದರಿಂದ ಶಿವಮೊಗ್ಗ ಕ್ಷೇತ್ರದ ಮೈತ್ರಿಯಲ್ಲೂ ಯಾವುದೇ ಗೊಂದಲವಿಲ್ಲ. ಒಂದು ವೇಳೆ ಕ್ಷೇತ್ರ ಜೆಡಿಎಸ್​ಗೆ ಸಿಕ್ಕರೆ ಅವರ ಅಭ್ಯರ್ಥಿಯನ್ನು ನಾವು ಬೆಂಬಲಿಸುತ್ತೇವೆ. ಒಂದು ವೇಳೆ ಸ್ನೇಹಪೂರ್ವಕ ಸ್ಪರ್ಧೆ ಎಂಬಂತಾದರೆ, ಎರಡೂ ಪಕ್ಷಗಳ ಅಭ್ಯರ್ಥಿಗಳೂ ಕಣಕ್ಕಿಳಿಯಲಿದ್ದಾರೆ. ಹಿಂದೆಯೂ ಹೀಗೆ ಸ್ನೇಹ ಪೂರ್ವಕ ಸ್ಪರ್ಧೆಗಳು ನಡೆದ ಉದಾಹರಣೆಗಳಿವೆ ಎಂದು ತಿಳಿಸಿದರು.

ಶಿವಮೊಗ್ಗ ಕ್ಷೇತ್ರವನ್ನು ನಾವು ಕೇಳಿದ್ದೇವೆ. ಇಲ್ಲಿ ನಮ್ಮ ಪ್ರತಿನಿಧಿಗಳು ಹೆಚ್ಚಿದ್ದಾರೆ. ಹಿಂದಿನ ಚುನಾವಣೆಯಲ್ಲಿ ನಮಗೆ ಎರಡನೇ ಸ್ಥಾನ ಸಿಕ್ಕಿತ್ತು. ಶಿವಮೊಗ್ಗದ ಎಲ್ಲ ಬಗೆಯ ಚುನಾವಣೆಗಳಲ್ಲೂ ಬಿಜೆಪಿಗೆ ಕಾಂಗ್ರೆಸ್​ ಪ್ರಬಲ ಪೈಪೋಟಿ ನೀಡಿದೆ. ಆದರೂ, ಹೈಕಮಾಂಡ್ ತೀರ್ಮಾನ ಅಂತಿಮ. ಪಕ್ಷ ಯಾರಿಗೆ ಟಿಕೆಟ್​ ಕೊಟ್ಟರೂ, ಮೈತ್ರಿ ಮಾಡಿಕೊಂಡರೂ ನಾವು ಅದಕ್ಕೆ ಬದ್ಧ ಎಂದು ಕಿಮ್ಮನೆ ರತ್ನಾಕರ ಸ್ಪಷ್ಟಪಡಿಸಿದರು.

ಜನರ ನಾಡಿಮಿಡಿತ ಅರಿಯಲು ಬಿಜೆಪಿಗೆ ಚುನಾವಣೆ ಬೇಕಿತ್ತು 

ಲೋಕಸಭೆ ಕ್ಷೇತ್ರದ ಉಪ ಚುನಾವಣೆ ಯಾರಿಗೂ ಬೇಕಿರಲಿಲ್ಲ. ಕೇಂದ್ರ ಸರ್ಕಾರಕ್ಕೆ ಮಾತ್ರ ಬೇಕಿದೆ. ಇಲ್ಲಿನ ಪರಿಸ್ಥಿತಿ ತಿಳಿಯಲು ಒಂದು ಪರೀಕ್ಷೆ ನಡೆಯಬೇಕಿತ್ತು. ಅದಕ್ಕಾಗಿಯೇ ಇಲ್ಲಿ ಲೋಕಸಭೆಗೆ ಉಪಚುನಾವಣೆ ನಡೆಸಲಾಗುತ್ತಿದೆ. ಆದರೆ, ಆಂಧ್ರ, ತೆಲಂಗಾಣದಲ್ಲೂ ಕೆಲ ಲೋಕಸಭೆ ಸ್ಥಾನಗಳು ಖಾಲಿ ಇವೆ. ಅಲ್ಲಿ ಚುನಾವಣೆ ನಡೆಸದೇ ಇಲ್ಲಿ ಮಾತ್ರ ಚುನಾವಣೆ ನಡೆಸುತ್ತಿರುವುದರ ಹಿಂದೆ ಕೇಂದ್ರ ಸರ್ಕಾರದ ಅನುಮಾನದ ಹೆಜ್ಜೆಗಳು ಕಾಣುತ್ತಿವೆ. ಕೇಂದ್ರ ಸರ್ಕಾರ ಚುನಾವಣೆ ಆಯೋಗದ ಮೇಲೆ ಪ್ರಭಾವ ಬೀರಿರುವ ಸಂದೇಹವಿದೆ. ಚುನಾವಣೆ ಆಗಬೇಕಿರಲಿಲ್ಲ ಎಂಬ ಯಡಿಯೂರಪ್ಪ ಅವರ ಹೇಳಿಕೆ ಕೇವಲ ಕಣ್ಣೊರೆಸುವ ತಂತ್ರವಷ್ಟೇ ಎಂದು ಕಿಮ್ಮನೆ ರತ್ನಾಕರ ಅಭಿಪ್ರಾಯಪಟ್ಟಿದ್ದಾರೆ.