ಬಿಜೆಪಿಯಂತೆ ವರ್ತಿಸಬೇಡಿ, ಇಲ್ಲವಾದರೆ ಎರಡು ರಾಜ್ಯಗಳಲ್ಲಿನ ಬೆಂಬಲ ಮರು ಪರಿಶೀಲಿಸುತ್ತೇವೆ: ಕೈ​ಗೆ ಮಾಯಾ ಎಚ್ಚರಿಕೆ

ನವದೆಹಲಿ: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಾನೂನಿನಲ್ಲಿ ಮಾಡಲಾದ ಕೆಲ ಬದಲಾವಣೆಗಳನ್ನು ವಿರೋಧಿಸಿ ಏಪ್ರಿಲ್​​ನಲ್ಲಿ ಉತ್ತರ ಭಾರತದಲ್ಲಿ ನಡೆದಿದ್ದ ಹೋರಾಟದಲ್ಲಿ ಭಾಗವಹಿಸಿದ್ದ ದಲಿತರ ವಿರುದ್ಧದ ಕೇಸುಗಳನ್ನು ಹಿಂಪಡೆಯದೇ ಹೋದರೆ ಎರಡು ರಾಜ್ಯಗಳಲ್ಲಿ ಕಾಂಗ್ರೆಸ್​ಗೆ​ ನೀಡಿರುವ ಬೆಂಬಲವನ್ನು ಮರುಪರಿಶೀಲಿಸಬೇಕಾಗುತ್ತದೆ ಎಂದು ಬಿಎಸ್​ಪಿ ನಾಯಕಿ ಮಾಯಾವತಿ ಕಾಂಗ್ರೆಸ್​ಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ. ಅಲ್ಲದೆ, ಕಾಂಗ್ರೆಸ್​ ಪಕ್ಷವು ಬಿಜೆಪಿಯಂತೆ ವರ್ತಿಸಬಾರದು ಎಂದೂ ಅವರು ತಾಕೀತು ಮಾಡಿದ್ದಾರೆ.

ಕಾಂಗ್ರೆಸ್​ಗೆ ಷರತ್ತು ವಿಧಿಸುವ ಒಕ್ಕಣೆಯುಳ್ಳ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಘೋಷಣೆಗಳನ್ನಷ್ಟೇ ಮಾಡುವುದು ಸಾಲದು. ಆದ್ದರಿಂದಲೇ ಈ ಎಚ್ಚರಿಕೆ ನೀಡುವುದು ಈಗ ಅನಿವಾರ್ಯ. ರಾಜಕೀಯ ಪಕ್ಷಗಳ ಭರವಸೆಗಳು ಕೇವಲ ಕಾಗದಗಳಲ್ಲಿಯೇ ಉಳಿಯಲಿದೆ ಎಂಬ ಮಾತು ಜನಗಳ ಮನಸ್ಸಲ್ಲಿ ಉಳಿದಿದೆ. ಹೀಗಾಗಿ ಕಾಂಗ್ರೆಸ್​ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು. ಈ ಕಲ್ಪನೆಯನ್ನು ಬದಲಾಯಿಸಲು ಕಾಂಗ್ರೆಸ್​ಗೆ ಒಂದೊಳ್ಳೆ ಅವಕಾಶ ಲಭ್ಯವಾಗಿದೆ ಎಂದು ಮಾಯಾವತಿ ಹೇಳಿದ್ದಾರೆ.

ಎಸ್​ಸಿ, ಎಸ್ಟಿ ಕಾನೂನಿನ ಬದಲಾವಣೆ ವಿರೋಧಿಸಿ ದೇಶಾದ್ಯಂತ ದಲಿತ ಸಂಘಟನೆಗಳು ಏಪ್ರಿಲ್​ನಲ್ಲಿ ಭಾರಿ ಹೋರಾಟ ನಡೆಸಿದ್ದವು. ಈ ವೇಳೆ ಹಿಂಸಾಚಾರ ಸಂಭವಿಸಿತ್ತು. ಈ ಹೋರಾಟಕ್ಕೆ ರಾಹುಲ್​ ಗಾಂಧಿ ಟ್ವೀಟ್​ ಮಾಡುವ ಮೂಲಕ ಬೆಂಬಲಿಸಿದ್ದರು. ಮೋದಿ ಸರ್ಕಾರದಿಂದ ರಕ್ಷಣೆ ಕೋರಿ ದಲಿತ ಸಮುದಾಯದ ಸೋದರ ಸೋದರಿಯರು ಇಂದು ಬೀದಿಗಿಳಿದಿದ್ದಾರೆ. ನಾನು ಅವರಿಗೆ ಸಲ್ಯೂಟ್​ ಮಾಡುತ್ತೇನೆ,” ಎಂದು ಹೇಳಿದ್ದರು. ಇದನ್ನೇ ಆಧಾರವಾಗಿಟ್ಟುಕೊಂಡಿರುವ ಮಾಯಾವತಿ ಅವರು, ಆ ಹೋರಾಟದಲ್ಲಿ ಭಾಗಿಯಾಗಿದ್ದ ರಾಜಸ್ಥಾನ, ಮಧ್ಯಪ್ರದೇಶದ ದಲಿತ ಸಮುದಾಯದವರ ಮೇಲಿನ ಪ್ರಕರಣ ಹಿಂಪಡೆಯುವಂತೆ ಅವರು ಕಾಂಗ್ರೆಸ್​ ಮೇಲೆ ಒತ್ತಡ ಹೇರಿದ್ದಾರೆ. ಅದಕ್ಕೆ ಪ್ರತಿಯಾಗಿ ಬೆಂಬಲ ಮರುಪರಿಶೀಲಿಸುವ ಎಚ್ಚರಿಕೆ ನೀಡಿದ್ದಾರೆ.

ಇತ್ತೀಚೆಗೆ ಪಂಚ ರಾಜ್ಯಗಳ ಫಲಿತಾಂಶ ಪ್ರಕಟವಾದಾಗ ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್​ಗೆ ಒಂದೆರಡು ಸ್ಥಾನಗಳ ಅಗತ್ಯ ಎದುರಾಗಿತ್ತು. ಆಗ ಉತ್ತರ ಪ್ರದೇಶದ ಬಿಎಸ್​ಪಿ ಮತ್ತು ಎಸ್​ಪಿ ಪಕ್ಷಗಳು ಕಾಂಗ್ರೆಸ್​ಗೆ ಬೆಂಬಲ ಸೂಚಿಸಿದ್ದವು.