ಜನರ ಬಯಕೆಯಂತೆ ನನ್ನ, ಪಕ್ಷದ ಚಿಹ್ನೆ ಆನೆಗಳ ಪ್ರತಿಮೆ ಸ್ಥಾಪನೆ: ಸುಪ್ರೀಂಗೆ ಮಯಾವತಿ ಅಫಿಡವಿಟ್​

ನವದೆಹಲಿ: ಜನರ ಬಯಕೆಯಂತೆ ಉತ್ತರ ಪ್ರದೇಶ ರಾಜ್ಯಾದ್ಯಂತ ತಮ್ಮ ಪ್ರತಿಮೆಗಳಲ್ಲದೆ, ಬಹುಜನ ಸಮಾಜ ಪಕ್ಷದ ಚಿಹ್ನೆ ಆನೆಗಳ ಪ್ರತಿಮೆಗಳನ್ನು ಸ್ಥಾಪಿಸಿದ್ದಾಗಿ ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಸುಪ್ರೀಂಕೋರ್ಟ್​ಗೆ ಪ್ರಮಾಣಪತ್ರ (ಅಫಿಡವಿಟ್​) ಸಲ್ಲಿಸಿದ್ದಾರೆ.

ತಮ್ಮ ಹಾಗೂ ತಮ್ಮ ಪಕ್ಷದ ಚಿಹ್ನೆಯ ಕಲ್ಲಿನ ಪ್ರತಿಮೆಗಳನ್ನು ಮಾಡಿಸಿ ರಾಜ್ಯಾದ್ಯಂತ ಅಳವಡಿಸಲು ಸಾರ್ವಜನಿಕ ಹಣ ಬಳಕೆ ಮಾಡಲಾಗಿದೆ. ಈ ಮೊತ್ತವನ್ನು ಹಿಂದಿರುಗಿಸುವಂತೆ ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯ್​ ನೇತೃತ್ವದ ಸುಪ್ರೀಂಕೋರ್ಟ್​ ನ್ಯಾಯಪೀಠ ಮಾಯಾವತಿಗೆ ಮೌಖಿಕವಾಗಿ ಸೂಚಿಸಿತ್ತು.

ಉತ್ತರ ಪ್ರದೇಶದ ಸಿಎಂ ಆಗಿದ್ದಾಗ ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ರಾಜ್ಯಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ಹಾಗೂ ತಮ್ಮ ಪಕ್ಷದ ಚಿಹ್ನೆ ಕಲ್ಲಿನ ಮೂರ್ತಿಗಳನ್ನು ನಿಲ್ಲಿಸಿದ್ದರು. ಇದಕ್ಕಾಗಿ ಸರ್ಕಾರದ ಬೊಕ್ಕಸದಿಂದ ಹಣ ಬಳಸಿಕೊಂಡಿದ್ದರು. ಈ ರೀತಿ 52.20 ಕೋಟಿ ರೂಪಾಯಿ ಸಾರ್ವಜನಿಕ ಹಣವನ್ನು ಮಾಯಾವತಿ ಪೋಲು ಮಾಡಿದ್ದಾರೆ. ಆದ್ದರಿಂದ, ಈ ಮೊತ್ತವನ್ನು ಅವರಿಂದ ವಸೂಲಿ ಮಾಡಬೇಕು ಎಂದು ಕೋರಿ ವಕೀಲ ರವಿಕಾಂತ್​ ಸುಪ್ರೀಂಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು. 2009ರಲ್ಲಿ ದಾಖಲಾಗಿದ್ದ ಈ ಅರ್ಜಿಯ ವಿಚಾರಣೆ 10 ವರ್ಷಗಳ ಬಳಿಕವೂ ಇನ್ನೂ ವಿಚಾರಣೆ ಹಂತದಲ್ಲಿದೆ. (ಏಜೆನ್ಸೀಸ್​)