ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ ಮುಂದುವರಿಕೆ, ಬಜೆಟ್​ ಅಧಿವೇಶನದಲ್ಲೇ ತ್ರಿವಳಿ ತಲಾಕ್​ ಮಸೂದೆ: ಸಂಪುಟ ಸಭೆ ನಿರ್ಧಾರ

ನವದೆಹಲಿ: ತೀವ್ರ ರಾಜಕೀಯ ಬಿಕ್ಕಟ್ಟಿನ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಜಾರಿಗೊಳಿಸಲಾಗಿರುವ ರಾಷ್ಟ್ರಪತಿ ಆಡಳಿತವನ್ನು ಇನ್ನು ಆರು ತಿಂಗಳು ಮುಂದುವರಿಸಲು ಕೇಂದ್ರ ಸಚಿವ ಸಂಪುಟ ಸಭೆ ನಿರ್ಧರಿಸಿದೆ.

ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತ ನಿರ್ಣಯವನ್ನು ಅನುಮೋದಿಸಿದ್ದಾಗಿ ಕೇಂದ್ರ ಸಚಿವ ಪ್ರಕಾಶ್​ ಜಾವ್ಡೇಕರ್​ ತಿಳಿಸಿದ್ದಾರೆ. ಜಮ್ಮು ಕಾಶ್ಮೀರ ಮೀಸಲಾತಿ ಮಸೂದೆ, 2019ಕ್ಕೂ ಕೇಂದ್ರ ಸಂಪುಟ ಸಭೆ ಅನುಮೋದಿದೆ. ಇದರಿಂದಾಗಿ ಜಮ್ಮು ಮತ್ತು ಕಾಶ್ಮೀರವನ್ನು ಹಾದು ಹೋಗಿರುವ ಅಂತಾರಾಷ್ಟ್ರೀಯ ಗಡಿ ಭಾಗದ ನಿವಾಸಿಗಳು ವಿವಿಧ ವೃತ್ತಿಪರ ಕೋರ್ಸ್​ಗಳಿಗೆ ನೇರವಾಗಿ ಪ್ರವೇಶ ಪಡೆಯುವುದರ ಜತೆಗೆ ಸರ್ಕಾರಿ ಉದ್ಯೋಗಳಿಗೂ ನೇರವಾಗಿ ನೇಮಕಾತಿ ಹೊಂದಿ, ಬಡ್ತಿಗಳನ್ನೂ ಪಡೆದುಕೊಳ್ಳಬಹುದಾಗಿದೆ ಎಂದು ವಿವರಿಸಿದರು.

ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ 7 ಸಾವಿರ ಬೋಧಕರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅನುವಾಗುವಂತೆ ಕೇಂದ್ರೀಯ ಶೈಕ್ಷಣಿಕ ಸಂಸ್ಥೆಗಳು (ಬೋಧಕರ ಹುದ್ದೆಗಳಿಗೆ ಮೀಸಲಾತಿ) ಮಸೂದೆ, 2019ಕ್ಕೂ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಿದಾಗಿದೆ ಎಂದು ತಿಳಿಸಿದರು.
ಬಜೆಟ್​ ಅಧಿವೇಶನದಲ್ಲೇ ತ್ರಿವಳಿ ತಲಾಕ್​ ಮಸೂದೆ

ಸದ್ಯದಲ್ಲೇ ಆರಂಭವಾಗಲಿರುವ ಬಜೆಟ್​ ಅಧಿವೇಶನದಲ್ಲೇ ತ್ರಿವಳಿ ತಲಾಕ್​ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲು ನಿರ್ಧರಿಸಲಾಗಿದೆ ಎಂದು ಪ್ರಕಾಶ್​ ಜಾವ್ಡೇಕರ್​ ಹೇಳಿದರು.
ಉತ್ತರ ಪ್ರದೇಶದ ಶಾಮ್ಲಿಯಲ್ಲಿ ಪತ್ರಕರ್ತನ ಮೇಲೆ ಜಿಆರ್​ಪಿ ಪೊಲೀಸರು ಹಲ್ಲೆ ಮಾಡಿದ್ದಲ್ಲದೆ, ಬಾಯಿಗೆ ಮೂತ್ರ ಮಾಡಿದ ಪ್ರಕರಣದ ಕುರಿತು ತಾವು ವರದಿ ಕೇಳಿರುವುದಾಗಿ ತಿಳಿಸಿದರು. (ಏಜೆನ್ಸೀಸ್​)

Leave a Reply

Your email address will not be published. Required fields are marked *