ಏತನೀರಾವರಿ ಯೋಜನೆಗಳಿಗೆ ಮುಕ್ತಿ ಎಂದು?

ಚನ್ನರಾಯಪಟ್ಟಣ:  ತಾಲೂಕಿನ ಬಾಗೂರು, ಹಿರೀಸಾವೆ, ಶ್ರವಣಬೆಳಗೊಳ, ದಂಡಿಗನಹಳ್ಳಿ ಹಾಗೂ ನುಗ್ಗೇಹಳ್ಳಿ ಹೋಬಳಿಗಳಿಗೆ ಸೇರಿದ 7 ಏತನೀರಾವರಿ ಯೋಜನೆಗಳು ಹಲವು ದಶಕಗಳಿಂದ ನನೆಗುದ್ದಿಗೆ ಬಿದ್ದಿವೆ.


ಈ ಯೋಜನೆಗಳು ಪೂರ್ಣಗೊಂಡು ಕೆರೆಗಳಿಗೆ ನೀರು ಹರಿದರೆ ಕಲ್ಪತರು ತಾಲೂಕಿನ ರೈತರ ಬಾಳು ಬಂಗಾರವಾಗುವುದರಲ್ಲಿ ಸಂದೇಹವಿಲ್ಲ. ಆದರೆ, ಕೆಲ ಯೋಜನೆಗಳು ರಾಜಕೀಯ ಸ್ವರೂಪ ಪಡೆದಿರುವುದರಿಂದ ಚುನಾವಣೆಗೆ ಮಾತ್ರ ಸೀಮಿತವಾಗುತ್ತಿವೆ. 2 ಯೋಜನೆಗಳು ಪೂರ್ಣಗೊಂಡಿದ್ದು, ಉದ್ಘಾಟನೆ ಆಗದಿರುವುದರಿಂದ ಯಂತ್ರಗಳು ತುಕ್ಕು ಹಿಡಿದು, ನಾಲೆಗಳು ಮುಚ್ಚುಹೋಗಿವೆ.


ದಂಡಿಗನಹಳ್ಳಿ ಹೋಬಳಿಯ ಕಾಚೇನಹಳ್ಳಿ, ಆಲಗೊಂಡನಹಳ್ಳಿ, ನಾರಾಯಣಪುರ ಏತನೀರಾವರಿ ಯೋಜನೆಗಳು ಸ್ಥಗಿತಗೊಂಡಿವೆ. ನುಗ್ಗೇಹಳ್ಳಿ ಹೋಬಳಿಯ ಏತನೀರಾವರಿಗೆ ಬಾಗೂರು ಸುರಂಗದ ಸಮೀಪ ಪೈಪ್ ಅಳವಡಿಕೆ ಹೊರತುಪಡಿಸಿ ಉಳಿದ ಕಾಮಗಾರಿ ಆಗಿಲ್ಲ. ಹಿರೀಸಾವೆ ಹೋಬಳಿಯ ತೋಟಿ ಹಾಗೂ ಹಿರೀಸಾವೆ ಏತನೀರಾವರಿ ಯೋಜನೆ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿವೆ. ಶ್ರವಣಬೆಳಗೊಳ ಹೋಬಳಿಯ ಜುಟ್ಟನಹಳ್ಳಿ ಏತನೀರಾವರಿ ಯೋಜನೆ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿದೆ.


ಈ ಎಲ್ಲ ಯೋಜನೆಗಳು ಮತ್ತು ಕಾಮಗಾರಿಗಳ ಕುರಿತು ಸಾರ್ವಜನಿಕರು, ರೈತರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಲೌಡ್ ಸ್ಪೀಕರ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಚುನಾವಣೆ ಬಂದಾಗ ನೆನಪು
ದಂಡಿಗನಹಳ್ಳಿ ಹೋಬಳಿ ಕಾಚೇನಹಳ್ಳಿ ಏತನೀರಾವರಿ ಯೋಜನೆ 3 ದಶಕಗಳಿಂದ ಸ್ಥಗಿತಗೊಂಡಿದೆ. ಚುನಾವಣೆ ವೇಳೆ ಕ್ಷೇತ್ರದ ಶಾಸಕರು ಕಾಚೇನಹಳ್ಳಿ ಏತನೀರಾವರಿ ಪ್ರದೇಶಕ್ಕೆ ಭೇಟಿ ನೀಡಿ ಮತ ಪಡೆಯುತ್ತಾರೆ. ಆದರೆ, ನಂತರ ಇತ್ತ ಸುಳಿಯುವುದಿಲ್ಲ. ಅಂತರ್ಜಲ ಸಾವಿರ ಅಡಿಗೆ ಕುಸಿದಿದ್ದು, ಹೋಬಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದೇವೆ.
ಶಶೀಧರ್, ರೈತ

ದ್ರೋಹ ಬಗೆಯುತ್ತಿರುವ ಜನಪ್ರತಿನಿಧಿಗಳು
ಆಲಗೊಂಡನಹಳ್ಳಿ ಹಾಗೂ ನಾರಾಯಣಪುರ ಏತನೀರಾವರಿ ಯೋಜನೆ ಪೂರ್ಣಗೊಂಡಿವೆ. ಆದರೆ, ಉದ್ಘಾಟನೆ ಭಾಗ್ಯ ಕಾಣದ ಹಿನ್ನೆಲೆಯಲ್ಲಿ ನೀರೆತ್ತುವ ಯಂತ್ರಾಗಾರಕ್ಕೆ ಅಳವಡಿಸಿರುವ ಯಂತ್ರಗಳು ತುಕ್ಕು ಹಿಡಯುತ್ತಿವೆ. ಈ ಯೋಜನೆಯನ್ನು ಉನ್ನತೀಕರಣ ಮಾಡಿ 26 ಗ್ರಾಮಗಳಿಗೆ ನೀರು ಹರಿಸುವ ಭರವಸೆ ನೀಡಲಾಗುತ್ತಿದೆ. ರೈತರಿಗೆ ಸವಲತ್ತು ತಲುಪಿಸದೆ, ಇಲ್ಲದ್ದನ್ನು ಮಾಡುವುದಾಗಿ ಹೇಳುವ ಮೂಲಕ ಜನಪ್ರತಿನಿಧಿಗಳು ತೆಂಗು ಬೆಳೆಗಾರರಿಗೆ ದ್ರೋಹ ಮಾಡುತ್ತಿದ್ದಾರೆ.
ಸಿ.ಜಿ.ರವಿ, ತಾಲೂಕು ರೈತ ಸಂಘದ ಅಧ್ಯಕ್ಷ

ರೈತರ ಬಾಳಿಗೆ ಬೆಳಕು ನೀಡಿ
ಹಿರೀಸಾವೆ ಹೋಬಳಿ ತೋಟಿ ಏತನೀರಾವರಿ ಯೋಜನೆ ಹಲವು ದಶಕಗಳಿಂದ ನನೆಗುದ್ದಿಗೆ ಬಿದ್ದಿತ್ತು. ಶಾಸಕ ಸಿ.ಎನ್.ಬಾಲಕೃಷ್ಣ ಶ್ರಮ ವಹಿಸಿದ್ದರಿಂದ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಂದು ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಮಳೆಗಾಲದ ಒಳಗೆ ಕಾಮಗಾರಿ ಮುಕ್ತಾಯ ಮಾಡಿ ಕೆರೆಗಳಿಗೆ ನೀರು ಹರಿಸುವ ಮೂಲಕ ಈ ಭಾಗದ ರೈತರ ಬಾಳಿಗೆ ಬೆಳಕಾಗಬೇಕಿದೆ.
ತುಳಸಿರಾಜ, ರೈತ

ಉದ್ಯೋಗಕ್ಕಾಗಿ ಗುಳೆ ಹೋಗುವ ಸ್ಥಿತಿ
ಹಿರೀಸಾವೆ ಏತನೀರಾವರಿ ಯೋಜನೆಗಾಗಿ ರೈತ ಸಂಘದವರು ತಾಲೂಕು ಕೇಂದ್ರದಿಂದ ವಿಧಾನಸೌಧದವರೆಗೆ ಪಾದಯಾತ್ರೆ ಮಾಡಿದ್ದರು. ಇದರ ಫಲವಾಗಿ ಯೋಜನೆಗೆ ಮರುಜೀವ ಬಂದಿದೆ. ಆದರೂ ದಶಕದಿಂದ ಈ ಯೋಜನೆ ಪೂರ್ಣಗೊಳ್ಳದೆ ಇರುವುದರಿಂದ ನೀರಿಲ್ಲದೆ ತೆಂಗಿನ ಮರಗಳು ಹಾಳಾಗುತ್ತಿವೆ. ಕೆಲ ರೈತರು ಕೃಷಿ ಚಟುವಟಿಕೆ ಬಿಟ್ಟು ಉದ್ಯೋಗ ಅರಸಿ ನಗರ ಪ್ರದೇಶಗಳಿಗೆ ಗುಳೆ ಹೋಗಿದ್ದಾರೆ.
ನಂಜೇಗೌಡ, ರೈತ

ಪರಿಹಾರ ನೀಡಿ ಕಾಮಗಾರಿ ಪೂರ್ಣಗೊಳಿಸಿ
ನುಗ್ಗೇಹಳ್ಳಿ ಏತನೀರಾವರಿ ಯೋಜನೆಯ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ದಶಕದಿಂದ ನಡೆಯುತ್ತಿದೆ. ಕಾಮಗಾರಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಕೃಷಿ ಭೂಮಿಗೆ ಪರಿಹಾರ ನೀಡದೆ ಇರುವುದರಿಂದ ಕೆಲವರು ಪೈಪ್‌ಲೈನ್ ಅಳವಡಿಕೆಗೆ ಅವಕಾಶ ನೀಡಿಲ್ಲ. ಕೂಡಲೆ ತಾಲೂಕು ಹಾಗೂ ಜಿಲ್ಲಾಡಳಿತ ರೈತರ ಕೃಷಿ ಭೂಮಿಗೆ ಪರಿಹಾರ ನೀಡಿ ಪೈಪ್‌ಲೈನ್ ಮೂಲಕ ಕೆರೆಗಳನ್ನು ತುಂಬಿಸಲು ಮುಂದಾಗಬೇಕು.
ಶಂಕರ್, ರೈತ ಮುಖಂಡ

ಜುಟ್ಟನಹಳ್ಳಿ ಭಾಗದಲ್ಲಿ ಅಂತರ್ಜಲ ಕುಸಿತ
ಶ್ರವಣಬೆಳಗೊಳ ಹೋಬಳಿ ಜುಟ್ಟನಹಳ್ಳಿ ಏತನೀರಾವರಿ ಯೋಜನೆಯ ಕಾಮಗಾರಿ ಜನಿವಾರ ಕೆರೆ ಬಳಿ ಚುರುಕಾಗಿ ನಡೆಯಿತು. ರೈತರು ತಮ್ಮ ಭೂಮಿಗೆ ಪರಿಹಾರ ಪಡೆಯದೆ ಪೈಪ್‌ಲೈನ್ ಅಳವಡಿಕೆಗೆ ಅವಕಾಶ ನೀಡಿದ್ದಾರೆ. ಭಾಗದಲ್ಲಿ ಅಂತರ್ಜಲ ಕುಸಿತವಾಗಿದೆ.
ರಾಘವೇಂದ್ರ, ಪ್ರಗತಿಪರ ರೈತ

ಮುಂದಿನ ಮುಂಗಾರಿನೊಳಗೆ ಯೋಜನೆ ಪೂರ್ಣ
ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೇಲೆ ಏತನೀರಾವರಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ತಾಲೂಕಿನಲ್ಲಿ ಸ್ಥಗಿತವಾಗಿರುವ ಏತನೀರಾವರಿ ಯೋಜನೆಗಳ ಬಗ್ಗೆ ಸಿಎಂ ಜತೆ ಚರ್ಚಿಸಿ ಹಣ ಬಿಡುಗಡೆ ಮಾಡಿಸಲಾಗಿದೆ. ಮುಂದಿನ ಮುಂಗಾರಿನೊಳಗೆ ಜುಟ್ಟನಹಳ್ಳಿ ಮತ್ತು ನುಗ್ಗೇಹಳ್ಳಿ ಏತನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು.
ಸಿ.ಎನ್.ಬಾಲಕೃಷ್ಣ, ಶಾಸಕರು

ಸಚಿವರೊಡಗೂಡಿ ಕೆಲಸ ಮಾಡುವೆ
ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಎಂ.ಬಿ.ಪಾಟೀಲ್ ನೀರಾವರಿ ಯೋಜನೆಗೆ ಹೆಚ್ಚು ಮಹತ್ವ ನೀಡಿದ್ದರು. ಪರಿಣಾಮ, ಏತನೀರಾವರಿ ಕಾಮಗಾರಿ ಚುರುಕಾಗಿದ್ದು, ಪೈಪ್‌ಗಳ ಅಳವಡಿಕೆ ನಡೆಯುತ್ತಿದೆ. ಈಗತಾನೆ ನನಗೆ ಸಂಸದೀಯ ಕಾರ್ಯದರ್ಶಿ ಹುದ್ದೆ ದೊರೆತಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಅವರ ಜತೆಗೂಡಿ ಮಲೆನಾಡಿನ ಏತನೀರಾವರಿಗೆ ಹೆಚ್ಚು ಒತ್ತು ನೀಡಲಾಗುವುದು.
ಎಂ.ಎ.ಗೋಪಾಲಸ್ವಾಮಿ, ಎಂಎಲ್‌ಸಿ ಹಾಗೂ ಸಂಸದೀಯ ಕಾರ್ಯದರ್ಶಿ

ಕಾಮಗಾರಿ ಚುರುಕುಗೊಳಿಸಲಾಗಿದೆ
ಆಲಗೊಂಡನಹಳ್ಳಿ ಏತನೀರಾವರಿ ಯೋಜನೆಯನ್ನು ಕಾವೇರಿ ನೀರಾವರಿ ನಿಗಮಕ್ಕೆ ಹಸ್ತಾಂತರ ಮಾಡಲಾಗಿದೆ. ಈಗಾಗಲೇ ಟೆಂಡರ್ ಮಾಡಲಾಗಿದ್ದು, ತಾಂತ್ರಿಕ್ ಬಿಡ್ ತೆರೆಯಲು ಮುಖ್ಯ ಕಚೇರಿಗೆ ಕಳುಹಿಸಲಾಗಿದೆ. ಹಿರೀಸಾವೆ ತೋಟಿ ಸೇರಿ ತಾಲೂಕಿನ ಎಲ್ಲ ಏತನೀರಾವರಿ ಯೋಜನೆಗಳನ್ನು 6 ತಿಂಗಳೊಳಗೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಚುರುಕಾಗಿ ಕಾಮಗಾರಿ ಮಾಡಿಸಲಾಗುತ್ತಿದೆ.
ನಾಗೇಂದ್ರರಾವ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಕಾವೇರಿ ನೀರಾವರಿ ನಿಗಮ

ಕಾಂಗ್ರೆಸ್, ಜೆಡಿಎಸ್ ಜನಪ್ರತಿನಿಧಿಗಳ ವೈಫಲ್ಯ
ಮಲೆನಾಡಿಗೆ ಬರ ಆವರಿಸಿ ದಶಕ ಕಳೆದರೂ ಏತನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ವಿಫಲರಾಗಿದ್ದಾರೆ. ರೈತರಿಗೆ ನೀರು ನೀಡುವುದರಿಂದ ಉತ್ತಮ ಬೆಳೆ ಬೆಳೆದು, ತಮ್ಮ ಹಿಡಿತದಿಂದ ಹೊರಬರುತ್ತಾರೆ ಎಂಬ ದುರುದ್ದೇಶದಿಂದ ಜಿಲ್ಲೆಯ ಶಾಸಕರು ಏತನೀರಾವರಿ ಯೋಜನೆಗಳನ್ನು ಚುನಾವಣಾ ಗಾಳವನ್ನಾಗಿ ಮಾಡಿಕೊಂಡಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾಚೇನಹಳ್ಳಿ ಏತನೀರಾವರಿಗೆ ಹಣ ಬಿಡುಗಡೆ ಮಾಡಿದ್ದರ ಫಲವಾಗಿ 1 ಹಂತ ಮುಕ್ತಾಯವಾಯಿತು. ಆದರೆ, 2 ಮತ್ತು 3ನೇ ಹಂತಕ್ಕೆ ನೀರು ಹರಿಸಲು ಇದುವರೆಗೂ ಸಾಧ್ಯವಾಗಿಲ್ಲ.
ಶಿವನಂಜೇಗೌಡ, ತಾಲೂಕು ಬಿಜೆಪಿ ಅಧ್ಯಕ್ಷ