ಶಬರಿಮಲೆ: ತೀರ್ಪು ಮರುಪರಿಶೀಲನೆ ಅಗತ್ಯವಿಲ್ಲ ಎಂದ ಕೇರಳ ಸರ್ಕಾರ , ಉಲ್ಟಾ ಹೊಡೆದ ದೇವಸ್ವಂ ಮಂಡಳಿ

ನವದೆಹಲಿ: ಎಲ್ಲ ವಯೋಮಾನದ ಮಹಿಳೆಯರಿಗೂ ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶಕ್ಕೆ ಅವಕಾಶ ನೀಡಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದಂದಿನಿಂದಲೂ ಧಾರ್ಮಿಕ ಕಾರಣಗಳನ್ನು ನೀಡಿ ತೀರ್ಪನ್ನು ವಿರೋಧಿಸುತ್ತಲೇ ಬಂದಿದ್ದ ದೇವಸ್ವಂ ಮಂಡಳಿ ಇದೀಗ ತನ್ನ ನಿಲುವು ಬದಲಾಯಿಸಿಕೊಳ್ಳುವ ಮೂಲಕ ಯೂ ಟರ್ನ್‌ ಹೊಡೆದಿದೆ.

ದೇಗುಲದ ಸಂಪ್ರದಾಯಕ್ಕೆ ಧಕ್ಕೆ ಬರುತ್ತದೆ ಎಂದು ವಾದಿಸಿ ಸುಪ್ರೀಂ ತೀರ್ಪಿನ ಮರುಪರಿಶೀಲನೆಗೆ ಪಟ್ಟು ಹಿಡಿದಿದ್ದ ದೇವಸ್ವಂ ಮಂಡಳಿಯು ತಾನು ಕೂಡ ಮಹಿಳೆಯರ ದೇಗುಲ ಪ್ರವೇಶಕ್ಕೆ ಬೆಂಬಲ ನೀಡುವುದಾಗಿ ಸುಪ್ರೀ ಕೋರ್ಟ್‌ಗೆ ತಿಳಿಸಿದೆ.

ಸುಪ್ರೀಂ ತೀರ್ಪಿನ ಮರುಪರಿಶೀಲನೆಗೆಂದು ಸಲ್ಲಿಸಿದ್ದ ಸುಮಾರು 60 ಅರ್ಜಿಗಳ ವಿಚಾರಣೆ ಕೈಗೆತ್ತಿಕೊಂಡ ಐವರು ನ್ಯಾಯಾಧೀಶರನ್ನೊಳಗೊಂಡ ಪೀಠವು, ವಯಸ್ಸಿನ ಕಾರಣದಿಂದ ಮಹಿಳೆಯರಿಗೆ ಪ್ರವೇಶ ನಿರಾಕರಿಸುವ ಆಚರಣೆಯನ್ನು ಅಗತ್ಯ ಧಾರ್ಮಿಕ ಆಚರಣೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

ಮರು ಪರಿಶೀಲನೆ ಅಗತ್ಯವಿಲ್ಲವೆಂದ ಕೇರಳ ಸರ್ಕಾರ

ಕಳೆದ ಸೆಪ್ಟೆಂಬರ್‌ನಲ್ಲಿ ಎಲ್ಲ ಮಹಿಳೆಯರಿಗೂ ಪ್ರವೇಶ ಕಲ್ಪಿಸಿ ನೀಡಿದ್ದ ತೀರ್ಪಿನ ಮರುಪರಿಶೀಲನೆ ಅಗತ್ಯವಿಲ್ಲ ಎಂದು ಕೇರಳ ಸರ್ಕಾರ ಕೂಡ ಇಂದು ಸುಪ್ರೀಂಕೋರ್ಟ್​ಗೆ ಹೇಳಿಕೆ ನೀಡಿದೆ.

ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸಿರುವ ಸುಪ್ರೀ ತೀರ್ಪಿನ ಮರುಪರಿಶೀಲನೆ ಅಸಾಧ್ಯ ಎಂದಿರುವ ಸುಪ್ರೀಂ ತೀರ್ಪು ಸಂಪ್ರದಾಯವಾದಿಗಳಿಗೆ ದೊಡ್ಡ ಹೊಡೆತ ನೀಡಿದಂತಾಗಿದೆ. (ಏಜೆನ್ಸೀಸ್)