More

  ಚನ್ನಪಟ್ಟಣದಲ್ಲಿ ಚಕ್ರವ್ಯೂಹ ಭೇದಿಸುವರೆ ಡಿಕೆಶಿ

  * ರಾಜಕೀಯದ ಕೇಂದ್ರ ಬಿಂದು ಬೊಂಬೆನಾಡು ಚನ್ನಪಟ್ಟಣ
  * ಯುದ್ಧ ಘೋಷಣೆಗೂ ಮುನ್ನವೇ ಶಸ್ತ್ರಾಭ್ಯಾಸ
  * ಚನ್ನಪಟ್ಟಣ ಡಿಕೆಶಿಗೆ ಕಬ್ಬಿಣದ ಕಡಲೆ
  * ಮತಗಳ ಕ್ರೋಡೀಕರಣಕ್ಕೆ ಮುಂದಾದ ಕೈ

  ಗಂಗಾಧರ್ ಬೈರಾಪಟ್ಟಣ ರಾಮನಗರ

  ಚನ್ನಪಟ್ಟಣ ಈಗ ರಾಜಕೀಯದ ಕೇಂದ್ರ ಬಿಂದುವಾಗಿದೆ. ಬುಧವಾರ ಡಿಸಿಎಂ ಡಿ.ಕೆ.ಶಿವಕುಮಾರ್ ನಡೆಸಿದ ಸಂಚಾರ ಕ್ಷೇತ್ರದ ರಾಜಕೀಯ ಚಿತ್ರಣವನ್ನೇ ಮತ್ತೊಂದು ದಿಕ್ಕಿಗೆ ಕೊಂಡೊಯ್ಯುವ ಮುನ್ಸೂಚನೆ ನೀಡಿದೆ.
  ಎಚ್.ಡಿ.ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಕ್ಷೇತ್ರದಲ್ಲಿ ಉಪಚುನಾವಣೆ ಎದುರಾಗಲಿದ್ದು, ಯುದ್ಧ ಘೋಷಣೆಗೂ ಮುನ್ನವೇ ಡಿ.ಕೆ.ಶಿವಕುಮಾರ್ ಶಸ್ತ್ರಾಭ್ಯಾಸಕ್ಕೆ ಇಳಿದಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

  ಚಕ್ರವ್ಯೂಹ

  ಡಿ.ಕೆ.ಶಿವಕುಮಾರ್ ಅವರ ಪಾಲಿಗೆ ಚನ್ನಪಟ್ಟಣದಲ್ಲಿ ಎದುರಾಗುವ ಉಪಚುಣಾವಣೆ ಕುರುಕ್ಷೇತ್ರದ ಯುದ್ಧದ ಚಕ್ರವ್ಯೂಹ ಭೇದಿಸುವ ಸವಾಲನ್ನು ಮುಂದಿಟ್ಟಿದೆ. ಕಾರಣ, ಚನ್ನಪಟ್ಟಣ ಹಿಂದೆ ಡಿ.ಕೆ.ಶಿವಕುಮಾರ್ ಅವರ ಹಿಡಿತದಲ್ಲಿಯೇ ಇದ್ದ ಕ್ಷೇತ್ರ. ಜತೆಗೆ ಅವರ ತವರು ಜಿಲ್ಲೆ. ಈ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ಮುಂದಿನ ವಿಧಾನಸಭೆ ಉಪಚುನಾವಣೆ ಬಹಳ ಪ್ರಮುಖವಾದುದು. ಆದರೆ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮತ್ತು ಬಿಜೆಪಿಯ ಸಿ.ಪಿ.ಯೋಗೇಶ್ವರ್ ಅವರು ಹೆಣೆಯುವ ಚಕ್ರವ್ಯೆಹವನ್ನು ಇವರು ಭೇದಿಸಲೇಬೇಕಿದೆ. ಇಲ್ಲವಾದರೆ ಡಿಕೆಶಿ ಮಹಾತ್ವಾಕಾಂಕ್ಷೆಗೆ ಹಿನ್ನಡೆಯಾಗಲಿದೆ.

  ಭೇದಿಸುವರೇ?:

  ಚನ್ನಪಟ್ಟಣದಲ್ಲಿ ಚಕ್ರವ್ಯೂಹ ಭೇದಿಸುವರೆ ಡಿಕೆಶಿ
  ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಡಿ.ಕೆ.ಶಿವಕುಮಾರ್ ಅವರಿಗೆ ಚನ್ನಪಟ್ಟಣ ಕ್ಷೇತ್ರ ಕಬ್ಬಿಣದ ಕಡಲೆಯಾಗಿದೆ. ಹಿಂದಿನ ವಿಧಾನಸಭೆ ಉಪಚುನಾವಣೆಗಳು ಆಡಳಿತ ಪಕ್ಷಕ್ಕೆ ಒಲಿದಿರುವ ಸಾಕಷ್ಟು ಉದಾಹರಣೆಗಳು ಇವೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದರೂ ಚನ್ನಪಟ್ಟಣವನ್ನು ಅಷ್ಟು ಸುಲಭಕ್ಕೆ ಕೈ ವಶ ಮಾಡಿಕೊಳ್ಳಲಾಗದು. ಇದರ ಅಂದಾಜು ಡಿ.ಕೆ.ಶಿವಕುಮಾರ್ ಅವರಿಗೆ ಇರುವುದರಿಂದಲೇ ಚುನಾವಣೆ ಘೋಷಣೆಗೂ ಮುನ್ನವೇ ಮತಗಳ ಕ್ರೋಡೀಕರಣಕ್ಕೆ ಕೈ ಹಾಕಿದ್ದಾರೆ.

  ಮುಖ್ಯಮಂತ್ರಿ ಸ್ಥಾನಕ್ಕಾಗಿ ಅಧಿಕಾರಯುತವಾಗಿ ಹಕ್ಕು ಚಲಾವಣೆ ಮಾಡಲೇಬೇಕಿದ್ದರೆ ಚನ್ನಪಟ್ಟಣವನ್ನು ಗೆಲ್ಲಲೇಬೇಕು. ಗೆಲುವು ಸಾಧ್ಯವಾಗಬೇಕಾದರೆ ಎಚ್.ಡಿ.ಕುಮಾರಸ್ವಾಮಿ – ಯೋಗೇಶ್ವರ್ ಜೋಡಿಗೆ ನೀರು ಕುಡಿಸಲೇಬೇಕಿದೆ. ಇದರ ಜತೆಗೆ ಆಂತರಿಕ ಶತ್ರುಗಳನ್ನು ಎದುರಿಸಬೇಕಿದೆ. ಆದರೆ, ಇದರಲ್ಲಿ ಎಷ್ಟು ಸಫಲರಾಗಲಿದ್ದಾರೆ ಎನ್ನುವುದು ಈಗ ಪ್ರಶ್ನೆಯಾಗಿದೆ.

  See also  ಸ್ವಯಂ ಉದ್ಯೋಗದಿಂದ ಆರ್ಥಿಕ ಸಧೃಡ

  ಅಡ್ಡಗೋಡೆ ಮೇಲೆ ದೀಪ:

  ಸಹೋದರ ಡಿ.ಕೆ.ಸುರೇಶ್ ಬೆಂಗಳೂರು ಗ್ರಾಮಾಂತರ ಲೋಕಸಭೆ ಮಹಾ ಸಮರದಲ್ಲಿ ಭಾರಿ ಅಂತರದಿಂದ ಸೋಲುಕಂಡಿದ್ದಾರೆ. ಇದು ಸ್ವತಃ ಡಿ.ಕೆ.ಶಿವಕುಮಾರ್ ಅವರಿಗೆ ನುಂಗಲಾರದ ತುತ್ತಾಗಿದೆ. ಈ ಹಿನ್ನೆಲೆಯಲ್ಲಿ ಚನ್ನಪಟ್ಟಣದಿಂದ ಡಿ.ಕೆ.ಶಿವಕುಮಾರ್ ಅವರೇ ಸ್ಪರ್ಧೆ ಮಾಡುತ್ತಾರೆ ಎನ್ನುವ ಸುದ್ದಿ ಕಾಂಗ್ರೆಸ್ ವಲಯದಲ್ಲಿ ವ್ಯಾಪಕವಾಗಿ ಕೇಳಿ ಬಂದಿದೆ. ಇದರ ಬಗ್ಗೆ ಡಿಕೆಶಿ ಸ್ಪಷ್ಟ ಉತ್ತರ ನೀಡಿಲ್ಲವಾದರೂ ಸ್ಪರ್ಧೆ ವಿಚಾರವನ್ನು ನಿರಾಕರಿಸಿಲ್ಲ.
  ಆದರೆ ಡಿಕೆಶಿಯನ್ನು ಹತ್ತಿರದಿಂದ ಬಲ್ಲವರು ಹೇಳುವ ಮಾತೇ ಬೇರೆ. ಅವರು ಚನ್ನಪಟ್ಟಣದಿಂದ ಸ್ಪರ್ಧೆ ಮಾಡುವುದು ದೂರದ ಮಾತು. ಒಂದು ವೇಳೆ ಚನ್ನಪಟ್ಟಣವನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಹೊರಟರೆ, ಕನಕಪುರದ ಹಿಡಿತ ತಪ್ಪಲಿದೆ. ಈ ಹಿನ್ನೆಲೆಯಲ್ಲಿ ಚನ್ನಪಟ್ಟಣದಲ್ಲಿ ಪಕ್ಷ ಸಂಘಟನೆಯನ್ನು ಬಲಗೊಳಿಸಿದರೆ ಅಭ್ಯರ್ಥಿ ಯಾರೇ ಆದರೂ ಅವರನ್ನು ಗೆಲ್ಲಿಸಿಕೊಂಡು ಬರಬಹುದು ಎನ್ನುವ ಲೆಕ್ಕಾಚಾರ ಇರಬಹುದು ಎನ್ನುತ್ತಾರೆ.

  ಚೆಕ್‌ಮೇಟ್ ನೀಡುವರೇ?

  ಮಂಡ್ಯದಲ್ಲಿ ಲೋಕಸಭೆ ಗೆಲ್ಲುವ ಮೂಲಕ, ಸಕ್ಕರೆ ನಾಡಿನಲ್ಲಿ ಗುಟುರು ಹಾಕುತ್ತಿದ್ದ ಕಾಂಗ್ರೆಸ್ ನಾಯಕರಿಗೆ ಎಚ್.ಡಿ.ಕುಮಾರಸ್ವಾಮಿ ಸೋಲಿನ ರುಚಿ ತೋರಿಸಿದ್ದಾರೆ. ಜತೆಗೆ ಕೇಂದ್ರದ ಮಂತ್ರಿ ಸ್ಥಾನವೂ ಲಭಿಸಿರುವ ಕಾರಣ ಚನ್ನಪಟ್ಟಣದಲ್ಲಿ ಇವರೂ ಸೋಲನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಲೋಕ ಸಮರದಲ್ಲಿ ಕಾಂಗ್ರೆಸ್ ನಿರೀಕ್ಷೆಗೂ ಮೀರಿದ ಮತಗಳನ್ನು ಚನ್ನಪಟ್ಟಣದಲ್ಲಿ ಪಡೆದುಕೊಂಡಿರುವುದು ಯೋಗೇಶ್ವರ್ ಮತ್ತು ಎಚ್‌ಡಿಕೆಗೆ ಹೊಸ ಸವಾಲನ್ನು ತಂದೊಡ್ಡಿದೆ. ಒಂದು ವೇಳೆ ಡಿ.ಕೆ.ಶಿವಕುಮಾರ್ ಅವರ ಎಲ್ಲ ಯೋಜನೆಗಳು ಚನ್ನಪಟ್ಟಣದಲ್ಲಿ ಕಾರ್ಯಗತಗೊಂಡರೆ ಖಂಡಿತವಾಗಿ ಮೈತ್ರಿ ಅಭ್ಯರ್ಥಿ ಸೋಲು ಕಾಣಲಿದ್ದಾರೆ. ಇದಕ್ಕೆ ಅವಕಾಶವಾಗದಂತೆ ಈಗಲೇ ಮೈತ್ರಿ ಪಕ್ಷಗಳು ಕಾರ್ಯಪ್ರವೃತ್ತರಾದರೆ ಮಾತ್ರ ಕಾಂಗ್ರೆಸ್ ದಾಳಕ್ಕೆ ಚೆಕ್ ಮೇಟ್ ನೀಡಬಹುದು.

  ಸಿದ್ಧಗೊಂಡಿದೆ ಪಟ್ಟಿ

  ಕ್ಷೇತ್ರದಲ್ಲಿ ಡಿ.ಕೆ.ಶಿವಕುಮಾರ್ ಅವರ ಬುಧವಾರದ ಅಬ್ಬರ ಎದುರಾಳಿಗಳಲ್ಲಿ ಕೊಂಚ ನಡುಕ ಹುಟ್ಟಿಸಿದೆ. ಇದರ ಜತೆಗೆ ಡಿ.ಕೆ.ಶಿವಕುಮಾರ್ ಈಗಾಗಲೇ ಬಿಜೆಪಿ – ಜೆಡಿಎಸ್‌ನ ಸ್ಥಳೀಯ ಮುಖಂಡರ ದೊಡ್ಡ ಪಟ್ಟಿಯನ್ನೇ ಸಿದ್ಧಪಡಿಸಿಕೊಂಡಿದ್ದು, ಹಂತ ಹಂತವಾಗಿ ಆಪರೇಷನ್ ಮೂಲಕ ಕೈ ಪಕ್ಷಕ್ಕೆ ಸೆಳೆದುಕೊಳ್ಳುವುದು ನಿಶ್ಚಿತ. ಕಳೆದ ಲೋಕಸಭೆ ಚುನಾವಣೆ ವೇಳೆ ವ್ಯವಹಾರ ಕುದುರಿಸಿದ್ದರೂ ಕೈ ಪಾಳಯಕ್ಕೆ ಜಿಗಿಯದ ಹಲವು ಮುಖಂಡರೇ ಉಪಚುನಾವಣೆ ವೇಳೆಗೆ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎನ್ನುವ ಮಾತುಗಳು ಚನ್ನಪಟ್ಟಣದಲ್ಲಿ ಕೇಳಿ ಬರುತ್ತಿವೆ.

  See also  ಪದವಿಪೂರ್ವ ಶಿಕ್ಷಣ ಇಲಾಖೆಯ ಅಸ್ಮಿತೆ ಕಾಪಾಡಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts