ಭಾರತ ಬೆಳಗಿಸಿದ ದೀಪಾವಳಿ

ಸೈನಿಕರ ಜತೆ ಸಂಭ್ರಮ

ಭೂ ಪ್ರದೇಶದಿಂದ 7,860 ಅಡಿ ಎತ್ತರದಲ್ಲಿರುವ ಚೀನಾ-ಭಾರತ ಗಡಿ ಪ್ರದೇಶ ಹರ್ಷಿಲ್​ನ ಕೊರೆವ ಚಳಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಸೈನಿಕರೊಂದಿಗೆ ದೀಪಾವಳಿ ಆಚರಿಸಿದ್ದು ವಿಶೇಷ. ಇಂಡೋ ಟಿಬೆಟಿಯನ್ ಗಡಿ ಪೊಲೀಸರು ಹಾಗೂ ಸೈನಿಕರಿಗೆ ಸಿಹಿ ಹಂಚಿ ಸಂವಾದ ನಡೆಸಿದ ಅವರು ಮಾಜಿ ಯೋಧರ ಕಲ್ಯಾಣಕ್ಕೆ ರೂಪಿಸಲಾಗಿರುವ ಸರ್ಕಾರದ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಅತ್ತ ಅರುಣಾಚಲ ಪ್ರದೇಶದಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಸೈನಿಕರ ಜತೆ ಹಬ್ಬ ಆಚರಿಸಿಕೊಂಡರು.

ಸಿಹಿ ವಿನಿಮಯ

ದೀಪಾವಳಿ ನಿಮಿತ್ತ ಭಾರತ ಮತ್ತು ಪಾಕಿಸ್ತಾನಿ ಯೋಧರು ಕಾಶ್ಮೀರದ ಪೂಂಚ್ ಜಿಲ್ಲೆಯ ಎಲ್​ಒಸಿ ಬಳಿ ಪರಸ್ಪರ ಸಿಹಿ ವಿನಿಮಯ ಮಾಡಿಕೊಂಡರು.

ಗಿನ್ನೆಸ್ ದಾಖಲೆ

ಅಯೋಧ್ಯೆಯ ಸರಯೂ ನದಿ ದಡದಲ್ಲಿ 3 ಲಕ್ಷ ದೀಪ ಬೆಳಗಿಸುವ ಮೂಲಕ ವಿಶ್ವದಾಖಲೆ ನಿರ್ವಿುಸಲಾಗಿದೆ.


ದಾಖಲೆಯ ದೀಪೋತ್ಸವ

ಚೀನಾ ಗಡಿಯಲ್ಲಿ ಪ್ರಧಾನಿ ಮೋದಿ ದೀಪಾವಳಿ

ಪ್ರಧಾನಿ ನರೇಂದ್ರ ಮೋದಿ ಭಾರತ- ಚೀನಾ ಗಡಿ ಗ್ರಾಮ ಹರಸಿಲ್​ನಲ್ಲಿ ಇಂಡೋ-ಟಿಬೆಟನ್ ಗಡಿ ಪೊಲೀಸರ (ಐಟಿಬಿಪಿ) ಜತೆ ಬುಧವಾರ ದೀಪಾವಳಿ ಆಚರಿಸಿದರು.

ಉತ್ತರಾಖಂಡದ ಗಡಿಯಂಚಿನ ಗ್ರಾಮಕ್ಕೆ ಪ್ರಧಾನಿ ಭೇಟಿ ನೀಡಿದ್ದರಿಂದ ಇಡೀ ಹಳ್ಳಿಯಲ್ಲಿ ಸಂಭ್ರಮ ಮನೆ ಮಾಡಿತ್ತು. ಮೋದಿ ಭೇಟಿಯಾಗಲು ಗ್ರಾಮಸ್ಥರು ಜಮಾಯಿಸಿದ್ದರು. ಸೈನಿಕರು ಮತ್ತು ನಾಗರಿಕರೊಂದಿಗೆ ಬೆರೆತ ಪ್ರಧಾನಿ ಸಿಹಿ ಹಂಚಿ ಸಂಭ್ರಮಿಸಿದರು.

ಪ್ರತಿಕೂಲ ಹವಾಮಾನದಲ್ಲೂ ದೇಶದ ಗಡಿ ಕಾಯುವ ಯೋಧರ ಸೇವೆ ಅನನ್ಯ. ಈ ಅನುಪಮ ಸೇವೆ ದೇಶದ ಶಕ್ತಿಯನ್ನು ಹೆಚ್ಚಿಸಿ, ಭವಿಷ್ಯದ ಗುರಿಯೆಡೆಗೆ ಮುನ್ನಡೆಸಿದೆ. ದೇಶದ 125 ಕೋಟಿ ಜನರ ಕನಸನ್ನು ನನಸು ಮಾಡುತ್ತಿರುವ ವೀರ ಸೈನಿಕರಿಗೆ ದೀಪಾವಳಿಯ ಶುಭಾಶಯ ಎಂದು ಮೋದಿ ಹೇಳಿದರು. ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಲೂ ಪ್ರತಿ ವರ್ಷ ಸೈನಿಕರೊಂದಿಗೆ ದೀಪಾವಳಿ ಆಚರಿಸುತ್ತಿದ್ದರು.

ದೀಪಾವಳಿ ಶುಭಾಶಯ. ಬೆಳಕಿನ ಹಬ್ಬ ಸುಖ- ಸಮೃದ್ಧಿ ತರಲಿ, ಪ್ರತಿಯೊಬ್ಬರೂ ಆರೋಗ್ಯವಂತರಾಗಿ, ಅಭ್ಯುದಯ ಕಾಣುವಂತಾಗಲಿ. ದೇವರ ಕೃಪೆ ಮತ್ತು ಬೆಳಕು ಬದುಕಿನಲ್ಲಿ ಸದಾ ಇರಲಿ

| ಪ್ರಧಾನಿ ನರೇಂದ್ರ ಮೋದಿ (ಟ್ವಿಟರ್ ಸಂದೇಶ)

ಕೇದಾರನಾಥನಿಗೆ ನಮೋ

ಪ್ರಸಿದ್ಧ ಧಾರ್ವಿುಕ ಕ್ಷೇತ್ರ ಕೇದಾರನಾಥಕ್ಕೆ ಭೇಟಿ ನೀಡಿದ ಮೋದಿ, ಕೇದಾರಲಿಂಗದ ದರ್ಶನ ಮಾಡಿದರು. ನಂತರ ಕೇದಾರಪುರಿಯಲ್ಲಿನ ಅಭಿವೃದ್ಧಿ ಕಾರ್ಯವನ್ನು ಪರಿಶೀಲಿಸಿದರು. ಮೋದಿ ಪ್ರಧಾನಿಯಾದ ನಂತರ 10ನೇ ಬಾರಿ ಕೇದಾರಕ್ಕೆ ಭೇಟಿ ನೀಡಿದ್ದಾರೆ.

ಶ್ರೀರಾಮನ ಪ್ರತಿಮೆ

ನಿರೀಕ್ಷೆಯಂತೆ ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ಪ್ರತಿಮೆ ನಿರ್ಮಾಣ ಮಾಡುವುದಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಬುಧವಾರ ಘೋಷಿಸಿದ್ದಾರೆ. ಈ ಪ್ರತಿಮೆ ಐತಿಹಾಸಿಕ ನಗರದ ಲಾಂಛನವಾಗಿ ಪ್ರವಾಸಿಗರನ್ನು ಸೆಳೆಯಲಿದೆ. ಅಯೋಧ್ಯೆಯಲ್ಲಿ ಈ ಹಿಂದೆ ಶ್ರೀರಾಮನ ಮಂದಿರವಿತ್ತು. ಮುಂದೆಯೂ ಇರಲಿದೆ. ಈ ಮಂದಿರ ಸಂವಿಧಾನ ಬದ್ಧವಾಗಿ ನಿರ್ಮಾಣ ಆಗಲಿದೆ ಎಂದು ಅವರು ಹೇಳಿದರು. ಪ್ರತಿಮೆ ನಿರ್ವಣಕ್ಕೆ ಸ್ಥಳ ಗುರುತಿಸಿ ಭೂ ಸ್ವಾಧೀನ ಮಾಡಿಕೊಳ್ಳಬೇಕಿದೆ. ನಿರ್ವಣಕ್ಕೆ ಭಾಗಶಃ ಆರ್ಥಿಕ ಸಂಪನ್ಮೂಲವನ್ನು ಸಾರ್ವಜನಿಕ ದೇಣಿಗೆಯಿಂದ ಸಂಗ್ರಹಿಸಲಾಗುವುದು ಎಂದರು.

3 ಲಕ್ಷಕ್ಕೂ ಅಧಿಕ ದೀಪ ಬೆಳಗಿದ ಜನರು

ಅಯೋಧ್ಯೆಯ ಸರಯೂ ನದಿ ದಡದಲ್ಲಿ ದೀಪಾವಳಿಯನ್ನು ವಿಶೇಷವಾಗಿ ಆಚರಿಸಲಾಯಿತು. ಶ್ರೀರಾಮ ಹುಟ್ಟಿದ ಊರಿನಲ್ಲಿ ಮೂರು ಲಕ್ಷಕ್ಕೂ ಹೆಚ್ಚು ದೀಪಗಳನ್ನು ಮಂಗಳವಾರ ಸಂಜೆ ಬೆಳಗಿಸಲಾಗಿದೆ. ಈ ದೀಪೋತ್ಸವ ಗಿನ್ನೆಸ್ ವಿಶ್ವದಾಖಲೆಗೂ ಸೇರಿದೆ. 3,01,152 ದೀಪಗಳು ಐದು ನಿಮಿಷ ಬೆಳಗಿರುವುದು ಹೊಸ ದಾಖಲೆ ಎಂದು ಗಿನ್ನೆಸ್ ವಿಶ್ವದಾಖಲೆಯ ವೀಕ್ಷಕ ರಿಷಿನಾಥ್ ಹೇಳಿದ್ದಾರೆ. ನದಿ ದಂಡೆಯ ರಾಮ್ ಕಿ ಪೌಡಿಯ ಎರಡೂ ಘಾಟ್​ಗಳಲ್ಲಿ 3.35 ಲಕ್ಷ ಹಣತೆಗಳನ್ನು ಹಚ್ಚುವ ಉದ್ದೇಶ ಇತ್ತು, ಆದರೆ, ಇದು ಸಾಧ್ಯವಾಗಲಿಲ್ಲ. ಆದರೂ ವಿಶ್ವದಾಖಲೆ ನಿರ್ವಣವಾಗಿದೆ. 2016ರಲ್ಲಿ 1,50,009 ಹಣತೆಗಳನ್ನು ಏಕಕಾಲಕ್ಕೆ ಬೆಳಗಿಸಿದ್ದು ಈವರೆಗಿನ ವಿಶ್ವದಾಖಲೆಯಾಗಿತ್ತು ಎಂದು ರಿಷಿನಾಥ್ ತಿಳಿಸಿದ್ದಾರೆ. ಈ ದೀಪೋತ್ಸವದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜೇ ಇನ್ ಪತ್ನಿ ಕಿಮ್ ಜಾಂಗ್ ಸೂಕ್ ಭಾಗವಹಿಸಿದ್ದರು.

ರಾಜ ದಶರಥ ವೈದ್ಯಕೀಯ ಕಾಲೇಜು

ಶ್ರೀರಾಮನ ತಂದೆ ದಶರಥ ಮಹಾರಾಜನ ಹೆಸರಿನಲ್ಲಿ ‘ರಾಜ ದಶರಥ್’ ವೈದ್ಯಕೀಯ ಕಾಲೇಜು ಮತ್ತು ಶ್ರೀರಾಮನ ಹೆಸರಿನಲ್ಲಿ ವಿಮಾನ ನಿಲ್ದಾಣವನ್ನು ಅಯೋಧ್ಯೆಯಲ್ಲಿ ನಿರ್ವಿುಸಲಾಗುವುದು ಎಂದು ಯೋಗಿ ಹೇಳಿದರು.

ಫೈಜಾಬಾದ್ ಇನ್ನು ಅಯೋಧ್ಯೆ

ಉತ್ತರ ಪ್ರದೇಶದ ಫೈಜಾಬಾದ್ ಜಿಲ್ಲೆಗೆ ಅಯೋಧ್ಯೆ ಎಂದು ಮರುನಾಮಕರಣ ಮಾಡಲಾಗಿದೆ. ಫೈಜಾಬಾದ್ ಮತ್ತು ಅಯೋಧ್ಯೆ ಅವಳಿ ನಗರಗಳಾಗಿದ್ದು, ಎರಡೂ ನಗರಗಳಿಗೆ ಒಂದೇ ಮಹಾನಗರ ಪಾಲಿಕೆ ಇದೆ. ಜಿಲ್ಲಾ ಕೇಂದ್ರವಾದ ಫೈಜಾಬಾದ್ ಹೆಸರೇ ಜಿಲ್ಲೆಗೂ ಇತ್ತು. ಈಗ ಇದನ್ನು ಅಯೋಧ್ಯೆ ಜಿಲ್ಲೆ ಎಂದು ಸಿಎಂ ಯೋಗಿ ಆದಿತ್ಯನಾಥ ಮಂಗಳವಾರ ಮರುನಾಮಕಾರಣ ಮಾಡಿದ್ದಾರೆ.

ಕರ್ಣಾವತಿ ಆಗಲಿದೆ ಅಹಮದಾಬಾದ್!

ಗುಜರಾತ್​ನ ಅಹಮದಾಬಾದ್ ನಗರಕ್ಕೆ ಕರ್ಣಾವತಿ ಎಂದು ಮರುನಾಮಕರಣ ಮಾಡಲು ಸಿದ್ಧ ಎಂದು ಗುಜರಾತ್ ಸರ್ಕಾರ ಹೇಳಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ನಿತಿನ್ ಪಟೇಲ್, ಕಾನೂನಾತ್ಮಕವಾಗಿ ಅಡಚಣೆ ಇಲ್ಲದಿದ್ದರೆ, ಜನಬೆಂಬಲ ದೊರೆತರೆ ಅಹಮದಾಬಾದ್​ಗೆ ಕರ್ಣಾವತಿ ಎಂದು ಮರುನಾಮಕರಣ ಮಾಡಲು ಸಿದ್ಧ ಎಂದಿದ್ದಾರೆ. ಅಹಮದಾಬಾದ್ 11ನೇ ಶತಮಾನದ ನಗರ. ಸಬರಮತಿ ನದಿ ದಂಡೆಯ ಈ ನಗರವನ್ನು ಆಶವಾಲ್ ಎಂದು ಕರೆಯಲಾಗುತ್ತಿತ್ತು. ಚಾಲುಕ್ಯ ಸಾಮ್ರಾಜ್ಯದ ಅನ್ಹಿಲ್ವಾರಾ ಪ್ರಾಂತ್ಯದ ಪಾಳೇಗಾರ ಕರ್ಣ, ಆಶವಾಲ್​ನ ರಾಜ ಭಿಲ್​ನನ್ನು ಸೋಲಿಸಿದ. ಹೀಗಾಗಿ ಆಶವಾಲ್ ಪಟ್ಟಣಕ್ಕೆ ಕರ್ಣಾವತಿ ಎಂದು ಕರೆಯಲಾಗುತ್ತಿತ್ತು. ಕ್ರಿ.ಶ. 1411ರಲ್ಲಿ ಸುಲ್ತಾನ್ ಅಹ್ಮದ್ ಶಾ ಕರ್ಣಾವತಿಯನ್ನು ವಶ ಪಡಿಸಿಕೊಂಡು, ಅಹಮದಾಬಾದ್ ಎಂದು ಹೆಸರಿಟ್ಟಿದ್ದ.

ಭಾರತದ ಸುರಿರತ್ನಾ ಕೊರಿಯಾ ರಾಣಿ!

ಭಾರತ ಹಾಗೂ ಕೊರಿಯಾದ 2 ಸಾವಿರ ವರ್ಷಗಳ ಹಿಂದಿನ ನೆನಪನ್ನು ಇನ್ನಷ್ಟು ಗಟ್ಟಿ ಮಾಡಲು ದಕ್ಷಿಣ ಕೊರಿಯಾದ ಪ್ರಥಮ ಮಹಿಳೆ ಕಿಮ್ ಜಾಂಗ್ ಸೂಕ್ ಅಯೋಧ್ಯೆ ದೀಪೋತ್ಸವದಲ್ಲಿ ಭಾಗಿಯಾಗಿದ್ದರು. ಅಯೋಧ್ಯೆ ಮೂಲದ ಸುರಿರತ್ನಾ ಎನ್ನುವವರು ಸುಮಾರು 2 ಸಾವಿರ ವರ್ಷಗಳ ಹಿಂದೆ ಕೊರಿಯಾದ ರಾಜನನ್ನು ಮದುವೆಯಾಗಿದ್ದರಂತೆ. ಆ ಬಳಿಕ ರಾಣಿಯಾಗಿ ಅಧಿಕಾರ ನಡೆಸಿದ ಈಕೆಯ ಹೆಸರು ಹಿ ಹ್ವಾಂಗ್-ಓಕೆ ಎಂದು ಮರುನಾಮಕಾರಣವಾಗಿತ್ತು. ಕೊರಿಯಾದ ಕರಕ್ ವಂಶದ ಕಿಮ್ ಸುರೊ ಅವರನ್ನು ಸುರಿರತ್ನಾ ಮದುವೆಯಾಗಿದ್ದರು. ಆಕೆಗೆ ನಾಲ್ವರು ಪುತ್ರರಿದ್ದು ಸುಮಾರು 150 ವರ್ಷಗಳ ಕಾಲ ಬದುಕಿದ್ದರು ಎಂದು ಕಥೆಗಳಿವೆ. ಅಯೋಧ್ಯೆ ಹಾಗೂ ದಕ್ಷಿಣ ಕೊರಿಯಾ ನಡುವಿನ ನಂಟು 2000-01ನೇ ಇಸ್ವಿಯಲ್ಲಿ ಬಹಿರಂಗವಾಗಿತ್ತು. ಭಾರತ ಹಾಗೂ ದಕ್ಷಿಣ ಕೊರಿಯಾ ಸಂಬಂಧ ವೃದ್ಧಿಗೆ ಈ ರಾಣಿಯನ್ನೇ ಮಾಧ್ಯಮವಾಗಿರಿಸಿಕೊಳ್ಳಲಾಗಿದೆ. ಅಯೋಧ್ಯೆಯ ಸರಯೂ ನದಿ ತಟದಲ್ಲಿ ಸುರಿರತ್ನಾ ಅವರ ವಸ್ತು ಸಂಗ್ರಹಾಲಯ ನಿರ್ವಿುಸಲಾಗುತ್ತಿದೆ. ಇದರ ಜತೆಗೆ ಕರಕ್ ವಂಶದ ನೂರಾರು ಮಂದಿ ಪ್ರತಿ ದೀಪಾವಳಿ ಸಂದರ್ಭದಲ್ಲಿ ಅಯೋಧ್ಯೆಗೆ ಬಂದು ದೀಪೋತ್ಸವದಲ್ಲಿ ಭಾಗಿಯಾಗುತ್ತಾರೆ. ಅಂದಹಾಗೆ ದಕ್ಷಿಣ ಕೊರಿಯಾ ಸರ್ಕಾರದಲ್ಲೂ ಈ ವಂಶ ಮಹತ್ವದ ಪಾತ್ರ ವಹಿಸಿದ್ದು ಪ್ರಧಾನಿ ಹಾಗೂ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.