ಹೊಣೆ ಸಮರ್ಥ ನಿರ್ವಹಣೆ

ಕೋಟ: ಎಂಟು ಶಾಸಕರು ಹಾಗೂ ಓರ್ವ ಸಂಸದರನ್ನು ಹೊಂದಿರುವ ಅತಿ ದೊಡ್ಡ ಜಿಲ್ಲೆಯ ಉಸ್ತುವಾರಿ ಹೊಣೆಯನ್ನು ಸರ್ಕಾರ ನನಗೆ ನೀಡಿದೆ. ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ವಿಶ್ವಾಸವಿದೆ.
-ಹೀಗೆಂದವರು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ.

ಮಂಗಳವಾರ ಸಾಲಿಗ್ರಾಮದ ಚೆಂಪಿ ವಿಶ್ವಕರ್ಮ ಸಾಂಸ್ಕೃತಿಕ ಸಭಾಭವನದಲ್ಲಿ ವಿಶ್ವಕರ್ಮ ಯಜ್ಞ ಮಹೋತ್ಸವ ಕಾರ್ಯಕ್ರಮ ಬಳಿಕ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಅವರು ಈ ಪ್ರತಿಕ್ರಿಯೆ ನೀಡಿದರು.
ಅಭಿವೃದ್ಧಿಯಲ್ಲಿ ಬೆಂಗಳೂರಿನ ನಂತರದ ಸ್ಥಾನ ಪಡೆದಿರುವ ಮಂಗಳೂರನ್ನು ಒಳಗೊಂಡ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನನಗೆ ದೊರೆತಿದೆ. ತವರು ಜಿಲ್ಲೆಯ ಉಸ್ತುವಾರಿ ಹೊಣೆಯನ್ನು ರಾಜ್ಯ ಗೃಹ ಸಚಿವರಿಗೆ ನೀಡಿದ್ದಾರೆ. ಅವರ ಕಾರ್ಯವೈಖರಿ ಬಗ್ಗೆ ಯಾರಿಗೂ ಅನುಮಾನ ಬೇಡ. ರಾಜ್ಯದಲ್ಲಿ 16 ಸಚಿವರಿದ್ದು ಆಯಾ ಜಿಲ್ಲೆಗೆ ಅನುಗುಣವಾಗಿ ಉಸ್ತುವಾರಿ ಹೊಣೆ ನೀಡಿದ್ದಾರೆ ಎಂದರು.

ಅಭಿವೃದ್ಧಿ ಸಂಬಂಧ ಭೇಟಿ: ಕೋಟ ಅವರಿಗೆ ಉಡುಪಿ ಜಿಲ್ಲೆ ಉಸ್ತುವಾರಿ ನೀಡದಂತೆ ಜಿಲ್ಲೆಯ ಐವರು ಶಾಸಕರು ಮುಖ್ಯಮಂತ್ರಿಗೆ ಒತ್ತಡ ಹೇರಿದ್ದರೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಜಿಲ್ಲೆಯ ಶಾಸಕರು ತಮ್ಮ ವಿಧಾನಸಭಾ ವ್ಯಾಪ್ತಿಯ ಅಭಿವೃದ್ಧಿ ವಿಚಾರದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚಿಸಿರಬಹುದು. ನನಗೆ ಉಡುಪಿ ಉಸ್ತುವಾರಿ ನೀಡದಂತೆ ಒತ್ತಡ ಹೇರಿದ್ದಾರೆ ಎಂಬ ಆರೋಪದ ಕುರಿತು ಮಾಹಿತಿಯಿಲ್ಲ ಎಂದರು.

 ಜಿಲ್ಲೆಯ ಮರಳು ಸಮಸ್ಯೆ ಬಗೆಹರಿಸಲು ಯಶಸ್ವಿಯಾಗಿದ್ದೇವೆ. ಇನ್ನು ಒಂದು ವಾರದಲ್ಲಿ ಮನೆ ಬಾಗಿಲಿಗೆ ಮರಳು ಬರುತ್ತದೆ. ಇದರ ಬಗ್ಗೆ ಅನುಮಾನವೇ ಬೇಡ.
– ಕೋಟ ಶ್ರೀನಿವಾಸ ಪೂಜಾರಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ 

Leave a Reply

Your email address will not be published. Required fields are marked *