ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆಗೆ ‘ಕೈ’ಗೆ ‘ಆನೆ’ ಬಲ!

ನವದೆಹಲಿ: ನಿನ್ನೆಯಷ್ಟೆ ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಕೂಡ ಸರಳ ಬಹುಮತ ಲಭ್ಯವಾಗಿರಲಿಲ್ಲ. ಸರ್ಕಾರ ರಚನೆಗೆ ಎರಡು ಸ್ಥಾನಗಳು ಬೇಕಿತ್ತು. ಈಗ ಬಹುಜನ ಸಮಾಜ ಪಾರ್ಟಿ (ಬಿಎಸ್​ಪಿ) ನಾಯಕಿ ಮಾಯಾವತಿ ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದ್ದು, ಸರ್ಕಾರ ರಚನೆ ಹಾದಿ ಸುಗಮವಾಗಿದೆ.

ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡುವ ಸಲುವಾಗಿ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಕಾಂಗ್ರೆಸ್‌ಗೆ ಬಿಎಸ್‌ಪಿ ಬೆಂಬಲ ನೀಡಲಿದೆ ಎಂದು ಹೇಳಿದ್ದು, ಎರಡು ರಾಜ್ಯಗಳಲ್ಲೂ ಕಾಂಗ್ರೆಸ್‌ಗೆ ಸರ್ಕಾರ ರಚನೆಗೆ ಅನುವು ಮಾಡಿಕೊಡಲಿದೆ.

ನಮ್ಮ ಗುರಿಯು ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡುವುದಾಗಿದೆ. ಅದಕ್ಕಾಗಿಯೇ ನಾವು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಲು ನಿರ್ಧರಿಸಿದ್ದೇವೆ. ರಾಜಸ್ಥಾನದಲ್ಲೂ ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಿದ್ದು, ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬಾರದು ಎಂಬುದನ್ನು ಖಚಿತಪಡಿಸಿಕೊಳ್ಳಲೆಂದೇ ಈ ಚುನಾವಣೆಯಲ್ಲಿ ಹೋರಾಡಿದ್ದೆವು ಎಂದು ಮಾಯಾವತಿ ತಿಳಿಸಿದ್ದಾರೆ.

230 ವಿಧಾನಸಭಾ ಕ್ಷೇತ್ರಗಳಿರುವ ಮಧ್ಯಪ್ರದೇಶದಲ್ಲಿ ಬಿಎಸ್‌ಪಿಯು ಎರಡು ಸ್ಥಾನಗಳಲ್ಲಿ ಜಯಗಳಿಸಿತ್ತು. ಮ್ಯಾಜಿಕ್‌ ನಂಬರ್‌ 116 ಆಗಿದ್ದು, ಕಾಂಗ್ರೆಸ್‌ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಕೂಡ 114 ಸ್ಥಾನಗಳನ್ನಷ್ಟೇ ಗಳಿಸಿತ್ತು. ಇನ್ನು ಬಿಜೆಪಿಯು ಕೇವಲ 109 ಸ್ಥಾನಗಳನ್ನು ವಶಪಡಿಸಿಕೊಂಡಿದೆ.

ಬೆಂಬಲಿಸಿದರೂ ಟೀಕಿಸುವುದನ್ನು ನಿಲ್ಲಿಸಿಲ್ಲ

ಇನ್ನು ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದರೂ ಕೂಡ ಮಾಯಾವತಿ ಕಾಂಗ್ರೆಸ್‌ ಅನ್ನು ಟೀಕಿಸಿದ್ದು, ಕಾಂಗ್ರೆಸ್ ಭಾರತದಲ್ಲಿ ಹೆಚ್ಚಿನ ರಾಜ್ಯಗಳನ್ನು ಆಳಿದರೂ ಕೂಡ ಜನತೆಯ ಕಲ್ಯಾಣಕ್ಕಾಗಿ ಅದು ಕೆಲಸ ಮಾಡದಿರುವುದರಿಂದಲೇ ಪ್ರಾದೇಶಿಕ ಪಕ್ಷಗಳು ಹುಟ್ಟಿಕೊಂಡಿವೆ. ಒಂದು ವೇಳೆ ಬಿಜೆಪಿಯು ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದರೆ ಅಲ್ಲಿ ಬಿಜೆಪಿ ಸೇರಿದಂತೆ ಬೇರೆ ಯಾವುದೇ ಬಲಿಷ್ಠ ಎದುರಾಳಿ ಇರಲಿಲ್ಲ ಎಂದು ಟೀಕಿಸಿದ್ದಾರೆ.

ಇನ್ನು ನಿನ್ನೆ ರಾತ್ರಿಯಷ್ಟೇ ಕಾಂಗ್ರೆಸ್‌ ನಾಯಕರು ರಾಜ್ಯಪಾಲರಾದ ಆನಂದಿಬೆನ್‌ ಅವರಿಗೆ ಪತ್ರ ಬರೆದು ಸರ್ಕಾರ ರಚನೆಗೆ ಅವಕಾಶ ಕೋರಿದ್ದು, ಕಾಂಗ್ರೆಸ್‌ಗೆ ರಾಜಭವನಕ್ಕೆ ಬರಲು ಸಮಯ ನಿಗದಿಪಡಿಸಿದ್ದಾರೆ. (ಏಜೆನ್ಸೀಸ್)